Important
Trending

ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದ ಕಡವೆ: ಚಿಕಿತ್ಸೆ ಬಳಿಕ ಹೃದಯಾಘಾತದಿಂದ ಸಾವು

ಕಾರವಾರ: ಆಕಸ್ಮಿಕವಾಗಿ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದ ಕಡವೆಯೊಂದು ಚಿಕಿತ್ಸೆ ನೀಡಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.

ನಗರ ವ್ಯಾಪ್ತಿಯ ಬಿಣಗಾದಲ್ಲಿರುವ ಗ್ರಾಸಿಂ ಇಂಡಸ್ಟ್ರೀಸ್ ಆವರಣದೊಳಗೆ ಇತ್ತೀಚೆಗೆ ಕಡವೆಯೊಂದು ಪ್ರತ್ಯಕ್ಷವಾಗಿತ್ತು. ಸಮೀಪದಲ್ಲಿಯೇ ಕಾಡು ಇರುವುದರಿಂದ ಅಲ್ಲಿಂದ ಈ ಕಡವೆ ಬಂದಿದ್ದು ಜನರ ಭಯಕ್ಕೋ ಅಥವಾ ನಾಯಿಗಳ ದಾಳಿಗೋ ಹೆದರಿ ಓಡುವ ಸಂದರ್ಭದಲ್ಲಿ ಕಾಲುವೆಯೊಂದರಲ್ಲಿ ಬಿದ್ದು ಕಾಲು ಮುರಿದಿತ್ತು.

ಇದನ್ನು ಗಮನಿಸಿದ ಕಂಪನಿಯ ಕಾರ್ಮಿಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯರು ಪರೀಕ್ಷಿಸಿದಾಗ ಹಿಂಬದಿಯ ಬಲಗಾಲಿನ ಎಲುಬು ಮುರಿದು ಎದ್ದು ನಿಲ್ಲದ ಸ್ಥಿತಿಯಲ್ಲಿತ್ತು. ಇದು ಸುಮಾರು 3 ವರ್ಷ ಪ್ರಾಯದ ಗಂಡು ಕಡವೆಯಾಗಿದ್ದು ತಕ್ಷಣ ಕಾಲಿಗೆ ಪ್ಲಾಸ್ಟರ್ ಮಾಡಿಸಿ ಬಳಿಕ ವಾಹನದ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ದಿದ್ದರು.

ಆದರೆ‌ ಕಡವೆ ಹೃದಯಾಘಾತದಿಂದ ಮೃತಪಟ್ಟಿದೆ. ಕಡವೆಯು ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಅತಿಯಾಗಿ ಉಂಟಾದ ಭಯದಿಂದಾಗಿ ಹೃದಯಾಘಾತಗೊಂಡು ಕಡವೆ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್ ಕಾರವಾರ

Back to top button