ಅಂಕೋಲಾ: ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿಯೋರ್ವ ಅಕಾಲಿಕ ನಿಧನ ಹೊಂದಿದ ಘಟನೆ ಪುರ್ಲಕ್ಕಿಬೇಣ (ಆನಂದಗಿರಿ ) ಯಲ್ಲಿ ನಡೆದಿದೆ. ನರೇಶ ನಾಗರಾಜ ಆಚಾರಿ (16) ಮೃತ ದುರ್ದೈವಿ ಬಾಲಕನಾಗಿದ್ದಾನೆ. ಪಟ್ಟಣದ ಖಾಸಗಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿ.ಯು ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದ ಈತ ಲವ ಲವಿಕೆಯಿಂದಲೇ ಇದ್ದು,ಕಳೆದೆರಡು ದಿನಗಳ ಹಿಂದೆಯಷ್ಟೇ ಇತರೆ ಸಹಪಾಠಿಗಳ ಜೊತೆ ಕಾಲೇಜಿನ ಶೈಕ್ಷಣಿಕ ಪ್ರವಾಸ ಮುಗಿಸಿ ಬಂದಿದ್ದ ಎನ್ನಲಾಗಿದೆ.
SSC Recruitment: ಕೇಂದ್ರ ಸರ್ಕಾರಿ ಉದ್ಯೋಗ: 4,500 ಹುದ್ದೆಗಳು ಖಾಲಿ: PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು
ಆ ಬಳಿಕ ಶನಿವಾರ ಸಂಜೆ ವೇಳೆ ಮನೆಯಲ್ಲಿ ಇದ್ದವನಿಗೆ ಅದಾವುದೋ ಕಾರಣದಿಂದ ಆರೋಗ್ಯದಲ್ಲಿ ಏರುಪೇರಾಗಿ, ,ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಸುನಿಗಿದ ಎನ್ನಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ನೋವು ಮತ್ತು ಅನಾಥ ಪ್ರಜ್ಞೆಯ ನಡುವೆಯೂ ತಾನು ಕಷ್ಟ ಪಟ್ಟು ಓದಿ, ಉದ್ಯೋಗ ಸಂಪಾದಿಸಿ ತನ್ನ ತಾಯಿ ಮತ್ತು ಕಿರಿಯ ಸಹೋದರನ ಜೀವನ ಭದ್ರತೆಗೆ ನೆರವಾಗಬೇಕೆಂಬ ಉತ್ಕಟ ಮಹಾದಾಸೆ ಹೊಂದಿ, ಕುಟುಂಬದ ಕಡು ಬಡತನದ ನಡುವೆಯೂ ವಿಧ್ಯಾಭ್ಯಾಸ ಮುಂದುವರೆಸಿ, ಕಳೆದ ಸಾಲಿನ ಎಸ್. ಎಸ್ ಎಲ್. ಸಿ ಪರೀಕ್ಷೆಯಲ್ಲಿಯಲ್ಲಿ ಸಮಾಜ ವಿಜ್ಞಾನದಲ್ಲಿ ನೂರಕ್ಕೆ ನೂರು ಅಂಕ ಸೇರಿದಂತೆ ಇತರೆ ವಿಷಯಗಳಲ್ಲಿಯೂ ಹೆಚ್ಚಿನ ಅಂಕಗಳಿಸಿ ಉತ್ತಮ ಸಾಧನೆ ತೋರಿದ್ದ.
ಈತನ ಸಾಧನೆಗೆ ಪ್ರೋತ್ಸಾಹ ಮತ್ತು ಹೆಮ್ಮೆ ವ್ಯಕ್ತಪಡಿಸಿ ವಿಶ್ವಕರ್ಮ ಸಮಾಜದವರು ಶ್ರೀ ಕಾಳಮ್ಮ ದೇವಸ್ಥಾನದ ಎದುರು , ತಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಯಾದಿಯಲ್ಲಿ ಈತನ ಹೆಸರು ಮತ್ತು ಪೋಟೋ ಇರುವ ಬ್ಯಾನರ್ ಅಳವಡಿಸಿದ್ದನ್ನು ಸ್ಮರಿಸಬಹುದಾಗಿದೆ. ಆದರೆ ತನ್ನ ಕುಟುಂಬ ಮತ್ತು ಸಮಾಜಕ್ಕೆ ಭರವಸೆಯ ಬೆಳಕಾಗಿದ್ದ ಈ ಬಾಲಕ ಅಕಾಲಿಕ ದುರ್ಮರಣ ಹೊಂದಿರುವುದು, ನೃತದೃಷ್ಟ ಕುಟುಂಬದ ಪಾಲಿಗೆ ದಿಕ್ಕು ತೋಚದಂತಾಗಿ ಕತ್ತಲಾವರಿಸುವಂತಾಗಿದೆ. ಈ ಅಸಹಜ ಸಾವು ಸಮಾಜಕ್ಕೂ ಸಹ ತುಂಬಲಾರದ ನಷ್ಟವಾದಂತಿದೆ. ಈತನ ನಿಧನದ ಸುದ್ದಿ ತಿಳಿದ ಕಾಲೇಜು ಶಿಕ್ಷಕರು ಮತ್ತಿತರರು ಮೃತನ ಅಂತಿಮ ದರ್ಶನ ಪಡೆದು ಆತನ ತಾಯಿಗೆ ಸಾಂತ್ವನ ಹೇಳಿದರು ಎನ್ನಲಾಗಿದೆ,
ಸಂಬಂಧಿಸಿದ ಕಾಲೇಜ್ ಆಡಳಿತ ಮಂಡಳಿ, ಹಾಗೂ ಮಾನವೀಯ ನೆಲೆಯಲ್ಲಿ ವಿವಿಧ ಸ್ಥರದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಸಂಘ-ಸಂಸ್ಥೆಗಳು, ದಾನಿಗಳು, ಸಮಾಜ ಬಾಂಧವರು ಹಾಗೂ ಸಾಮಾಜಿಕ ಕಾರ್ಯಕರ್ತರು ನೊಂದ ಬಡಕುಟುಂಬಕ್ಕೆ ಆರ್ಥಿಕ ನೆರವು ನೀಡವುದು ಮತ್ತಿತರ ಜೀವನ ಭದ್ರತೆ ಒದಗಿಸುವ ಕಾರ್ಯಗಳ ಮೂಲಕ ನೈಜ ಸಾಂತ್ವನ ಹೇಳಬೇಕಿದೆ ಎನ್ನುವ ಮಾತುಗಳು ಸ್ಥಳೀಯ ಪ್ರಮುಖರಿಂದ ಕೇಳಿ ಬಂದಿದೆ. ತನ್ನ ಕ್ಷೇತ್ರ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಯ ಅಕಾಲಿಕ ನಿಧನಕ್ಕೆ ತೀವೃ ಸಂತಾಪ ವ್ಯಕ್ತಪಡಿಸಿರುವ ಶಾಸಕಿ ರೂಪಾಲಿ ನಾಯ್ಕ, ನೊಂದ ಕುಟುಂಬಕ್ಕೆ ವೈಯಕ್ತಿಕ ನೆಲೆಯಲ್ಲಿ ತಾನೂ ಸಹ ನೆರವು ನೀಡುವದರೊಂದಿಗೆ, ಸರ್ಕಾರದಿಂದ ಸಿಗಬಹುದಾದ ಇತರೆ ಸೌಲಭ್ಯ ಮತ್ತು ಯೋಗ್ಯ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುವ ಭರವಸೆ ನೀಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ