Important
Trending

ಹೊಳೆಯ ನಡುವಿನ ಮರಳು ಗುಂದದಲ್ಲಿ ಕಳೆದ ಎರಡು ದಿನಗಳಿಂದ ಮೊಸಳೆ ವಾಸ್ತವ್ಯ : ಗ್ರಾಮಸ್ಥರಲ್ಲಿ ಆತಂಕ

ಭಟ್ಕಳ: ತಾಲೂಕಿನ ವೆಂಕಟಾಪುರ ಹೊಳೆಯ ನೀರಕಂಠದ ಸಮೀಪದಲ್ಲಿ ಹೊಳೆಯ ನಡುವೆ ಇರುವ ಮರಳು ಗುಂದದಲ್ಲಿ ಕಳೆದ ಎರಡು ದಿನಗಳಿಂದ ಮೊಸಳೆಯೊಂದು ಕಾಣಿಸಿಕೊಂಡಿದ್ದು ಊರಿನವರಲ್ಲಿ ಆತಂಕ ಸೃಷ್ಟಿಸಿದೆ.

ವೆಂಕಟಾಪುರ ನದಿಯಲ್ಲಿ ಇದು ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದಾಗಿದ್ದು ಮಳೆಗಾಲದಲ್ಲಿ ಮೇಲಿಂದ ರಭಸದಲ್ಲಿ ಬರುವ ನೀರಿನಲ್ಲಿ ಕಡವಿನಕಟ್ಟೆ ಡ್ಯಾಂ ನಿಂದ ಕೆಳಕ್ಕೆ ಬಂದಿದಿಯೋ, ಇಲ್ಲಿಯೇ ಹಲವಾರು ವರ್ಷಗಳಿಂದ ಇದೆಯೋ ಎನ್ನುವ ಜಿಜ್ಞಾಸೆ ಕಾರಣವಾಗಿದೆ.

ಮರಳು ದಿಬ್ಬದ ಮೇಲೆ ಮಲಗಿದ್ದ ಮೊಸಳೆಯನ್ನು ಕಂಡಿದ್ದ ಸ್ಥಳೀಯರು ಪೋಟೋ ಕ್ಲಿಕ್ಕಿಸಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಮೊಸಳೆ ಅದೇ ಮರಳು ದಿಬ್ಬದ ಮೇಲೆ ಕಾಣಿಸಿಕೊಂಡಿದೆ. ಸುಮಾರು 5-6 ಅಡಿ ಉದ್ದವಿದ್ದ ಮೊಸಳೆಯಾಗಿದ್ದು ಇದೇ ಪ್ರದೇಶದಲ್ಲಿ ಸದಾ ಜನರು ನೀರಿಗಿಳಿಯುವುದು, ಈಜುವುದು ಮಾಡುತ್ತಿರುವುದರಿಂದ ಮೊಸಳೆ ಕಾಣಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಮೊಸಳೆ ಕಾಣಿಸಿಕೊಂಡಿದ್ದನ್ನು ಅರಣ್ಯ ಇಲಾಖೆಯ ಗಮನಕ್ಕೆ ಸಾರ್ವಜನಿಕರು ತಂದಿದ್ದು ಅರಣ್ಯ ಇಲಾಖೆ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ಕೇಳಿ ಬಂದಿದೆ. ಇಲ್ಲಿ ಒಂದೇ ಮೊಸಳೆಯಿದೆಯೇ ಇನ್ನು ಹೆಚ್ಚು ಮೊಸಳೆಗಳು ಬೀಡು ಬಿಟ್ಟಿದ್ದಾವೆಯೇ ಎನ್ನುವ ಕುರಿತೂ ಚಿಂತಿಸಬೇಕಾಗಿ ಬಂದಿದ್ದು ಒಟ್ಟಾಗೆ ವೆಂಕಟಾಪುರ ನದಿಯಲ್ಲಿ ಇಳಿಯುವುದನ್ನು ತಡೆಯಬೇಕಾಗಿದೆ.

ಅರಣ್ಯ ಇಲಾಖೆಯ ವತಿಯಿಂದ ಈಗಾಗಲೇ ಸ್ಥಳೀಯರಿಗೆ ಮತ್ತು ಗ್ರಾಮ ಪಂಚಾಯತಕ್ಕೆ ಜಾಗೃತಿ ಮೂಡಿಸುವ ಕುರಿತು ಪತ್ರವನ್ನು ಸಹ ಬರೆಯಲಾಗಿದ್ದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೊಸಳೆಯನ್ನು ಹಿಡಿಯುವ ಕಾರ್ಯಾಚರಣೆಗೆ ಮುಂದಾಗಬೇಕಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸವಿತಾ ದೇವಡಿಗ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button