ಅoಕೋಲಾ: ತಾಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿ 66ರ ಹೊಸ್ಕೇರಿ – ಶೇಟಗೇರಿ ಕ್ರಾಸ್ ಬಳಿ ಕಾರು ಮತ್ತು ಮೋಟರ್ ಸೈಕಲ್ ನಡುವೆ ಈ ರಸ್ತೆ ಅಪಘಾತ ಸಂಭವಿಸಿದೆ. ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಮೋಟರ್ ಸೈಕಲನ್ನು, ಅತಿವೇಗದಿಂದ ಬಂದು ಓವರ್ ಟೇಕ್ ಮಾಡಿದ ಕಾರು ಚಾಲಕ , ಯಾವುದೇ ಸಿಗ್ನಲ್ ನೀಡದೇ ಒಮ್ಮೇಲೆ ರಸ್ತೆಯ ಎಡ ಬದಿಗೆ ಬಂದು ಬೈಕ್ ಮುಂದೆ ಕಾರು ನಿಲ್ಲಿಸಿದ್ದಾನೆ. ಅಲ್ಲದೆ, ಬೈಕ್ ಕಾರಿಗೆ ಹಿಂದಿನಿoದ ಡಿಕ್ಕಿಯಾಗುವಂತೆ ಅಪಘಾತ ಪಡಿಸಿದ್ದು ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಬೈಕ್ ಸಮೇತ ಡಿವೈಡರ್ ಮೇಲೆ ಹಾರಿ ಬಿದ್ದರು ಎನ್ನಲಾಗಿದೆ.
ಬೈಕ್ ಸವಾರ ಸುರೇಶ ಹರಿರಾಮ ಸೋಲಂಕಿ (55) ಮೃತ ದುರ್ದೈವಿಯಾಗಿದ್ದು,ಈತನ ಬಲ ಕಾಲು ಹಾಗೂ ಮೈಮೇಲೆ ಅಲ್ಲಲ್ಲಿ ಗಂಭೀರ ಗಾಯಗೊಂಡು ಅಂಕೋಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅಂಕೋಲಾ ಆಸ್ಪತ್ರೆಯಿಂದ ಅಂಬುಲೆನ್ಸ್ ಮೂಲಕ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ,ದಾಖಲಿಸಲಾಗಿತ್ತಾದರೂ,ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಾರವಾರ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿದ್ದಾನೆ.
ಹಿಂಬದಿ ಸವಾರ ಮುಖೇಶಕುಮಾರ ಅಂಬಾಲಾಲ್ ರಾವಲ್ (28 ), ಎಂಬಾತನ ಬಲಗಣ್ಣಿನ ಹುಬ್ಬು, ಬಲಗೆನ್ನೆಗೆ ರಕ್ತದೊಂದಿಗೆ – ಗಾಯಗಳಾಗಿದ್ದು ಅಂಕೋಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,ಪ್ರಾಣಪಾಯದಿಂದ ಪಾರಾಗಿದ್ದಾನೆ.ಅಪಘಾತ ಪಡಿಸಿದ ಕಾರಿನ ಚಾಲಕ ಕುಂದಾಪುರ ನಿವಾಸಿ ಎನ್ನಲಾಗಿದ್ದು ಈತನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಕಾರವಾರ ತಾಲೂಕಿನ ಹಳಗಾದಿಂದ ಪಾರ್ಶ್ವ ವಾಯು ಪೀಡಿತ ರೋಗಿಯೊಬ್ಬರು ಮತ್ತು ಅವರ ಕುಟುಂಬಸ್ಥರನ್ನು ಅಂಕೋಲಾ ಮಾರ್ಗವಾಗಿ ವಾಪಸ್ ಊರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ರಸ್ತೆ ಅಪಘಾತ ಸಂಭವಿಸಿದೆ.
ಘಟನೆ ನಡೆದ ಸ್ಥಳದ ಹತ್ತಿರದಲ್ಲಿಯೇ ಇದ್ದ ಕಾಂಗ್ರೆಸ್ ಪಕ್ಷದ ಯುವ ಮುಖಂಡರೋರ್ವರು ಸ್ಥಳೀಯರ ಹಾಗೂ ಅಪಘಾತ ಪಡಿಸಿದ ಕಾರ್ ಚಾಲಕನ ಸಹಕಾರದಿಂದ ಗಾಯಾಳುಗಳನ್ನು,ಕೂಡಲೆ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು, ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.ಕಾರಿನಲ್ಲಿದ್ದ ಪಾರ್ಶ್ವ ವಾಯು ಪೀಡಿತ ರೋಗಿ ಮತ್ತು ಅವನನ್ನು ಕರೆ ತಂದಿದ್ದ ಕುಟುಂಬಸ್ಥರನ್ನು, ಸರ್ಕಾರಿ ಆಸ್ಪತ್ರೆ ಬಳಿ ಬೇರೊಂದು ವಾಹನದಲ್ಲಿ ಊರಿಗೆ ಕಳಿಸಿಕೊಡಲಾಯಿತು.
ಅಪಘಾತದಲ್ಲಿ ಮೃತಪಟ್ಟ ಮೋಟಾರ್ ಸೈಕಲ್ ಚಾಲಕ,ಹಾಗೂ ಗಾಯಾಳುವಾಗಿರುವ ಹಿಂಬದಿ ಸವಾರ ಇವರಿಬ್ಬರೂ ರಾಜಸ್ಥಾನ ಮೂಲದವರು ಎನ್ನಲಾಗಿದ್ದು,ಹಾಲಿ ಕುಮಟಾದ ಹೆಗಡೆಯಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ,ಸ್ಟೀಲ್ ಫರ್ನಿಚರ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ ಸುರೇಶ ಸೋಲಂಕಿಯ ಮೃತ ದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ,ಕುಮಟಾಕ್ಕೆ ಸಾಗಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ