Important
Trending

ಜುಲೈ 10ರ ವರೆಗೆ ಭಾರೀ ಮಳೆ:ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ;ರೆಡ್ ಅಲರ್ಟ್ ಘೋಷಣೆ

ಕಾರವಾರ: ರಾಜ್ಯದಲ್ಲಿ ಜುಲೈ 10 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.  ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಮೀನುಗಾರರು ಕಡಲ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ

ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕರಾವಳಿ ತಾಲೂಕುಗಳಾದ ಕುಮಟಾ, ಹೊನ್ನಾವರ, ಭಟ್ಕಳ, ಅಂಕೋಲಾ,‌ಕಾರವಾರದಲ್ಲಿ ರಜೆ ಘೋಷಣೆಯಾಗಿದೆ.

ಕುಮಟಾದಲ್ಲಿ ಗಾಳಿ ಮಳೆ: ಹಲವು ಗೂಡಂಗಡಿಗಳು ನೆಲಸಮ

ಮಳೆಯ ಅಬ್ಬರ ಜೋರಾಗಿದ್ದು, ಇಂದು ಕುಮಟಾ ಪಟ್ಟಣದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ರ ಅಕ್ಕಪಕ್ಕದ ಗೂಡಂಗಡಿಗಳು ಸೇರಿದಂತೆ  ಅನೇಕ ಕಡೆ ಹಾನಿ ಸಂಭವಿಸಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಹೌದು ಕುಮಟಾ ಪಟ್ಟಣದ ಮಾಸ್ತಿ ಕಟ್ಟೆ ಸಮೀಪ ಮಧ್ಯಾಹ್ನದ ವೇಳೆ ಒಂದೇ ಸಮನೆ ಬಂದ ಭಾರೀ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ.

ರಸ್ತೆಯಂಚಿನ ಗೂಡಂಗಡಿ ಸೇರಿದಂತೆ ಅಕ್ಕಪಕ್ಕದ ಜಾಹೀರಾತುಗಳ ಬೋರ್ಡ್ ಮುಂತಾದವುಗಳು ಗಾಳಿಯ ರಭಸಕ್ಕೆ ನೆಲಸಮವಾಗಿದೆ. ಅಲ್ಲದೇ ಕರೆಂಟ್ ಲೈನ್ ಸಹ ಹರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯ ಪರಿಣಾಮ ರಸ್ತೆಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು.

ಹೊನ್ನಾವರದಲ್ಲೂ ಮಳೆ ಅವಾಂತರ

ಹೊನ್ನಾವರ ತಾಲೂಕಿನಲ್ಲಿ ಗುರುವಾರ ಸುರಿದ  ಭಾರಿ ಮಳೆಗೆ ತಾಲೂಕಿನ ಕೆಲವು ಭಾಗದಲ್ಲಿ ಹಾನಿ, ಅವಘಡ ನಡೆದಿದ್ದು , ಕೆಲವೆಡೆ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆತಂಕ ಮುಂದುವರಿದಿದೆ. ತಾಲೂಕಿನ ಮಂಕಿ ಗ್ರಾಮದ ನಾಕೂದಾಮೊಹಲ್ಲಾ ಮಜರೆಯಲ್ಲಿ ವ್ಯಕ್ತಿಯೊಬ್ಬರ ಮನೆಗೆ ನೀರು ನುಗ್ಗಿದೆ. ಕರ್ಕಿ ಮಠದ ಕೇರಿಯಲ್ಲೂ ಮನೆಯಯೊಂದಕ್ಕೆ ನೀರು ನುಸುಳಿದೆ. ನಗರಬಸ್ತಿಕೇರಿಯಲ್ಲಿ ಮೂರ್ನಾಲ್ಕು ಮನೆಗೆ ಹಾನಿಯಾಗಿದೆ. 

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button