ಗೋಸ್ವರ್ಗದಲ್ಲಿ ಲೋಕಾರ್ಪಣೆಗೊಂಡ ‘ಕುಮಾರವ್ಯಾಸಭಾರತ ಕಥಾಮೃತ’ ಕೃತಿ: ಓದುಗ ವೃಂದಕ್ಕೆ ಶ್ರೀಭಾರತೀ ಪ್ರಕಾಶನದ ಕೊಡುಗೆ
ಭಗವಂತನ ಅವತಾರದ ಕಥೆಗಳ ಅನುಸಂಧಾನ ಜೀವಿಯ ಸಮುದ್ಧರಣಕ್ಕೆ ಕಾರಣವಾಗುತ್ತದೆ. ಇದಕ್ಕಾಗಿಯೇ ಪ್ರಾಚೀನರು ಆ ಚರಿತೆಗಳನ್ನು ಪುರಾಣವಾಗಿ, ಇತಿಹಾಸವಾಗಿ, ಕಾವ್ಯವಾಗಿ, ದೃಶ್ಯಕಲೆಯಾಗಿ ಬಹುವಿಧದಲ್ಲಿ ಮತ್ತೆ ಮತ್ತೆ ಸೃಜಿಸುತ್ತಾ ಬಂದರು. ಇದರ ಮುಂದುವರಿಕೆಯೇ ಭಾರತೀಯ ಸಾಹಿತ್ಯದ ಮೇರು ಕವಿಗಳಲ್ಲಿ ಒಬ್ಬನಾದ ಕುಮಾರವ್ಯಾಸ ವಿರಚಿಸಿದ ಕರ್ಣಾಟಭಾರತ ಕಥಾಮಂಜರಿ. ರಸಯುಕ್ತವಾದ ಉತ್ತಮ ಕಾವ್ಯವಿದು. ಪ್ರಕೃತ ನಮ್ಮ ನೆಚ್ಚಿನ ಶಿಷ್ಯರಾದ ತೆಪ್ಪದ ಲಕ್ಷ್ಮೀನಾರಾಯಣ ಭಟ್ಟರು ಇಂದಿನ ಭಾಷೆಯಲ್ಲಿ ಕುಮಾರವ್ಯಾಸನ ಕಾವ್ಯವನ್ನು ಮತ್ತೊಮ್ಮೆ ರಚಿಸಿದ್ದಾರೆ.
ಇದು ನಮಗೆ ಮೆಚ್ಚುಗೆಯಾದ ಕಾರ್ಯ, ನಮ್ಮ ಪ್ರಕಾಶನ ಇದನ್ನು ಪ್ರಕಟಿಸುತ್ತಿರುವುದು ಪ್ರಶಂಸಾರ್ಹ. ಈ ಕೃತಿಕಾರರಿಂದ ಮತ್ತಷ್ಟು ಮೌಲಿಕ ಕೃತಿಗಳು ಹೊರಬರುವಂತಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ‘ಕುಮಾರವ್ಯಾಸಭಾರತ ಕಥಾಮೃತ’ ಕೃತಿಯನ್ನು ಲೋಕಾರ್ಪಣೆ ಮಾಡಿ ಆಶೀರ್ವದಿಸಿದರು.
ಸಿದ್ಧಾಪುರ ಸಮೀಪದ ಭಾನ್ಕುಳಿ ಮಠ ಗೋಸ್ವರ್ಗದ ಗೋದಿನ-ಉತ್ಸವ ಸಂದರ್ಭದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಯ ಲೇಖಕರಾದ ಲಕ್ಷ್ಮೀನಾರಾಯಣ ಭಟ್ಟ ತೆಪ್ಪ, ಹವ್ಯಕ ಮಹಾಮಂಡಲ ಅಧ್ಯಕ್ಷರಾದ ಆರ್.ಎಸ್.ಹೆಗಡೆ ಹರಗಿ, ಶ್ರೀಭಾರತೀ ಪ್ರಕಾಶನದ ಅಧ್ಯಕ್ಷರಾದ ಸಚಿನ್.ಎಲ್.ಎಸ್. ಮುಂತಾದ ಗಣ್ಯರು ಭಾಗವಹಿಸಿದ್ದರು.
ಕೃತಿಕಾರರ ಸರಳಗನ್ನಡದ ಸುಲಲಿತ ಭಾಷೆ, ಅಂಕಣಕಾರರಾದ ನಾರಾಯಣ ಯಾಜಿ ಅವರ ಮುನ್ನುಡಿ, ಶ್ರೀಭಾರತೀ ಪ್ರಕಾಶನದ ದಿಗ್ದರ್ಶಕರಾದ ವಿದ್ವಾನ್ ಜಗದೀಶಶರ್ಮಾ ಸಂಪ ಅವರ ಬೆನ್ನುಡಿ ಬರಹ ಹೊಂದಿರುವ ಈ ಹೊತ್ತಿಗೆ ಕನ್ನಡಲೋಕ (www.kannadaloka.in) ಜಾಲತಾಣದಲ್ಲಿ ಲಭ್ಯವಿದೆ.
ವಿಸ್ಮಯ ನ್ಯೂಸ್ ಸಿದ್ದಾಪುರ