Important
Trending

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂದಿಗೆಯ ವಿಠೋಬ ನಾಯಕ  ವಿಧಿವಶ: ಐದು ದಶಕಗಳಿಗೂ ಹೆಚ್ಚಿನ ಕಾಲ ಯಕ್ಷ ರಂಗದಲ್ಲಿ ಮಿಂಚಿದ್ದ ಕಂಚಿನ ಕಂಠದ ಮೇರು ಕಲಾವಿದ ಇನ್ನಿಲ್ಲ

ಅಂಕೋಲಾ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ವಂದಿಗೆಯ ವಿಠೋಬ ಹಮ್ಮಣ್ಣ ನಾಯಕ (88) ಅವರು ಗುರುವಾರ ವಿಧಿವಶರಾದರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸುಮಾರು ಐದು ದಶಕಗಳಿಗೂ ಹೆಚ್ಚಿನ ಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಪಾತ್ರಗಳಿಗೆ ಜೀವಂತಿಕೆ ತುಂಬಿದ್ದ ಇವರು ತಮ್ಮ ಗಂಭೀರ ಪಾತ್ರನಿರ್ವಹಣೆ, ಮನೋಜ್ಞ ಅಭಿನಯ, ಅದ್ಭುತ ಮಾತುಗಾರಿಕೆ ಮೂಲಕ ಯಕ್ಷರಂಗದ ಮೇರು ಕಲಾವಿದರಾಗಿ  ಗುರುತಿಸಿಕೊಂಡಿದ್ದರು.

 ಭೀಮ, ರಾವಣ,ಯಮ, ಘಟೋದ್ಗಜ ಮೊದಲಾದ ಮುಖ್ಯ ಪಾತ್ರಗಳಿಗೆ ತಕ್ಕಂತೆ ರೌದ್ರ ಅಭಿನಯ ಹಾಗೂ ಕಂಚಿನ ಕಂಠದ ಮಾತುಗಾರಿಕೆ ಮೂಲಕ, ಕಲಾ ಕ್ಷೇತ್ರದಲ್ಲಿ ಮನೆಮಾತಾದ ವಿಠೋಬ ನಾಯಕ ಅವರ ಯಕ್ಷರಂಗದ ಸೇವೆಯನ್ನು ಗುರುತಿಸಿ 2011 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.ತಮ್ಮ ಇಳಿ ವಯಸ್ಸಿನಲ್ಲಿಯೂ ಕುಗ್ಗದ ಉತ್ಸಾಹ, ಅದೇ ಕಂಠಸಿರಿ, ಶಿಸ್ತು ಬದ್ಧ ಜೀವನ ಶೈಲಿಯೊಂದಿಗೆ ಎಲ್ಲರಿಗೂ ಮಾದರಿಯಾಗಿ ಬಾಳಿ ಬದುಕಿದ್ದರು.

ಯಕ್ಷದಿಗ್ಗಜ ವಿಠೋಬ ನಾಯಕ ಅವರ ನಿಧನಕ್ಕೆ ಯಕ್ಷರಂಗದ ಅನೇಕ ಹಿರಿ ಕಿರಿಯ ಕಲಾವಿದರು, ಯಕ್ಷರಂಗದ ಅಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ ಪ್ರಧಾಧಿಕಾರಿಗಳು,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಂದಿಗೆ, ಬಾಸಗೋಡ ಹಾಗೂ ಸುತ್ತಮುತ್ತಲ ಹಳ್ಳಿಗಳ  ಗ್ರಾಮಸ್ಥರು, ಶಾಸಕ ಸತೀಶ ಸೈಲ್ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button