ಅಂಕೋಲಾ: ಬೀಜ ಬಿತ್ತನೆ ಕೆಲಸದಲ್ಲಿ ತೊಡಗಿಕೊಂಡಿದ್ದ ಕೃಷಿ – ಕೂಲಿಯೋರ್ವ ಆಕಸ್ಮಿಕವಾಗಿ ಗದ್ದೆಯಲ್ಲಿಯೇ ಕುಸಿದು ಬಿದ್ದು , ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟ ಘಟನೆ ಬಬ್ರುವಾಡಾ ವ್ಯಾಪ್ತಿಯ ಬೇಳಾಬಂದರಿನಲ್ಲಿ ಸಂಭವಿಸಿದೆ. ರಾಜು ಗಣಪತಿ ಗಾಂವಕರ (52 ) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಶನಿವಾರ ಬೆಳಿಗ್ಗೆ ಮನೆಯ ಹತ್ತಿರದ ಗದ್ದೆಯಲ್ಲಿ ಭತ್ತದ ಬೀಜ ಬಿತ್ತನೆ ಮಾಡುತ್ತಿದ್ದ ಸಂರ್ಭದಲ್ಲಿ ಆತನಲ್ಲಿ ಕಾಣಿಸಿಕೊಂಡ ಎದೆನೋವು ಇಲ್ಲವೇ ಇನ್ನಿತರೆ ಆಕಸ್ಮಿಕ ಆರೋಗ್ಯ ಏರುಪೇರಿನಿಂದ ಸ್ಥಳದಲ್ಲೇ ಕುಸಿದು ಬಿದ್ದವನನ್ನು, ಆತನ ಜೊತೆ ಅಲ್ಲಿಯೇ ಕೃಷಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಕರೆತಂದರಾದರೂ, ಆ ವೇಳೆಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾನೂನು ಕ್ರಮ ಮುಂದುವರೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ್ ನಾಯ್ಕ, ಮಹೇಶ ಮುಕುಂದ ನಾಯ್ಕ ಬೇಳಾ ಬಂದರ, ಸಂತೋಷ ಬೊಮ್ಮಯ್ಯ ನಾಯ್ಕ, ಸುರೇಶ ದೀಪಾ ಗಾಂವಕರ, ಸುಧಾಕರ ಕೇಶವ ಗಾಂವಕರ, ಪ್ರಶಾಂತ ನಾಗೇಕರ ಮತ್ತಿತರರು ಮೃತ ದೇಹ ಸಾಗಿಸಲು ಸಹಕರಿಸಿದರು. ಕಂದಾಯ ಇಲಾಖೆಯವರು ಘಟನೆ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ.,
ಮನೆಗೆ ಆಧಾರ ಸ್ಥಂಭದಂತಿದ್ದ ರಾಜುವನ್ನು ಕಳೆದು ಕೊಂಡ ಬಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದು, ನೊಂದ ಕುಟುಂಬಕ್ಕೆ ಸರ್ಕಾರ ಶೀಘ್ರವಾಗಿ ಯೋಗ್ಯ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕೃಷಿ – ಕೂಲಿ ಮೂಲಕ ಶ್ರಮ ಜೀವಿಯಾಗಿದ್ದ ರಾಜು ಗಾಂವಕರ ಅಕಾಲಿಕ ನಿಧನಕ್ಕೆ ಶಾಸಕ ಸತೀಶ ಸೈಲ್ ಸೇರಿದಂತೆ ಇತರೇ ಪ್ರಮುಖರು, ಮತು ಲಕ್ಷೇಶ್ವರ ಹಾಗೂ ಬೇಳಾ ಬಂದರ ಗ್ರಾಮದ ಅನೇಕ ನಾಗರಿಕರು ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ