ಅಂಕೋಲಾ: ತಾಲೂಕಿನ ಮಂಜಗುಣಿ ಗ್ರಾಮದ 500 ಮೀಟರ್ ಉದ್ದದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿಂದ ಹಾದುಹೋಗುವ ಸಾರಿಗೆ ಸಂಸ್ಥೆಯ ಬಸ್‌ನವರು ಪ್ರಯಾಸಪಡಬೇಕಾಗಿತ್ತು. ರಸ್ತೆಯ ದುರ್ವ್ಯವಸ್ಥೆಗೆ ಬೇಸತ್ತ ವಾಹನ ಚಾಲಕರು ಬಸ್ ತರುವುದಕ್ಕೂ ತಕರಾರು ತೆಗೆಯುತ್ತಿದ್ದರು. ಆದರೆ ಈಗ ಈ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ಮಂಜೂರಿಯಾಗಿದೆ.
ಮಂಜಗುಣಿ ಗ್ರಾಮದಲ್ಲಿ ಸಾವಿರಾರು ಜನಸಂಖ್ಯೆಯಿದೆ. ಇನ್ನು ಪ್ರೌಢಶಾಲೆಯು ಮಂಜಗುಣಿಯ ಕೊನೆಯ ಅಂಚಿನಲ್ಲಿರುವುದರಿoದ ಸ್ಥಳೀಯ ವಿದ್ಯಾರ್ಥಿಗಳು ಬಸ್ ಮೂಲಕವೇ ಸಂಚರಿಸಬೇಕಾಗಿತ್ತು. ಆದರೆ ಸುಮಾರು ೫೦೦ ಮೀಟರ್ ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಮಳೆಗಾಲದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಗುತ್ತಿತ್ತು. ಬಸ್‌ನಲ್ಲಿ ಏನೇ ಸಮಸ್ಯೆ ಉಂಟಾದರೂ ಚಾಲಕರೇ ಹೊಣೆಗಾರರಾಗುವುದರಿಂದ ರಸ್ತೆ ಸರಿಯಾಗುವವರೆಗೂ ಮಂಜಗುಣಿಯ ತಾರಿವರೆಗೂ ಬಂದು ಮುಂದೆ ಹೋಗುವುದಿಲ್ಲ ಎಂದು ಡಿಪೋ ವ್ಯವಸ್ಥಾಪಕರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಸ್ಥಳೀಯ ಗ್ರಾ.ಪಂ. ಸದಸ್ಯ ವೆಂಕಟರಮಣ ಕೋನಪ್ಪ ನಾಯ್ಕ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚಿಸಿ ಬಸ್ ಬಂದ್ ಮಾಡುವ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ತಕ್ಷಣ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಿ ನಂತರ ಹೊಸ ರಸ್ತೆ ನಿರ್ಮಿಸಿ ಎಂದು ಪದೇ ಪದೇ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಶಿಕಾಂತ ಕೋಳೆಕರ ಮಾತನಾಡಿ, ವಾರದ ಒಳಗಾಗಿ ಮಳೆ ನಿಂತ ತಕ್ಷಣ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಲಾಗುವುದು. ಹಾಗೇ ಪ್ರಕೃತಿ ವಿಕೋಪದಡಿಯಲ್ಲಿ ೫೦ ಲಕ್ಷ ರೂ. ಮಂಜೂರಿಯಾಗಿದ್ದು, ಕಾಂಕ್ರೀಟೀಕರಣವಾಗದ ೫೦೦ ಮೀಟರ್ ರಸ್ತೆಯು ಪೂರ್ಣಗೊಳ್ಳಲಿದೆ. ಟೆಂಡರ್ ಹಂತದಲ್ಲಿದ್ದು, ಅಕ್ಟೋಬರ್ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಮಂಜಗುಣಿ ಲೋಕೋಪಯೋಗಿ ಇಲಾಖೆಯ ಅಭಿಯಂತರ ಸಂತೋಷ ಡಿಸೋಜಾ, ಸುಧೀರ ನಾಯ್ಕ ಸೇರಿದಂತೆ ಇತರರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ