Focus NewsImportant
Trending

ರೈಲು ಬಡಿದು ಮುಳ್ಳು ಪೊದೆ ಬಳಿ ಸಿಡಿದು ಬಿದ್ದ ಪಿಯು ವಿದ್ಯಾರ್ಥಿ: ಜೀವಕ್ಕೆ ಮುಳುವಾಯಿತೇ ಮೊಬೈಲ್ ಇಯರ್ ಫೋನ್ 

ಮರೆಯಾದ ಪ್ರಕಾಶ: ಕುಟುಂಬದಲ್ಲಿ ಆವರಿಸಿದ ಕತ್ತಲು

ಅಂಕೋಲಾ : ಪಿ.ಯು ಕಾಲೇಜ್ ವಿದ್ಯಾರ್ಥಿಯೊಬ್ಬ ರೈಲ್ವೆ ಟ್ರ್ಯಾಕ್ ಅಂಚಿನ ಪೊದೆಯ ಬಳಿ ಶವವಾಗಿ ಪತ್ತೆಯಾದ ಘಟನೆ ಗುರುವಾರ ಬೆಳಿಗ್ಗೆ ತಾಲೂಕಿನ ಹೊಸಗದ್ದೆ ಜನತಾ ಕಾಲೋನಿ ಬಳಿ ಸಂಭವಿಸಿದೆ.   ಹಳೇ ಹುಬ್ಬಳ್ಳಿ ಮೂಲದ ಹಳೆ ಹುಬ್ಬಳ್ಳಿ ನ್ಯೂ ಇಂಗ್ಲೀಷ್ ಸ್ಕೂಲ್ ಪಕ್ಕದ ನಿವಾಸಿ , ಸ್ಥಳೀಯ ಕಾಲೇಜ್ ಒಂದರಲ್ಲಿ  ಪ್ರಥಮ ಪಿ.ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದ, ಸೃಜನ್ ಪ್ರಕಾಶ್ ಶೆಟ್ಟಿ (17 ) ಮೃತ ದುರ್ದೈವಿ.

ಈತನು ಅಂಕೋಲಾದ ಹೊಸಗದ್ದೆಯಲ್ಲಿರುವ ತಮ್ಮ ಸಂಬಂಧಿಗಳ ಮನೆಗೆ  ಕುಟುಂಬಸ್ಥರೊಂದಿಗೆ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಬಂದು ವಾಸವಾಗಿದ್ದ. , ಗುರುವಾರ ಬೆಳಗಿನ ಜಾವ ಮಾರ್ನಿಂಗ್ ವಾಕ್ ಇಲ್ಲವೇ ಇತರೆ ಕಾರಣಗಳಿಂದ ತಾನು ವಾಸವಾಗಿದ್ದ ಸಂಬಂಧಿಗಳ ಮನೆ ಹತ್ತಿರದ ರೈಲ್ವೆ ಟ್ರ್ಯಾಕ್ ದಾಟಿ ಅಥವಾ ಟ್ರ್ಯಾಕ್ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರೈಲು ಬಡಿದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು.ವ್ಯಕ್ತಿ ಯೋರ್ವ ರೈಲ್ವೆಗೆ ಬಡಿದು ಸಿಡಿದು ಬಿದ್ದಿರುವ ಸಾಧ್ಯತೆ ಕುರಿತು  ರೈಲ್ವೆ ಇಲಾಖೆಯವರಿಗೆ ಮಾಹಿತಿ ಲಭಿಸಿತ್ತು ಎನ್ನಲಾಗಿದೆ.

ಮೃತ ಪ್ರಕಾಶ ರೈಲ್ವೆ ಟ್ರ್ಯಾಕ್ ಬಳಿ ಸಾಗುತ್ತಿದ್ದಾಗ  ಮೊಬೈಲ್ ಇಯರ್ ಫೋನ್ ಬಳಿಸಿರುವ ಸಾಧ್ಯತೆ ಹೇಳಿ ಬಂದಿದ್ದು,ಇಯರ್ ಫೋನ್ ನಲ್ಲಿ ತಲ್ಲೀನನಾಗಿದ್ದ ಈತನಿಗೆ ರೈಲ್ವೆ ಬಂದ ಸದ್ದು ತಿಳಿಯದೆ,ರೈಲ್ವೆ ಬಡಿದ ಪರಿಣಾಮ ಟ್ರ್ಯಾಕ್ ಅಂಚಿನ ಇಳಿಜಾರಿನ ಪೊದೆಯ ಬಳಿ ಸಿಡಿದು ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೇ ಎನ್ನಲಾಗಿದೆ.ಅದಕ್ಕೆ ಪೂರಕ ಎನ್ನುವಂತೆ ಪೊದೆಯ ಬಳಿ ಬಿಳಿ ಬಣ್ಣದ ಇಯರ್ ಫೋನ್ ನೇತಾಡುತ್ತಿರುವುದು,ಮೊಬೈಲ್ ಹಿಂಬದಿ ಕವರ್ ಹಾಗೂ ಸ್ಕ್ರೀನ್ ಗಾರ್ಡ್ ಜಖಂಗೊಡು ಬಿದ್ದಿರುವುದು ಕಂಡುಬಂದಂತಿದೆ.

ಸುದ್ದಿ ತಿಳಿದ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಐ ಗೀತಾ ಶಿರ್ಸಿಕರ್ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದರು .ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕಾನೂನು ಕ್ರಮ ಮುಂದುವರಿಸಿದೆ.ಇಳಿಜಾರಿನ ಕಡಿದಾದ ದಾರಿಯಲ್ಲಿ ಮೃತ ದೇಹವನ್ನು ಸಾಗಿಸಲು ಸ್ಥಳೀಯರು,ಮೃತನ ಕುಟುಂಬಸ್ಥರು ಸಹಕರಿಸಿದರು.ಘಟನಾ ಸ್ಥಳದಿಂದ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ್ ಆಸ್ಪತ್ರೆ ಶವಗಾರಕ್ಕೆ ಸಾಗಿಸಲು ಕನಸಿಗದ್ದೆ ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ನೆರವಾದರು. 112 ಪೊಲೀಸ್ ಸಿಬ್ಬಂದಿಗಳು, 108 ಅಂಬುಲೆನ್ಸ ಪಿಶ್ಚಿಂದಿಗಳು,ಸುತ್ತಮುತ್ತಲ ಗ್ರಾಮಸ್ಥರಿದ್ದರು.

ಕಳೆದ ಒಂದು ವರ್ಷದ ಹಿಂದಷ್ಟೇ ಮನೆಯ ಯಜಮಾನನನ್ನು   ಕಳೆದುಕೊಂಡಿದ್ದ ಬಡ ಕುಟುಂಬದಲ್ಲಿ, ಓದಿ – ಬೆಳೆದು ಕುಟುಂಬಕ್ಕೆ ಆಸರೆಯಾಗಬೇಕಿದ್ದ  ಮನೆಯ ಮುದ್ದಿನ ಮಗನು ಇನ್ನಿಲ್ಲವಾಗಿ ಪ್ರಕಾಶವಿಲ್ಲದೇ ಕತ್ತಲಾವರಿಸಿದಂತಾಗಿರುವುದು ವಿಧಿಯಾಟವೇ ಸರಿ. ನಾಲ್ಕಾರು ದಿನ  ತಮ್ಮ ಮನೆಯಲ್ಲಿ ಚೆನ್ನಾಗಿ ಇದ್ದು ಹೋಗಲಿ ಎಂದು ಬಯಸಿದ್ದ ಹೊಸಗದ್ದೆ ಸಂಬಂಧಿಗಳ ಮನೆಯವರ ಮನವೂ ಈ ಘಟನೆಯಿಂದ ಬೇಸರಿಸಿ ದುಖ ಪಡುವಂತಾಗಿದೆ.ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.             

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

Back to top button