ಕುಮಟಾ: ಮೂರು ಲಕ್ಷ ಕೋಟಿ ಬಜೆಟಿನ ಮೂರರ ಒಂದು ಅಂಶ ಗೋವಿಗಾಗಿ ಸಿಕ್ಕಿದರೂ 3000 ಕೋಟಿ ಗೋವಿನ ಸಂರಕ್ಷಣೆಗೆ ವಿನಿಯೋಗವಾಗಲಿದೆ. ನಮ್ಮ ನೇತಾರರು ಈ ಕುರಿತಾಗಿ ಹೋರಾಟ ಮಾಡಬಲ್ಲವರಾದರೆ, ಆ ತಾಕತ್ತು ಅವರಿಗಿದ್ದರೆ ಗೋ ಬಜೆಟ್ ಮಂಡಿಸಲಿ ಎಂದು ಸೆಲ್ಕೋ ಸೋಲಾರ್ ನ ಸಿ.ಇ.ಓ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ ಹೇಳಿದರು. ಅವರು ಹೊಸಾಡದ ಅಮೃತಧಾರಾ ಗೋಶಾಲೆಯಲ್ಲಿ ನಡೆದ “ಗೋ ಸಂಧ್ಯಾ” ಕಾರ್ಯಕ್ರಮದಲ್ಲಿ ಗೋ ಸೇವಕರನ್ನು ಗೌರವಿಸಿ ಮಾತನಾಡಿದರು. ಭಾರತದ ಪುಣ್ಯಭೂಮಿಯಲ್ಲಿ ಗೋವಿನ ರಕ್ಷಣೆಗಾಗಿ ಪ್ರತ್ಯೇಕ ಬಜೆಟ್ ಹಾಗೂ ತೆರಿಗೆ ಹಣ ವಿನಿಯೋಗವಾಗುವ ಕಾಲ ಬಂದರೆ ಮಾತ್ರವೇ ಅದು ನಿಜವಾದ ಭಾರತದ ಸ್ವಾತಂತ್ರ‍್ಯ ಎಂದು ಅಭಿಪ್ರಾಯಪಟ್ಟರು.
ಗೋವು ಹಾಗೂ ಮಾನವನ ನಡುವಿನ ಸಂಬoಧದ ಕುರಿತಾಗಿ ಮಹಾಭಾರತದ ಕಥಾನಕಗಳನ್ನು ಉಲ್ಲೇಖಿಸಿದ ಅವರು ಗೋವು ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಈ ದೇಶದ ಸಂಸ್ಕೃತಿ ಉಳಿಯುತ್ತದೆ. ಎಂದು ಅಭಿಪ್ರಾಯಪಟ್ಟರು. ಗೋ ಸಂತರ್ಪಣೆ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ ಐದು ಸಾವಿರಕ್ಕೂ ಅಧಿಕ ಜನರ ಕೂಡುವಿಕೆಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು. ಎರಡು ಕಬ್ಬಿನ ಗಾಣಗಳ ನಡುವಿನ ಭವ್ಯವೇದಿಕೆಯಲ್ಲಿ ಗೋವನ್ನು ಸಾಕಲು ಗೋಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸುವ ಹಾಗೂ ಗೋವಿನ ಸೇವೆ ಮಾಡುತ್ತಿರುವ ಗೋ ಸೇವಕರಿಗೆ “ಗೋಪಾಲ ಗೌರವ” ನೀಡುವ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ್ನಣೆ ಗಳಿಸಿದವು.
ಕುಮಟಾದ ಪಿಎಸ್‌ಐ ಮಂಜುನಾಥ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಷ್ಟು ಸುದೀರ್ಘಕಾಲ ಗೋಶಾಲೆಯನ್ನು ನಡೆಸುವುದು ಎಷ್ಟು ಕಠಿಣ ಎಂಬ ಅರಿವು ನಮಗಿದೆ. ಗೋ ಸಂರಕ್ಷಣೆಯಲ್ಲಿ ಪೊಲೀಸರಾದ ನಾವುಗಳು ನಿರ್ವಹಿಸಬೇಕಾದ ಕರ್ತವ್ಯವೂ ಹೆಚ್ಚಿದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ತಡೆದು ಅವುಗಳನ್ನು ಯಾವ ರೀತಿ ವ್ಯವಸ್ಥೆ ಮಾಡಬೇಕು ಎಂದು ಚಿಂತೆ ನಮಗಾದಾಗಲೆಲ್ಲ, ಅಮೃತಧಾರಾ ಗೋ ಶಾಲೆ ನಮ್ಮ ಜೊತೆಗೆ ಸಹಕಾರ ನೀಡಿದೆ. ಹೀಗಾಗಿ ಗೋಶಾಲಾ ಸಮಿತಿಗೆ ಧನ್ಯವಾದಗಳು ಎಂದರು.
ವಿಸ್ಮಯ ನ್ಯೂಸ್, ಕುಮಟಾ