Follow Us On

Google News
Important
Trending

ಅಕ್ಷಯ ತೃತೀಯದಂದೇ ಸಾಸಿ ಹಾಕುವ ಸಂಪ್ರದಾಯ : ಮೇ 23 ರ ಅಂಕೋಲಾ ಬಂಡಿಹಬ್ಬದ ಪೂರ್ವದಾಚರಣೆ

ಅಂಕೋಲಾ: ನಾಡಿನ ಪ್ರಸಿದ್ಧ ಬಂಡಿ ಹಬ್ಬಗಳ ಸಾಲಿನಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಪ್ರಾಮುಖ್ಯತೆ ಹೊಂದಿರುವ,ತಾಲೂಕಿನ ಶಕ್ತಿ ದೇವತೆ,ಭೂಮಿತಾಯಿ ಎಂದೇ ಪ್ರಸಿದ್ಧವಾಗಿರುವ, ಶ್ರೀಶಾಂತಾದುರ್ಗಾ ದೇವಿಯ ಬಂಡಿ ಹಬ್ಬದ ವಿಧಿ ವಿಧಾನಗಳು ಅಕ್ಷಯ ತೃತೀಯದ ಶುಭ ದಿನದಂದೇ ಸಾಸಿ ಹಾಕುವ ಆಚರಣೆಯ ಮೂಲಕ ಆರಂಭ ಗೊಳ್ಳುವ ಸಂಪ್ರದಾಯ ಈ ಹಿಂದಿನಿಂದಲೂ ಇದ್ದು, ಮೇ 10 ರ ಶುಕ್ರವಾರ ಶುಭರಂಭಗೊಂಡಿದೆ.

ಕುಂಬಾರಕೇರಿಯ ಕಳಸ ದೇವಾಲಯದಲ್ಲಿ ಗಿಂಡಿ ತುಂಬುವ ಆಚರಣೆ ನಡೆಸಿ ಸಂಜೆ ಶ್ರೀದೇವರ ಕಳಸದ ಮೆರವಣಿಗೆ ಕಳಸ ದೇವಾಲಯದಿಂದ ಛತ್ರ, ಚಾಮರ,ಪಂಚ ವಾದ್ಯಗಳ ವೈಭವದೊಂದಿಗೆ ಶ್ರೀಶಾಂತಾದುರ್ಗಾ ದೇವಾಲಯಕ್ಕೆ ತೆರಳಿತು. ಕುಂಬಾರಕೇರಿಯಿಂದ ಪಟ್ಟಣದ ಶ್ರೀ ಶಾಂತಾದುರ್ಗಾ ದೇವಾಲಯದವರೆಗೆ ಮಾರ್ಗದರ್ಶನದಲ್ಲಿ ಭಕ್ತರು ತಮ್ಮ ಮನೆ,ಅಂಗಡಿ ಮುಂಗಟ್ಟುಗಳ ಎದುರು ತಳಿರು ತೋರಣಗಳಿಂದ ಶೃಂಗರಿಸಿ ದೇವರ ಕಳಸಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ದೇವರ ಕಳಸದ ಮೆರವಣಿಗೆಯಲ್ಲಿ ಗುನಗರು, ಬಿಡುಗುನಗರು, ಕಟ್ಟಿಗೆದಾರರು, ಮೊಕ್ತೇಸರರು, ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಅತಿ ದೊಡ್ಡ ಬಂಡಿ ಹಬ್ಬ ಎಂದೇ ಕರೆಯಲ್ಪಡುವ ಭೂಮ್ತಾಯಿಯ ಬಂಡಿ ಹಬ್ಬ ಸುಮಾರು 15 ದಿನಗಳ ಕಾಲ ನಡೆಯಲಿದ್ದು ಪ್ರತಿದಿನ ದೇವರ ಕಳಸದ ಮೆರವಣಿಗೆ, ಆಡುಕಟ್ಟೆ ಕಾರ್ಯಕ್ರಮಗಳು ನಡೆಯಲಿವೆ.

ಈ ಬಾರಿ ಮೇ 23 ರಂದು ಅಂಕೋಲಾ ಬಂಡಿಹಬ್ಬ ನಡೆಯಲಿದ್ದು, ದೇವರು ಉಲಿ ಚಪ್ಪರ ಏರುವ ಕಾರ್ಯಕ್ರಮ ನಡೆಯಲಿದೆ. ಮಾರನೇ ದಿನ ಮರು ಬಂಡಿಹಬ್ಬ ಹಾಗೂ ಗ್ರಾಮ ದೇವರುಗಳ ಹರಕೆ ಸಂದಾಯ ನಡೆಯಲಿದ್ದು,ದೇಶ ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ಭಕ್ತರು ,ತಾಯಿಯ ದರ್ಶನ ಪಡೆದುಕೊಂಡು ಪುನೀತರಾಗಲಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button