Focus NewsImportant
Trending

ಬಿ. ಜೆ. ಪಿ. ಮಹಿಳಾ ಮೋರ್ಚಾ ದವರಿಂದ ವಿಶೇಷ ಸಮಾವೇಶ: ಜಿಲ್ಲೆಯ ಏಕೈಕ ಮಹಿಳಾ ಶಾಸಕಿಗೆ ಒಲಿದು ಬರಲಿದೆಯಂತೆ ಸಚಿವ ಸ್ಥಾನ?  

ಅಂಕೋಲಾ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಉ.ಕ ಜಿಲ್ಲಾ ಬಿಜೆಪಿ ಘಟಕದ  ಮಹಿಳಾ ಮೋರ್ಚಾ ವತಿಯಿಂದ  ವಿಶೇಷ ಸಮಾವೇಶವನ್ನು  ಕಾರವಾರದ ಮಿತ್ರ ಸಮಾಜ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮಹಿಳೆಯರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ  ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದ್ದು ಸರ್ಕಾರದ ಯೋಜನೆಗಳ ಕುರಿತು ಪ್ರತಿ ಕುಟುಂಬಗಳ ಮಹಿಳೆಯರಿಗೆ ತಿಳಿಸಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಹೊಣೆಗಾರಿಕೆ ಮಹಿಳಾ ಮೋರ್ಛಾದ ಕಾರ್ಯಕರ್ತೆಯರ ಮೇಲಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಶಾಸಕಿ ರೂಪಾಲಿ ನಾಯ್ಕ ಅವರು ಮತ್ತೊಮ್ಮೆ ಆಯ್ಕೆ ಆಗಲು ಸಹಕರಿಸಬೇಕು ಎಂದು ಅವರು ಕರೆ ನೀಡಿದರು. ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಮಹಿಳೆಯರ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇಲ್ಲ ಸಲ್ಲದ ಆರೋಪಿಗಳನ್ನು ಮಾಡುವ ಜನರ ಮಾತುಗಳಿಗೆ ಕಿವಿ ಕೊಡದೇ ಪಕ್ಷದ ಸಂಘಟನೆಗೆ ದುಡಿಯಬೇಕು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ದೂಳಿಪಟವಾಗುವುದು  ಖಚಿತ ನಾನು ಶಾಸಕಿಯಾಗಲು ಪಕ್ಷದ ರಾಷ್ಟ್ರ – ರಾಜ್ಯ, ಜಿಲ್ಲಾ ಮಟ್ಟದ ಹಾಗೂ ನನ್ನ ಕ್ಷೇತ್ರದ ಹಿರಿ-ಕಿರಿಯ ನಾಯಕರ, ಸಮಸ್ತ ಮತದಾರ ಬಂಧುಗಳ ಆಶೀರ್ವಾದ ಕಾರಣ ಅದಕ್ಕಾಗಿ ಅವರೆಲ್ಲರಿಗೂ ಮನದಾಳದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್,ಮುಖ್ಯ ವಕ್ತಾರ ಆದರ್ಶ ಗೋಖಲೆ, ಮಹಿಳಾ ಮೋರ್ಛಾ ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದಂ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಮಹಿಳಾ ಮೋರ್ಛಾ ಅಧ್ಯಕ್ಷೆ ಶೋಭಾ ನಾಯ್ಕ, ರಾಜ್ಯ ಕಾರ್ಯಕಾರಿಣಿ ಪ್ರಭಾರಿ ರೇಣುಕಾ ನಾಗರಾಜ, ಪ್ರಮುಖರಾದ ಅನುರಾಧಾ ನಾಯ್ಕ, ಉಷಾ ಹೆಗಡೆ, ಗುರುಪ್ರಸಾದ್ ಹೆಗಡೆ, ಹೂವಾ ಖಂಡೇಕರ್, ಚಂದ್ರು ಎಸಳೆ ಮೊದಲಾದವರು ಉಪಸ್ಥಿತರಿದ್ದರು.

ಅಸ್ನೋಟಿ ಸೇರಿದಂತೆ  ವಿವಿಧ ಗ್ರಾಮ ಪಂಚಾಯತ್ ಪ್ರಮುಖರು ಶಾಸಕಿ ರೂಪಾಲಿ ನಾಯ್ಕ ಇವರ ನೇತೃತ್ಪ ಬೆಂಬಲಿಸಿ ಬಿಜೆಪಿ ಸೇರ್ಪಡೆಗೊಂಡರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಮತ್ತು, ಪಕ್ಷಾಭಿಮಾನದ ಮೂಡಿಸುವ ಕಾರ್ಯಕ್ರಮ ನಡೆದವು. ಕಾರವಾರ ಮಹಿಳಾ ಘಟಕದ ಸದಸ್ಯರ ಜೊತೆ ಶಾಸಕಿ ರೂಪಾಲಿ ನಾಯ್ಕ, ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು. ಸಾವಿರಾರು ಜನರು ಸಮಾವೇಷದಲ್ಲಿ ಪಾಲ್ಗೊಂಡು ಪಕ್ಷ ಬಲವರ್ಧನೆಗೆ ಶ್ರಮಿಸುವ ಪ್ರತಿಜ್ಞೆ ಮಾಡಿದರು. ಜಿಲ್ಲೆಯ ಏಕೈಕ ಮಹಿಳಾ ಶಾಸಕಿ ಆಗಿರುವ ರೂಪಾಲಿ ನಾಯ್ಕ, ಮುಂದಿನ ಚುನಾವಣೆಯಲ್ಲಿ ಗೆದ್ದು ಬಂದು ಸಚಿವಸ್ಥಾನ ಅಲಂಕರಿಸುವ ಸಾಧ್ಯತೆ ಹೆಚ್ಚಿರುವುದರಿಂದ, ಅವರ ಗೆಲುವಿಗೆ ಕಂಕಣಬದ್ಧರಾಗಲು ಕಾರ್ಯಕರ್ತರು ಉತ್ಸಾಹ ತೋರಿದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button