ದೇವಸ್ಥಾನಕ್ಕೆ ಹೋಗಿ ಮರಳುತ್ತಿದ್ದ ಮಹಿಳೆಯ  ಮಾಂಗಲ್ಯ ಸರಕ್ಕೆ ಕೈ ಹಾಕಿದವನಿಗೆ ಬಿತ್ತು ಕೈ ಕೋಳ !  ಕಳ್ಳತನ ಮಾಡಿ ಓಡಿ ಹೋಗುವ ಯತ್ನದಲ್ಲಿದ್ದವನಿಗೆ ಪ್ರಸಾದ ತಿನ್ನಿಸಿದ ಸ್ಥಳೀಯರು

ಅಂಕೋಲಾ: ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ಮಹಿಳೆಯೋರ್ವಳನ್ನು ತಡೆದು, ಮಾತನಾಡಿಸುವ ನೆಪದಲ್ಲಿ ಅವಳ ಲಕ್ಷ್ಯವನ್ನು ಬೇರೆಡೆ ಸೆಳೆದು,  ಕತ್ತಿನಲ್ಲಿದ್ದ ಮಾಂಗಲ್ಯ ಸರ ಹರಿದು ಪರಾರಿಯಾಗುವ ಯತ್ನದಲ್ಲಿದ್ದ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ನಡೆದಿದೆ. 

ನನ್ನನ್ನೇ ಮದುವೆಯಾಗು: ಯುವಕ ಬ್ಲಾಕ್ ಮೇಲ್? ಯುವತಿ ನೇಣಿಗೆ ಶರಣು

ಹಟ್ಟಿಕೇರಿಯ ಈಶ್ವರ ದೇವಾಲಯಕ್ಕೆ ಹೋಗಿ  ರುದ್ರಾಭಿಷೇಕ ಮಾಡಿಸಿ ಬರುತ್ತಿದ್ದ ವೇದಾ ಎನ್ನುವ ಮಹಿಳೆಗೆ ಎದುರಾದ ಅಪರಿಚಿತನೊಬ್ಬ ತನ್ನ ಕೈಲಿರುವ ಚೀಟಿಯೊಂದನ್ನು ತೋರಿಸಿ,ಅದರಲ್ಲಿ ಏನು ಬರೆದಿದೆ ಎಂದು ಓದಿ ಹೇಳುವಂತೆ ತಿಳಿಸಿ, ಅವಳ ಲಕ್ಷ್ಯವನ್ನು ಚೀಟಿಯತ್ತ ಸೆಳೆದು, ಆ ಕೂಡಲೇ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿ ಎಳೆದಿದ್ದ. ನಡೆದ ಅಚಾನಕ್ ಘಟನೆಯಿಂದ ಧೈರ್ಯಗುಂದದ ಮಹಿಳೆ ಪ್ರತಿಭಟಿಸಿದ್ದಾಳೆ.

ಈ ವೇಳೆ ಅವಳ ಕತ್ತಿನಲ್ಲಿದ್ದ ಮಾಂಗಲ್ಯ ಸರ ಹರಿದು ಕಳ್ಳ ಸಂದಿ ಗೊಂದಿಗಳಲ್ಲಿ  ಓಡಿ ಪರಾರಿಯಾಗಲೆತ್ನಿಸಿದ್ದ. ಕೂಡಲೇ ಮಹಿಳೆ  ಕಳ್ಳ ಕಳ್ಳ ಎಂದು ಜೋರಾಗಿ ಕೂಗಿ ಕೊಂಡಾಗ ಕಳ್ಳತನದ ಸುದ್ದಿ ಗ್ರಾಮದೆಲ್ಲಡೆ ಹರಡಿ ಆತನ ಪತ್ತೆಗೆ ಜನ ಮುಂದಾಗಿದ್ದಾರೆ, ಸಂಶಯಾಸ್ಪದವಾಗಿ ಹೆದ್ದಾರಿ ದಾಟಿ  ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರೇ ಹಿಡಿದು ಗೂಸಾ ನೀಡಿ ಅಂಕೋಲಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಸಿಪಿಐ ಜೆ.ಆರ್. ಡಿಸೋಜಾ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಆರೋಪಿತನು ಅವರ್ಸಾದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಎನ್ನಲಾಗಿದ್ದು, ಪಕ್ಕದ ತಾಲೂಕಿನ ಮೂಲ ನಿವಾಸಿ ಎನ್ನಲಾಗಿದೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಒಟ್ಟಿನಲ್ಲಿ ಅಮವಾಸ್ಯೆ ದಿನ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಲು ಹೋಗಿ, ಆರೋಪಿತ ತನ್ನ ಕೈಗೇ ಕೋಳ ಹಾಕಿಸಿಕೊಳ್ಳುವಂತಾಗಿರುವುದು ಶ್ರೀ ದೇವರ ಮಹಿಮೆ ಎಂದು ಸ್ಥಳೀಯರು ನಂಬಿಕೆ ವ್ಯಕ್ತಪಡಿಸುತ್ತಿದ್ದಾರೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version