ಕಾರವಾರ: ಶೈನಿಂಗ್ ಸ್ಟಾರ್ ಮ್ಯೂಸಿಕ್ ಸ್ಕೂಲ್ ಕಾರವಾರ ಇವರ ಆಶ್ರಯದಲ್ಲಿ, ಕಾರವಾರದ ಕಾಜುಭಾಗದಲ್ಲಿ ಕರೋಕೆ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾನೂನು ಪದವೀಧರ ಕಿರಣ್ ನಾಯ್ಕ್ ನೇತೃತ್ವದಲ್ಲಿ ಕಳೆದ 30 ವರ್ಷಗಳಿಂದ ಶೈನಿಂಗ್ ಸ್ಟಾರ್ ಮ್ಯೂಸಿಕ್ ಸ್ಕೂಲ್ ನಲ್ಲಿ ಅನೇಕ ಜನ ವಿದ್ಯಾರ್ಥಿಗಳು ಸಂಗೀತ ಕಲಿತು ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಈ ಶಾಲೆಯಲ್ಲಿ “ಕರೋಕೆ ಗಾಯನ ಸ್ಪರ್ಧೆ” ಎಂಬ ಪ್ರತಿಭಾನ್ವೇಷಣೆಯ ಕಾರ್ಯಕ್ರಮ ಆಯೋಜಿಸುವ ಮೂಲಕ ಯುವ ಪ್ರತಿಭೆಗಳನ್ನು ಕಲಾಲೋಕಕ್ಕೆ ಪರಿಚಯಿಸಲಾಗುತ್ತಿದೆ.
ಅದರಂತೆ ಈ ವರ್ಷವೂ 20 ವರ್ಷ ಮೇಲ್ಪಟ್ಟವರಿಗಾಗಿ ಕರೋಕೆ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಒಟ್ಟೂ 28 ಸ್ಪರ್ಧಿಗಳು ಭಾಗವಹಿಸಿ ಪ್ರತಿಭೆ ಪ್ರಸ್ತುತಪಡಿಸಿದರು. ನಿರ್ಣಾಯಕರಾಗಿ ವಿಜಯ ಮಹಲೆ ಕುಮಟಾ, ನಾಗರಾಜ್ ಜಂಬಳೆಕಾರ್ ಮತ್ತು ಹೇಮಾ ನಾಯ್ಕ್ ಪ್ರಾಮಾಣಿಕ ತೀರ್ಪು ನೀಡಿದರು. ಶಿವಾನಿ ಸಾಹು ಪ್ರಥಮ, ಸುಲಕ್ಷ ನಾಯ್ಕ್ ದ್ವಿತೀಯ, ನಾಗೇಂದ್ರ ಮೇಸ್ತ ತೃತೀಯ, ಅಂಜಾದ್ ಬೇಗಂ ನಾಲ್ಕು ಹಾಗೂ ನಿವೇದಿತಾ ಐದನೇ ಸ್ಥಾನದಲ್ಲಿ ವಿಜೇತರಾದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ; ನಗದು, ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಗಣ್ಯರ ಮೂಲಕ ನೀಡಲಾಯಿತು. ಶೈನಿಂಗ್ ಸ್ಟಾರ್ ಸ್ಕೂಲ್ ವತಿಯಿಂದ ನಿರ್ಣಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿರ್ಣಾಯಕರಲ್ಲೊಬ್ಬರಾದ ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಮಹಲೆ ಮಾತನಾಡಿ “ಸ್ಪರ್ಧಿಗಳೆಲ್ಲ ಚೆನ್ನಾಗಿ ಹಾಡಿದ್ದಾರೆ. ಸ್ಪರ್ಧಾ ನಿಯಮದಂತೆ ಕೆಲವರನ್ನು ಮಾತ್ರಾ ಆಯ್ಕೆ ಮಾಡಿ ಬಹುಮಾನ ನೀಡಲಾಗಿದೆ. ಎಲ್ಲರೂ ಹೆಚ್ಚಿನ ಅಭ್ಯಾಸ ಮಾಡಿ ಸಂಗೀತ ಕ್ಷೇತ್ರದಲ್ಲಿ ಉನ್ನತ ಗುರಿಯನ್ನು ಹೊಂದಿರಬೇಕು” ಎಂದರು. ಶೈನಿಂಗ್ ಸ್ಟಾರ್ ವಿದ್ಯಾರ್ಥಿ ಸಚಿನ್ ನಾಯ್ಕ್ ಹಾಗೂ ಸಂಗಡಿಗರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು
ವಿಸ್ಮಯ ನ್ಯೂಸ್, ಕಾರವಾರ