ಭಟ್ಕಳ: ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎತ್ತರಕ್ಕೆ ಬೆಳೆಯುತ್ತೀರುವ ನಾಮಧಾರಿ ಸಮಾಜ ಉಳಿದ ಸಮಾಜಕ್ಕೂ ಉತ್ತಮ ಸಂಸ್ಕಾರ ಹಂಚಿ ದೊಡ್ಡ ಸಮಾಜವಾಗಿ ಜಿಲ್ಲೆಗೆ ಮಾರ್ಗದರ್ಶನ ಮಾಡಲಿ ಎಂದು ಉಜಿರೆ ಶ್ರೀ ರಾಮ ಕೇತ್ರದ ಪೀಠಾಧಿಪತಿ ನಾಮಧಾರಿ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಆಸರಕೇರಿ ನಿಚ್ಛಲಮಕ್ಕಿ ವೆಂಕಟ್ರಮಣ ದೇವರ ಪಾಲಕಿ ಉತ್ಸವದಲ್ಲಿ ಉಪಸ್ಥಿತರಿದ್ದು, ಭಕ್ತರಿಗೆ ಆಶೀರ್ವಚನ ನೀಡಿದರು. ಮನುಷ್ಯ ಇಂದ್ರಿಯ ಸುಖದ ಆಸಯಿಂದ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ನಿಜವಾದ ನೆಮ್ಮದಿ ಇರುವುದು ತ್ಯಾಗ ಹಾಗೂ ಸೇವೆಯಿಂದ ಎನ್ನುವುದು ಮರೆತಿದ್ದಾನೆ.
ಜ್ಞಾನದ ಕೊರತೆಯಿಂದ ಮನುಷ್ಯ ಕಳೆದು ಹೋದ ನಿನ್ನೆಯ ಬಗ್ಗೆ ಯೋಚಿಸುತ್ತಾ ಜೀವನ ಕಳೆಯುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು. ವ್ಯಕ್ತಿ ಶಾಶ್ವತ ಅಲ್ಲ ಬದಲಾಗಿ ಸಮಾಜ ಶಾಶ್ವತ, ಸಮಾಜದ ಗುರುಪೀಠ ಶಾಶ್ವತ. ಪಾತಾಳಕ್ಕೆ ಕುಸಿದ ವ್ಯಕ್ತಿಯನ್ನು ಮೇಲೆತ್ತುವ ಸಾಮರ್ಥ್ಯ ಗುರುವಿದೆ. ಅಂತಹ ಜ್ಞಾನಿ ಗುರುವನ್ನು ನಿಂದಿಸುವವನು ಮುಂದೆ ಎರಡು ಕಾಲಿನ ಬದಲಿಗೆ ನಾಲ್ಕು ಕಾಲಿನ ಪ್ರಾಣಿಯಾಗಿ ಜನಿಸುವುದು ಖಚಿತ ಎಂದರು. ಸಂಸ್ಕಾರ ಕೊರತೆಯಿಂದ ಮಕ್ಕಳು ಇಂದು ಹಾದಿ ತಪ್ಪುತ್ತಿದ್ದಾರೆ. ಸೋಶೀಯಲ್ ಮೀಡಿಯಾಗಳಲ್ಲಿ ಸಕ್ರೀಯರಾಗಿರುವ ಯುವಕರು ಅದರ ಸದುಪಯೋಗ ಬದಲಾಗಿ ದುರುಪಯೋಗಕ್ಕೆ ಮುಂದಾಗುತ್ತಿದ್ದಾರೆ. ಇಂದಿನ ಮಕ್ಕಳಿಗೆ ಸತ್ಯ ಹಾಗೂ ಧರ್ಮದ ಪಾಠದ ಅಗತ್ಯ ಇದೆ ಎಂದರು.
ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ ನಮಾಧಾರಿ ಸಮಾಜವನ್ನು ಧಾರ್ಮಿಕವಾಗಿ ಒಗ್ಗೂಡಿಸಲು ಹಲವಾರು ಬದಲಾವಣೆ ಮಾಡಲಾಗಿದೆ. ಸಮಾಜದ ವತಿಯಿಂದ ಶಿಕ್ಷಣ ಸಂಸ್ಥೆ ತೆರೆಯಬೇಕು ಎನ್ನುವುದು ನಮ್ಮೆಲ್ಲರ ಕನಸಾಗಿದ್ದು, ಮುಂದಿನ ದಿನಗಳಲ್ಲಿ ಅದು ಸಾಕಾರಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಭವಾನಿಶಂಕರ ವರದಿ ವಾಚನ ಮಾಡಿದರು. ಭಟ್ಕಳ ಶಾಸಕ ಸುನೀಲ ನಾಯ್ಕ, ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಸಮಾಜದ ಮುಖಂಡರಾದ ಎಲ್.ಎಸ್.ನಾಯ್ಕ, ಎಂ.ಆರ್.ನಾಯ್ಕ ಸೇರಿದಂತೆ ಹಲವರು ಇದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ