ಮಕ್ಕಳನ್ನು ಶಿಕ್ಷಣಕ್ಕಾಗಿ ಶಿಕ್ಷಿಸಬೇಡಿ, ಶಿಕ್ಷಣವನ್ನು ಪ್ರೀತಿಸುವಂತೆ ಬೆಳೆಸಿ ಗುರುಮನೆ ಶ್ರೀಧರ
ಅಂಕೋಲಾ : ಮಕ್ಕಳಿಗೆ ಶಿಕ್ಷಣ ಒಂದು ಹಿಂಸೆಯಾಗಬಾರದು. ಪಾಲಕರು ಮಕ್ಕಳಿಗೆ ಶಿಕ್ಷಣವನ್ನು ಪ್ರೀತಿಸುವ ಪೂರಕ ವಾತಾವರಣವನ್ನು ಕಲ್ಪಿಸಬೇಕು. ಮಕ್ಕಳನ್ನು ಶಿಕ್ಷಣಕ್ಕಾಗಿ ಶಿಕ್ಷಿಸಬಾರದು ಎಂದು ಅವರ್ಸಾ ಗುರುಮನೆಯ ಶ್ರೀಧರ್ ನಾಯ್ಕ್ ಹೇಳಿದರು. ಅವರು ತಾಲೂಕಾ ಹಿಂದು ಕೋಮಾರಪಂಥ ಶ್ರೀ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಅವರ್ಸಾದ ಶ್ರೀ ವಿಜಯದುರ್ಗಾ ಸಭಾಭವನದಲ್ಲಿ ಆಯೋಜಿಸಿದ ತಾಲೂಕಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಿಲ ಕ್ಷತ್ರೀಯ ಕೋಮಾರಪಂಥ ಸಮಾಜ ಬೆಂಗಳೂರು ಇದರ ಅಧ್ಯಕ್ಷ ಎಂ.ಪಿ.ನಾಯ್ಕ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ. ಸಂಘ ಸಂಸ್ಥೆಗಳಲ್ಲಿ ಒಗ್ಗಟ್ಟಿದ್ದರೆ ಅಂತಹ ಸಂಸ್ಥೆ ಎತ್ತರಕ್ಕೆ ಬೆಳೆಯುತ್ತದೆ. ಎಲ್ಲರೂ ಜೀವನದಲ್ಲಿ ಖುಷಿಯಾಗಿರಿ ಚಿಂತೆಯಿಲ್ಲದ ಜೀವನ ಅನುಭವಿಸಿ ನಿಮಗೆ ಅವಶ್ಯವಿದ್ದುದನ್ನು ಉಳಿಸಿಕೊಂಡು ಇತರರಿಗೆ ದಾನ ಧರ್ಮ ಮಾಡಿ ಎಂದರು.
ಪುಣೆಯ ಎಂಎಸ್‌ಡಿ ಎನಿಮಲ್ ಹೆಲ್ತ್ ಅಸೋಸಿಯೇಟ್ ಡೈರೆಕ್ಟರ್ ಡಾ. ಕಿರಣ ಅಂಕ್ಲೇಕರ ಮಾತನಾಡಿ
ನೀನು ಯಾರು ಎನ್ನುವದನ್ನು ತಿಳಿದುಕೊಂಡರೆ ನಿನ್ನ ಸ್ಥಾನಮಾನ ಅರಿವಾಗುವದು. ವ್ಯಕ್ತಿಯ ಸ್ಥಾನಮಾನ ಒಳ್ಳೆಯ ಗುಣ ಮತ್ತು ವ್ಯಕ್ತಿತ್ವದಿಂದ ಪರಿಚಯವಾಗಬೇಕೆ ಹೊರತು ಯಾವುದೇ ಜಾತಿ ಮತ ಪಂಥ ಅಥವಾ ಸ್ಥಿತಿಗತಿಗಳಿಂದ ಅಲ್ಲ ಎಂದರು.
ಡಾ.ಅರ್ಚನಾ ನಾಯ್ಕ ಮಾತನಾಡಿ ಹದಿಹರೆಯದ ವಯಸ್ಸಿನಲ್ಲಿ ಮಾನಸಿಕ ಆರೋಗ್ಯ ಬಹುಮುಖ್ಯ. ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಬೆಳೆಸುವುದರಿಂದ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಕೃತ್ಯ ಕೈಗೊಳ್ಳದಂತೆ ತಡೆಯಬಹುದು. ಮತ್ತು ಇಳಿ ವಯಸ್ಸಿನವರ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು.
ಗೋವಾ ಕ್ಷತ್ರೀಯ ಕೋಮಾರಪಂಥ ಸಮಾಜದ ಮಾಜಿ ಅಧ್ಯಕ್ಷ ರಾಮಚಂದ್ರ ಎಸ್ ನಾಯ್ಕ “ಬೆಳಕು” ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿಯ ಪೊಲೀಸ್ ಅಧೀಕ್ಷಕರಾದ ಸುಧಾಕರ.ಎಸ್.ನಾಯ್ಕ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಾಗೂ ಸಿ.ಬಿ.ಎಸ್.ಸಿ ಪಠ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.99% ಅಂಕ ಪಡೆದ ಹಟ್ಟಿಕೇರಿಯ ಅನ್ವಿತಾ ರಾಜು ಪಂತ ಪರವಾಗಿ ಉಪಸ್ಥಿತರಿದ್ದ ಅವರ ಅಜ್ಜಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾಜ ಸೇವಕ ದಿನಕರ ಎಲ್ ನಾಯ್ಕ ಭಾವಿಕೇರಿ, ಉ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಕೋಮಾರಪಂಥ ನೌಕರರ ಪ್ರತಿಷ್ಠಾನ ಕಾರವಾರ ಇದರ ಅಧ್ಯಕ್ಷ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘ ಕಾರವಾರ ಇದರ ಪ್ರಧಾನ ಕಾರ್ಯದರ್ಶಿ ರಮೇಶ ನಾರಾಯಣ ನಾಯ್ಕ ಉಪಸ್ಥಿತರಿದ್ದು ಮಾತನಾಡಿದರು. ಶಿರಸಿ ತಾಲೂಕಾ ಸಿ.ಡಿ.ಪಿ.ಓ ಅರುಣ ನಾಯ್ಕ, ಅಂಕೋಲಾ ತಾ.ಪಂ ಮಾಜಿ ಸದಸ್ಯೆ ಮಂಗಲಾ ಬೆಳ್ಳು ನಾಯ್ಕ ಕುಂಬಾರ ಕೇರಿ ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖೆಯ ಶಿರಸಿ ವಿಭಾಗದ ಲೆಕ್ಕ ಪರಿಶೋಧನಾಧಿಕಾರಿ ರಾಜೇಶ್ ಶ್ರೀಕಾಂತ ರಾಮನಾಥನ್, ಸುಂಕಸಾಳ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಎಂ ನಾಯ್ಕ, ಕೋಮಾರಪಂತ ಶ್ರೀ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಸಮಾಜದ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಶ್ರೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದುರ್ಗಾನಂದ ಎಂ ನಾಯ್ಕ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಕೆ ನಾಯ್ಕ ಸರ್ವರನ್ನು ವಂದಿಸಿದರು. ಸಹ ಕಾರ್ಯದರ್ಶಿ ವಿಜಯಕುಮಾರ ನಾಯ್ಕ ಕನಸಿಗದ್ದೆ ನಿರ್ವಹಿಸಿದರು. ಪುರಸಭೆ ಸದಸ್ಯ ಕಾರ್ತಿಕ ನಾಯ್ಕ ಸೇರಿದಂತೆ ಇತರೆ ಸ್ತರದ ಕೆಲ ಖಾಲಿಯಾಗು ಮಾಜಿ ಜನಪ್ರತಿನಿಧಿಗಳು,
ಸಂಜಯ ನಾಯ್ಕ ಭಾವಿಕೇರಿ, ಖಜಾಂಚಿ ನಿಲೇಶ ನಾಯ್ಕ, ಚಂದ್ರಕಾಂತ ನಾಯ್ಕ, ರಾಜು ಮುರಾರಿ ನಾಯ್ಕ, ಸೇರಿದಂತೆ ಕೋಮಾರ ಪಂಥ ಸಮಾಜದ ಹಿರಿಕಿರಿಯ ಮುಖಂಡರು, ಹಕ್ಕುದಾರರು ಇತರರು ಪಾಲ್ಗೊಂಡಿದ್ದರು. ಸಮಾಜ ಬಾಂಧವರು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ