ಚಲನಚಿತ್ರ ಶೂಟಿಂಗಿಗೆ ಬಂದಿದ್ದವರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಅಸ್ವಸ್ಥ

ಮಾನವೀಯತೆ ನೆರವು ನೀಡಿದ ಆಂಬುಲೆನ್ಸ್ ಮತ್ತು ರಿಕ್ಷಾ ಮಾಲಕರು

ಅಂಕೋಲಾ: ಹೆಜ್ಜೇನು ದಾಳಿಯಿಂದಾಗಿ ಇಬ್ಬರು ತೀವ್ರವಾಗಿ ಅಸ್ವಸ್ಥಗೊಂಡು,ಆಸ್ಪತ್ರೆಗೆ ದಾಖಲಾದ ಘಟನೆ ಅಂಕೋಲಾದಲ್ಲಿ ನಡೆದಿದೆ. ತಾಲೂಕಿನಲ್ಲಿ ಚಿತ್ರೀಕರಣವಾಗುತ್ತಿರುವ ಚಲನಚಿತ್ರ ಒಂದರ ಲೈಟಿಂಗ್ ಸಹಾಯಕರು ಎನ್ನಲಾದ ಮಂಡ್ಯದ ರಮೇಶ  ಹಾಗೂ ರಾಮು ಎಂಬಿಬ್ಬರು ವ್ಯಕ್ತಿಗಳು, ಅಂಕೋಲಾದಿಂದ ಕುಮಟಾ ಕಡೆ ಸಾಗುವ ಪ್ರಯಾಣಿಕ ವಾಹನದಲ್ಲಿ ಬಂದಿಳಿದು, ರೈಲ್ವೆ ಮೂಲಕ ಬೆಂಗಳೂರಿಗೆ ಮರಳಲು ಜಮಗೋಡ್ ರೈಲ್ವೆ ಸ್ಟೇಷನ್ ಹತ್ತಿರ ಸಾಗುತ್ತಿರುವಾಗ ಈ ಅವಘಡ ಸಂಭವಿಸಿದೆ.

ಬೈಕ್ ಮೇಲೆ ಕುಳಿತಿದ್ದವನ ಮೇಲೆ ಹರಿದ ಟ್ರಕ್: ಗಾಯಗೊಂಡು ಒದ್ದಾಡುತ್ತಿದ್ದವನಿಗೆ ನೆರವಾದ ವೈದ್ಯ

ಅದೆಲ್ಲಿಂದಲೋ ಬಂದ ಹೆಜ್ಜೇನು ಹುಳುಗಳು ಒಮ್ಮೆಲೆ ಇವರಿಬ್ಬರ ಮೇಲೆ ದಾಳಿ ಮಾಡಿವೆ. ಅದರಿಂದ ತಪ್ಪಿಸಿಕೊಳ್ಳಲು ಇಬ್ಬರು ಹೆಣಗಾಡುವಂತಾಗಿ ಕೊನೆಗೆ ಸಾಧ್ಯವಾಗದೆ ಅಸ್ವಸ್ಥರಾಗಿ ರಸ್ತೆಯಂಚಿನಲ್ಲೇ ಕುಸಿದು ಬೀಳುವಂತಾಗಿದೆ. ಕೆಲ ಸ್ಥಳೀಯರು ಹಾಗೂ ಹೆದ್ದಾರಿ ಪ್ರಯಾಣಿಕರು ಇದನ್ನು ಗಮನಿಸಿ ಸಹಾಯಕ್ಕೆ ಧಾವಿಸಲು ಮುಂದಾದರು ಸಹ,ಈ ವೇಳೆಗೆ ಜೇನು ಹುಳುಗಳ ಹಾರಾಟ ಅಲ್ಲಿ ಜೋರಾಗಿದ್ದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.ಇದೇ ಮಾರ್ಗವಾಗಿ ಸಾಗುತ್ತಿದ್ದ ಲಕ್ಷ್ಮೇಶ್ವರದ ಮಹೇಶ್ ನಾಯ್ಕ  ಎನ್ನುವ ರಿಕ್ಷಾ ಮಾಲಕ,ಸಮಯ ಪ್ರಜ್ಞೆ ತೋರಿ, ತನ್ನೂರಿನ ಚಿನ್ನದಗರಿ ಯುವಕ ಸಂಘದವರಿಗೆ ಕರೆ ಮಾಡಿ ಸಹಾಯಕ್ಕೆ ಧಾವಿಸುವಂತೆ ತಿಳಿಸಿದ್ದಲ್ಲದೆ,  ಇ ಆರ್ ಎಸ್ ಎಸ್ 112 ಸಿಬ್ಬಂದಿಗಳಿಗೂ ಕರೆ ಮಾಡಿ  ಮಾಹಿತಿ ನೀಡಿದ್ದಾರೆ.

ಸ್ಥಳೀಯ ಕೆಲವರು ಅಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದರು ಎನ್ನಲಾಗಿದ್ದು , ಬಹಳ ಹೊತ್ತಾದರೂ ಯಾವುದೇ ಆಂಬುಲೆನ್ಸ್ ಸ್ಥಳಕ್ಕೆ ಬಂದಿರಲಿಲ್ಲ.ಗೋಕರ್ಣದಿಂದ ಅಂಕೋಲ ಮಾರ್ಗವಾಗಿ ಹೊರಟಿದ್ದ ತಲಗೇರಿಯ ಗಣೇಶ್ ನಾಯಕ್ ಎನ್ನುವವರು,ತಮ್ಮ ಖಾಸಗಿ ಆಂಬುಲೆನ್ಸ್ ಅನ್ನು ನಿಲ್ಲಿಸಿ, ವಾಹನದ ಹಿಂಬದಿಯಲ್ಲಿ ಇರುವ ರೋಗಿಗಳ ಕುಟುಂಬದವರಿಗೆ ಮನಮುಟ್ಟುವಂತೆ ವಿಷಯ ತಿಳಿಸಿ,ಜೇನು ಕಡಿತಕ್ಕೊಳಗಾದ ಒರ್ವನನ್ನು ಅಂಬುಲೆನ್ಸ್ ಮುಂಭಾಗದಲ್ಲಿ ಹಾಕಿಕೊಂಡು,ಸರ್ಕಾರಿ ಆಸ್ಪತ್ರೆ ಬಳಿ ತಲುಪಿಸಿ,ಅತಿ ತುರ್ತು ಸಂದರ್ಭದಲ್ಲಿಯೂ ಮಾನವೀಯ ಕಳಕಳಿ ತೋರಿದ್ದಾರೆ.

ಜೇನು ಕಡಿತಕ್ಕೊಳಗಾದ ಇನ್ನೋರ್ವನನ್ನು ಸ್ವತಃ ಮಹೇಶ್ ನಾಯ್ಕ  ಅವರೇ ತಮ್ಮ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು  ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆಗೆ ಮಾದರಿಯಾಗಿದ್ದಾರೆ. ಗಾಯಾಳುಗಳನ್ನು ಘಟನಾ ಸ್ಥಳದಿಂದ ಹೊತ್ತು ತಂದು ರಿಕ್ಷಾ ಮತ್ತು ಆಂಬುಲೆನ್ಸ್ ವಾಹನದ ಮೂಲಕ ಸಾಗಿಸಲು ಕನಸಿಗದ್ದೆಯ ಸಾಮಾಜಿಕ ಕಾರ್ಯಕರ್ತ ಅನಿಲ್ ಮಹಾಲೆ,ಜಮಗೋಡ ಸುತ್ತಮುತ್ತಲ ಎರಡು ಮೂರು ಜನ ಸಹಕರಿಸಿದರು. ಈ ವೇಳೆವಾಗಲೇ ಇ ಆರ್ ಎಸ್ ಎಸ್ ಹಾಗೂ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕರ್ತವ್ಯ ನಿರ್ವಹಿಸಿದರು. ತಲೆ,ಕೈಗಳಿಗೆ ಹೆಜ್ಜೇನು ಕಡಿಸಿಕೊಂಡ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದ ಈರ್ವರಿಗೂ,  ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು  ಸಿಬ್ಬಂದಿಗಳು ಸೂಕ್ತ ಚಿಕಿತ್ಸೆ ನೀಡುತ್ತಿದ್ದು,ಜೇನು ಕಡಿತಕ್ಕೊಳಗಾದವರು ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ.

ತಾಲೂಕಿನಲ್ಲಿ ಆಗಾಗ ಜೇನು ಕಡಿತದ ಪ್ರಕರಣಗಳು ಕೇಳಿ ಬರುತ್ತಿದ್ದು,ಸಂಬಂಧಿಸಿದ ಇಲಾಖೆಗಳು ಇದು ಆಕಸ್ಮಿಕ ಘಟನೆ ಎಂದು ಜವಾಬ್ದಾರಿಯಿಂದ ನುಣುಸಿ ಕೊಳ್ಳದೆ,ತಮ್ಮ ಗಮನಕ್ಕೆ ಬಂದ ನಂತರವಾದರೂ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆನ್ನುವುದು ಪ್ರಜ್ಞಾವಂತರ ಅಗ್ರವಾಗಿದೆ. ವಂದಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸತೀಶ್ ಬೊಮ್ಮಿ ಗುಡಿ,ಸಂಬಂಧಿತ ಚಲನಚಿತ್ರ ತಂಡದ ಪ್ರಮುಖ ವಿನಾಯಕ್ ಎನ್ನುವವರಿಗೆ ಸುದ್ದಿ ಮುಟ್ಟಿಸಿ,ಆಸ್ಪತ್ರೆಯಲ್ಲಿ ದಾಖಲಾಗಿರುವ ಚಿತ್ರತಂಡದ ಕಾರ್ಮಿಕರ ಕುರಿತು ಕಾಳಜಿ ತೆಗೆದುಕೊಳ್ಳಲು ತಿಳಿಸಿದ್ದಾಗಿ ತಿಳಿದು ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version