ಮದುವೆ ಆಹ್ವಾನಿತರಿಗೆ ಸಸಿ ಕೊಡುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪತ್ರಕರ್ತ ಪ್ರಸನ್ನ ಭಟ್
ಭಟ್ಕಳ: ಮದುವೆಯ ಶುಭ ಸಮಾರಂಭಕ್ಕೆ ಬಂದವರಿಗೆ ಫಲ, ತಾಂಬೂಲ ನೀಡುವುದು ಸಂಪ್ರದಾಯ. ಆದರೆ, ಪರಿಸರ ಪ್ರೇಮದ ಬಗ್ಗೆ ಜಾಗೃತಿ ಮೂಡಿಸಲು ತನ್ನ ಮದುವೆಯ, ಆಹ್ವಾನಿತರಿಗೆ ಸಸಿಗಳನ್ನು ನೀಡುವ ಮೂಲಕ ಪರಿಸರದ ಮೇಲಿನ ಜಾಗೃತಿಗೆ ಈ ದಂಪತಿಗಳು ಸಾಕ್ಷಿಯಾದರು.
ಮದುವೆ ಮನೆಗೆ ಬಂದವರು ಊಟ ಮಾಡಿಕೊಂಡು ಹೋಗುವಾಗ ಅವರ ಕೈಯಲ್ಲೊಂದು ಬಟ್ಟೆಯ ಪುಟ್ಟ ಬ್ಯಾಗ್ ಅದರಲ್ಲೊಂದು ಗಿಡ. ಯಾರ ಕೈಲಿ ನೋಡಿದರೂ ಹಸಿರಿನ ಗಿಡವೇ ತುಂಬಿತ್ತು. ಫಲದ ಜತೆಗೊಂದು ಉಪಯುಕ್ತ ಗಿಡವನ್ನು ನೀಡಲಾಯಿತು. ಬಂದವರಿಗೂ ಇದು ಹೊಸತೆನಿಸಿದರೂ ಮೆಚ್ಚುಗೆಯಾಯಿತು. “ಮದುವೆ ಮನೆಗೂ ಗಿಡಗಳಿಗೂ ಸಂಬಂಧ ಇದೆ. ಅಷ್ಟೇ ಅಲ್ಲ ಯಾವುದೇ ಸಮಾರಂಭ ಮಾಡಿದರೂ ಅದರಲ್ಲೊಂದು ಅರ್ಥಪೂರ್ಣ ಆಚರಣೆ ಇರಬೇಕು”ಎಂಬ ಮಾಹಿತಿಯನ್ನು ಈ ದಂಪತಿಗಳು ಸಾರಿದ್ದಾರೆ.
ತಾಲೂಕಿ ಕಡವಿನಕಟ್ಟೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ದ್ರಶ್ಯ ಕಂಡು ಬಂದಿತು. ವೃತ್ತಿಯಲ್ಲಿ ಪತ್ರಕರ್ತರಾದ ಪ್ರಸನ್ನ ಭಟ್ ಪ್ರತಿಕ್ಷಾ ಎನ್ನುವ ಯುವತಿಯನ್ನು ಪ್ರೀತಿಸಿ ಮದುವೆ ಯಾಗುದರೊಂದಿಗೆ ತಮ್ಮ ಪರಿಸರದ ಮೇಲಿನ ಪ್ರೀತಿ ಹಾಗೂ ಕಾಳಜಿಯನ್ನು ತೋರಿಸಿದ್ದಾರೆ.
ಸುಮಾರು ಮೂರ್ನಾಲ್ಕು ಜಾತಿಯ 800ಕ್ಕೂ ಅಧಿಕ ಗಿಡಗಳನ್ನು ಮದುವೆಗೆ ಬಂದ ಆಹ್ವಾನಿತರಿಗೆ ಗಿಡಗಳನ್ನು ನೀಡುವ ಮೂಲಕ `ಪರಿಸರ ಉಳಿಸಿ’ ಎಂಬ ಪ್ರಾಯೋಗಿಕ ಪಾಠ ಮಾಡಿದರು. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತದ ಅವಧಿಯಲ್ಲಿ ಕನಿಷ್ಠ ೫೦ ಮರಗಳನ್ನು ನಾಶಪಡಿಸುತ್ತಾನೆ. ಅಂದರೆ, ಅಷ್ಟು ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಕೆಲಸಗಳನ್ನು ಮಾಡುತ್ತಾನೆ. ಆದರೆ, ಅದಕ್ಕೆ ಪರ್‍ಯಾಯವಾಗಿ ಗಿಡಗಳನ್ನು ನೆಡದಿದ್ದರೆ ಪರಿಸರ ನಾಶದಿಂದ ನಮ್ಮ ಜೀವನಕ್ಕೇ ಕುತ್ತು ತಂದುಕೊಳ್ಳಬಹುದಾದ ಅನಾಹುತಗಳನ್ನು ಅನಿವಾರ್‍ಯವಾಗಿ ಎದುರಿಸಬೇಕಾಗುತ್ತದೆ. ಒಬ್ಬೊಬ್ಬರೂ ಕಡಿಮೆ ಎಂದರೆ ೧೦ ಗಿಡಗಳನ್ನಾದರೂ ನೆಟ್ಟು ಬೆಳೆಸಿದರೆ ಅದರಿಂದ ಉತ್ತಮ ಪರಿಸರ ನಿರ್ಮಾಣ ಮಾಡುವ ಎಲ್ಲ ಅವಕಾಶಗಳನ್ನೂ ಸೃಷ್ಟಿಸಿದಂತಾಗುತ್ತದೆ ಎಂಬುದು ಈ ದಂಪತಿಗಳ ಆಶಯವಾಗಿದೆ