Big News
Trending

ಹೆಚ್ಚುತ್ತಲೇ ಇದೆ ಮಕ್ಕಳ ಸಂಖ್ಯೆ: ಮೂಲಭೂತ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳ ಪರದಾಟ: ಶಾಲೆಗೆ ತೆರಳಿ ಆಕ್ರೋಶ ಹೊರಹಾಕಿದ ಪಾಲಕರು

ಕಾರವಾರ: ಅದು ತಾಲೂಕಿನಲ್ಲಿಯೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪಬ್ಲಿಕ್ ಶಾಲೆ. ಮಾತ್ರವಲ್ಲದೆ ಕನ್ನಡ ಇಂಗ್ಲೀಷ್ ಎರಡು ಮಾಧ್ಯಮಗಳಿರುವ ಕಾರಣ ಪ್ರತಿ ವರ್ಷ ಮಕ್ಕಳ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ. ಆದರೆ ಶಾಲೆಯಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಇದೀಗ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕಾರವಾರ ತಾಲ್ಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ. ಆದರೆ ಶಾಲೆಯಲ್ಲಿನ ಮೂಲಭೂತ ಸೌಲಭ್ಯಗಳಕೊರತೆ, ಸ್ವಚ್ಚತೆ ಕಾಪಾಡದಿರುವುದು, ಮುಖ್ಯ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಆಗಮಿಸದಿರುವುದಕ್ಕೆ ಇಂದು ಪಾಲಕರು ಶಾಲೆಗೆ ತೆರೆಳಿ ಆಕ್ರೋಶ ಹೊರ ಹಾಕಿದ್ದಾರೆ. ಶಾಲೆಯಲ್ಲಿ 280 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇದಲ್ಲದೆ ಪಕ್ಕದಲ್ಲಿಯೇ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಸಹ ಇದೆ.

ಆದರೆ ಇಷ್ಟೊಂದು ಶಾಲಾ ಮಕ್ಕಳಿಗೆ ಇದೀಗ ಕೇವಲ ಮೂರು ಶೌಚಾಲಯಗಳಿದ್ದು ಅದು ಕೂಡ ಗಬ್ಬು ನಾರುತ್ತಿದೆ. ಆದರೆ ಏನು ಅರಿಯದ ಮಕ್ಕಳು ಅಲ್ಲಿಯೇ ಶೌಚಕ್ಕೆ ತೆರಳುತ್ತಿದ್ದಾರೆ. ಶೌಚಾಲಯ ಕಟ್ಟಿದ ಬಳಿಕ ಸ್ವಚ್ಚತೆಯನ್ನೆ ಮಾಡದ ರಿತಿ ಇದೆ. ಅಲ್ಲದೆ ಮುಖ್ಯ ಶಿಕ್ಷಕರು ಕೂಡ ಒಂದು ದಿನವೂ ಪ್ರಾರ್ಥನೆ ಆಗಮಿಸುವುದಿಲ್ಲ. ಕೇಳಿದರೆ ಅಡುಗೆಗೆ ತರಕಾರಿ ತರುವುದಕ್ಕೆ ತೆರಳಿರುವುದಾಗಿ ತಿಳಿಸುತ್ತಾರೆ. ಜೊತೆಗೆ ಶಾಲೆಗಳಲ್ಲಿ ಕೊಠಡಿ ಸಂಖ್ಯೆ ಕಡಿಮೆ ಇದೆ. ಇದ್ದ ಕೊಠಡಿಗಳು ಸೋರುವುದರಿಂದ ಮಕ್ಕಳು ಪರದಾಡಬೇಕಾಗಿದೆ ಎಂದು ಪಾಲಕರು ಹಾಗೂ ಎಸ್ ಡಿಎಂಸಿ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ಬಗ್ಗೆ ಮುಖ್ಯೋಪಾಧ್ಯಾಯರನ್ನು ಕೇಳಿದ್ರೆ ಶಾಲೆಗೆ ಯಾವುದೇ ಅಟೆಂಡರ್ ಇಲ್ಲ. ಇದರಿಂದ ನಾವೇ ಶೌಚಾಲಯ ತೊಳೆಯಬೇಕಾಗಿದೆ. ಆದರೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಸ್ವಚ್ಚತೆ ಆಗಿಲ್ಲ. ಜೊತೆಗೆ ಕೊಠಡಿಗಳ ಸಂಖ್ಯೆ ಕೂಡ ಕಡಿಮೆ ಇದೆ. ತಾಲ್ಲೂಕಿನಲ್ಲಿಯೇ ಅತಿ ಹೆಚ್ಚಿನ ಸಂಖ್ಯೆ ಶಾಲೆಯಲ್ಲಿದ್ದು ನಮಗೂ ಸಾಕಷ್ಟು ಕೆಲಸದ ಹೊರೆ ಇದೆ. ಇದೆಲ್ಲದರ ಬಗ್ಗೆ ಇಂದು ಪಾಲಕರೊಂದಿಗೆ ಸಭೆ ನಡೆಸಲಾಗಿದೆ. ಶೌಚಾಲಯ ಸ್ವಚ್ಚಗೊಳಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮತ್ತು ತರಕಾರಿಗಳನ್ನು ವಾರಕ್ಕೆ ಎರಡು ದಿನ ಅಡುಗೆಯವರೇ ತರುವಂತೆ ಪಾಲಕರು ಸೂಚಿಸಿದ್ದಾರೆ. ನಾನೂ ಕೂಡ ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸುವುದಾಗಿ ಮುಖ್ಯೋಧ್ಯಾಪಕರಾದ ಧ್ರುವ ಆಗೇರ ತಿಳಿಸಿದ್ದಾರೆ. ಒಟ್ಟಾರೆ ಅತಿ ಹೆಚ್ಚಿನಸಂಖ್ಯೆಯಲ್ಲಿರುವ ಹೆಸರಾಂತ ಸರ್ಕಾರಿ ಶಾಲೆಯಲ್ಲಿನ ಅವ್ಯವಸ್ಥೆಯಿಂದಾಗಿ ಮಕ್ಕಳು ಪರದಾಡುವಂತಾಗಿದೆ. ಇನ್ನಾದರೂ ಶಿಕ್ಷಕರು ಹಾಗೂ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button