Follow Us On

WhatsApp Group
Important
Trending

ಊಟಕ್ಕೆಂದು ತೆರಳಿದ್ದ ವೇಳೆ ನದಿಗೆ ಇಳಿದ ಒಂದೇ ಕುಟುಂಬದ ಐವರ ಸಾವು

ಶಿರಸಿ: ಕುಟುಂಬದ ಸದಸ್ಯರೆಲ್ಲರೂ ಸೇರಿ ಊಟಕ್ಕೆಂದು ಶಾಲ್ಮಲಾ ನದಿ ತೀರಕ್ಕೆ ಬಂದ ಸಂದರ್ಭದಲ್ಲಿ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಐವರು ನೀರು ಪಾಲಾಗಿ ಮೃತಪಟ್ಟ ಘಟನೆ ತಾಲೂಕಿನ ಬೈರುಂಬೆ ಸಮೀಪದ ನೆಲ್ಲಿಚೌಕ ಭೂತನಗುಂಡಿಯಲ್ಲಿ ನಡೆದಿದೆ. ಮೃತರನ್ನು ರಾಮನಬೈಲ್ ನಿವಾಸಿಗಳಾದ ಮಹಮ್ಮದ್ ಸಲೀಂ, ಬಾಲಕ ಉಮರ್ ಸಿದ್ದೀಕ್, ಯುವತಿಯರಾದ ನಾದಿಯಾ ಶೇಖ್, ನಬಿಲ್ ಶೇಖ್, ಕಸ್ತೂರಬಾ ನಗರದ ವಿದ್ಯಾರ್ಥಿನಿ ಮಿಸಬಾ ಅಹಮ್ಮದ್ ಎಂದು ತಿಳಿದುಬಂದಿದೆ.

ಕೆಲವು ದಿನಗಳಹಿಂದೆ ಈ ಕುಟುಂಬದಲ್ಲಿ ಮದುವೆಯ ಸಮಾರಂಭ ನಡೆದಿತ್ತು. ಈ ಹಿನ್ನೆಲೆಯಲ್ಲಿ ಊಟವನ್ನು ತಯಾರಿಸಿಕೊಂಡು ಕುಟುಂಬದ 25 ಜನರು ನ ಬೈರುಂಬೆ ಸಮೀಪದ ನೆಲ್ಲಿಚೌಕ ಭೂತನಗುಂಡಿಯ ಬಳಿ ಬಂದಿದ್ದು, ಈ ವೇಳೆಯಲ್ಲಿ ಮಗುವೊಂದು ನೀರಿನಲ್ಲಿ ಆಟ ಆಡುವ ವೇಳೆ ನೀರಿನಲ್ಲಿ ಮುಳುಗುತಿದ್ದದ್ದನ್ನು ಗಮನಿಸಿದ ಮಹಮ್ಮದ್ ಸಲೀಂ ತಕ್ಷಣವೇ ನೀರಿಗೆ ಇಳಿದು ಆ ಮಗುವನ್ನು ಕಾಪಾಡಿದ್ದು, ಆಗ ಆತ ನೀರಿನಲ್ಲಿ ಮುಳುಗುವುದನ್ನು ಗಮನಿಸಿದ ನಾಲ್ವರು ರಕ್ಷಣೆಗೆ ಧಾವಿಸಿದ್ದಾರೆ.

ನೀರಿಗೆ ಇಳಿದ ಆ ನಾಲ್ವರೂ ಸಹ ಮುಳುಗಡೆಯಾದಾಗ ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೋಲೀಸರು ಸ್ಥಳಕ್ಕೆ ತೆರಳಿ ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ. ನಂತರ ಮೃತದೇಹಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಶಿರಸಿಯ ಮಾರಿಕಾಂಬಾ ಲೈಫ್‌ಗಾರ್ಡ ಗೋಪಾಲ ಗೌಡ ತಂಡಕ್ಕೆ ಮಾಹಿತಿ ನೀಡಿದ್ದು, ಅವರು ಘಟನಾ ಸ್ಥಳಕ್ಕೆ ಬಂದು ನೀರಿನಲ್ಲಿ ಹುಡುಕಾಟ ನಡೆಸಿ ಮೃತದೇಹಗಳನ್ನು ನೀರಿನಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಡಿಎಸ್ಪಿ ಕೆ.ಎಲ್. ಗಣೇಶ, ಸಿಪಿಐ ಪಿ. ಸೀತಾರಾಮ, ಪಿಎಸ್‌ಐ ಪ್ರತಾಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ. ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ರಾಮನಬೈಲ್ ಹಾಗೂ ಕಸ್ತೂರಬಾ ನಗರದ ನೂರಾರು ಜನರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕುಟುಂಬದ ಸದಸ್ಯರನ್ನು ಕಳೆÀದುಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಸ್ಮಯ ನ್ಯೂಸ್ ಶಿರಸಿ

Back to top button