ಅಂಕೋಲಾ: ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ ಇಂಡಿಯನ್ ಹಿಪಾಪ್ ಡ್ಯಾನ್ಸ್ ಚಾಂಪಿಯನ್ ಶಿಪ್ 2023 ರ ಜ್ಯೂನಿಯರ್ ಮೆಗಾ ವಿಭಾಗದಲ್ಲಿ ಅಂಕೋಲಾ ತಾಲೂಕಿನ ಪಾಯಿಂಟ್ ಔಟ್ ಕ್ರ್ಯೂ ನೃತ್ಯ ತಂಡ ರನ್ನರಪ್ ಪ್ರಶಸ್ತಿ ಪಡೆದಿದೆ.
ಮುಂಬೈನಲ್ಲಿ ನಡೆದ ರಾಷ್ಟ್ರ ಮಟ್ಟದ ಇಂಡಿಯನ್ ಹಿಪಾಪ್ ನೃತ್ಯ ಸ್ಪರ್ಧೆಯ 11 ನೇ ಆವೃತ್ತಿಯಲ್ಲಿ ದ್ವೀತೀಯ ಸ್ಥಾನ ಪಡೆಯುವ ಮೂಲಕ ಅಂಕೋಲಾ ತಂಡ ಬೆಳ್ಳಿ ಪದಕದ ಸಾಧನೆ ಮಾಡಿದೆ.
ನಾಲ್ಕು ವಿಭಾಗಗಳಲ್ಲಿ ನಡೆದ ಪ್ರತಿಷ್ಠಿತ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕದ ಸುಮಾರು ಹತ್ತು ತಂಡಗಳೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ನೂರಕ್ಕೂ ಅಧಿಕ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಜ್ಯೂನಿಯರ್ ಮೆಗಾ ವಿಭಾಗದ ಸೆಮಿಫೈನಲ್ ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ಮೂಲಕ ಫೈನಲ್ ಹಂತ ತಲುಪಿದ್ದ ಅಂಕೋಲಾದ ‘ ಪಾಯಿಂಟ್ ಔಟ್ ಕ್ರ್ಯೂ ತಂಡ ಫೈನಲ್ ಸ್ಪರ್ಧೆಯಲ್ಲಿಯೂ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನ ತನ್ನದಾಗಿಸಿಕೊಂಡಿದೆ.
ಭಾರೀ ಪೈಪೋಟಿಯಿಂದ ಕೂಡಿದ್ದ ಫೈನಲ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆಯಲು ತಯಾರಿ ನಡೆಸಿದ್ದ ಅಂಕೋಲಾ ತಂಡ ಕೊನೆಗೂ ಬೆಳ್ಳಿ ಪದಕಕ್ಕೆ ತೃಪ್ತಿ ಪಡುವಂತಾಗಿದೆ. ಕರ್ನಾಟಕ ರಾಜ್ಯದಿಂದಲೂ ಸುಮಾರು 10 ತಂಡಗಳು ಸ್ಪರ್ಧೆಯಲ್ಲಿ ತಮ್ಮ ಸಮಾಧಾನಕರ ಪ್ರದರ್ಶನ ನೀಡಿದ್ದವಾದರೂ , ಪದಕದ ಸಾಧನೆಯಿಂದ ಹಿಂದುಳಿಯುವಂತಾದಾಗ, ಅಂಕೋಲಾ ತಂಡ ಪದಕ ಪಡೆದು ರಾಜ್ಯದ ಕೀರ್ತಿಯನ್ನು ಎತ್ತಿ ಹಿಡಿದದ್ದಲ್ಲದೇ ಮಾಯಾನಗರಿ ಮುಂಬೈಯಲ್ಲಿ ಕನ್ನಡ ಬಾವುಟ ಪ್ರದರ್ಶಿಸಿ ನಾಡು – ನುಡಿಯ ಹಿರಿಮೆ ಹಾಗೂ ದೇಶದ ಸಾರ್ವಭೌಮತ್ವದ ಸಂದೇಶ ನೀಡಿದಂತಿದೆ. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ತೋರುವ ಮೂಲಕ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿಯೂ ರಾಷ್ಟ್ರವನ್ನು ಪ್ರತಿನಿಧಿಸುವ ಅರ್ಹತೆಯನ್ನು ಗಳಿಸಿದಂತಾಗಿದೆ.
ತರಬೇತುದಾರ ಮನೋಜ ಆಚಾರಿ ಅವರ ನೃತ್ಯ ಸಂಯೋಜನೆಯಲ್ಲಿ ತಾಲೂಕಿನ 10 ಜ್ಯೂನಿಯರ್ ನೃತ್ಯ ಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಚಿಕ್ಕ ತಾಲೂಕಿನವರಾದರೂ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದು ತಾಲೂಕು ಮತ್ತು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಜೂನಿಯರ್ ಕಲಾವಿದರ ಈ ಸಾಧನೆಗೆ ಹಲವರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಮುಂಬಯಿಯಿಂದ ಅವರು ಅಂಕೋಲಾಕ್ಕೆ ಬಂದು ಇಳಿಯುತ್ತಿದ್ದಂತೆ ರೈಲ್ವೆ ನಿಲ್ದಾಣದ ಬಳಿ ಅವರನ್ನು ಹಾರ ಹಾಕಿ ಸ್ವಾಗತಿಸಲಾಯಿತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ