ಅಂಕೋಲಾ: ಮಳೆಯ ಆರ್ಭಟ ರವಿವಾರ ಮತ್ತಷ್ಟು ಜೋರಾಗಿದ್ದು, ತಾಲೂಕಿನ ಹಲವೆಡೆ ಮಳೆ ಎಡಬಿಡದೇ ಸುರಿಯಲಾರಂಭಿಸಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯಲಾರಂಭಿಸಿದ್ದು, ಗಂಗಾವಳಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಿದ್ದು ಅಪಾಯದ ಮಟ್ಟ ತಲುಪಿದೆ. ವಾಸರೆ ಗ್ರಾ ಪಂ ಪ್ರಮುಖ ಪ್ರದೀಪ ವಾಸರೆ, ತಮ್ಮ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೋರಿಕೊಂಡಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಜುಲೈ 23 ರಂದೇ, ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ , ಪ್ರವಾಹ ಬಂದು ತಾಲೂಕಿನ ಹತ್ತಾರು ಗ್ರಾಪಂಗಳ ನೂರಾರು ಹಳ್ಳಿಗಳು ಜಲಾವೃತವಾಗಿ, ಜನ ಜೀವನ ಅಸ್ತವ್ಯಸ್ತವಾಗಿತ್ತಲ್ಲದೇ, ಸುಂಕಸಾಳ ರಾ.ಹೆ ಅಂಚಿಗೆ ಹೋಟೆಲ್ ಒಂದರಲ್ಲಿ ಅಪಾಯದಲ್ಲಿ ಸಿಲುಕಿದ್ದ ಜನರಿಗೆ, ಸೇನಾ ಹೆಲಿಕ್ಯಾಪ್ಟರ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.
ಚತುಷ್ಪಥ ಹೆದ್ದಾರಿ ಗುತ್ತಿಗೆದಾರ ಕಂಪನಿ ಐ ಆರ ಬಿ ಅವೈಜ್ಞಾನಿಕ ಕಾಮಗಾರಿ ಮತ್ತಿತರ ಕಾರಣಗಳಿಂದಲೂ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ನೀರು ನುಗ್ಗಿ ಸಂಚಾರ ವ್ಯತ್ಯಯವಾಗಿತ್ತು. ಒಟ್ಟಾರೆಯಾಗಿ ಉಕ್ಕಿ ಹರಿದ ಗಂಗಾವಳಿಯ ರುದ್ರಾವತಾರಕ್ಕೆ ಕೆಲ ಜನ – ಜಾನುವಾರ ಸಾವು – ನೋವು, ಹಲವರ ಮನೆ- ಆಸ್ತಿ ಪಾಸ್ತಿ ಕೊಚ್ಚಿ ಹೋಗಿ ತಾಲೂಕಿನಲ್ಲಿ ಕೋಟ್ಯಂತರ ರೂ ಹಾನಿಯಾಗಿತ್ತು. ಅಂದಿನ ಆ ಕಹಿ ಘಟನೆಯ ಮೆಲಕು ಹಾಕಿದ ನದಿ ತೀರದ ಕೆಲ ಸಾರ್ವಜನಿಕರು, ಮತ್ತೆ ಪ್ರವಾಹ ಬಾರದಿರಲೆಂದು ದೇವರಲ್ಲಿ ಪ್ರಾರ್ಥಿಸುವಂತಾಗಿದೆ. ಈ ವರ್ಷದ ಗಾಳಿ – ಮಳೆ ಅಬ್ಬರಕ್ಕೆ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿವೆ. ಅಂತೆಯೇ ಭಾರೀ ಪುರಸಭೆ ವ್ಯಾಪ್ತಿಯ ಹನುಮಟ್ಟಾದ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ದೇವಸ್ಥಾನದ ಹಿಂಭಾಗದಲ್ಲಿದ್ದ, ಚಾಮಂಡೇಶ್ವರಿ ದೇಗುಲದ ಎದುರಿನ ಬೃಹತ್ ಆಲದ ಮರವೊಂದು ಬುಡಸಮೇತ ಕಿತ್ತು ಬಿದ್ದ ಘಟನೆ ರವಿವಾರ ಸಂಜೆಯ ವೇಳೆಗೆ ಸಂಭವಿಸಿದೆ.
ನೂರಾರು ವರ್ಷಗಳ ಹಿಂದಿನದೆನ್ನಲಾದ ಈ ಮರ ದೇವಸ್ಥಾನದ ಗಣ ದೇವತೆಗಳ ವಾಸಸ್ಥಾನ ಎಂಬ ನಂಬಿಕೆ ಸ್ಥಳೀಯರಲ್ಲಿದ್ದು, ಇದನ್ನು ಬಾರಾ ಗಣ ಎಂದು ಪೂಜಿಸುತ್ತಾರೆ ಎನ್ನಲಾಗಿದೆ. ಹಾಗಾಗಿ ಇದು ಧಾರ್ಮಿಕವಾಗಿಯೂ ಶಕ್ತಿ ಕೇಂದ್ರವಾಗಿದೆ. ಇದರ ಅತೀ ಹತ್ತಿರದಲ್ಲೇ ಶ್ರೀ ದೇವಿಯ ಹರಕೆ ಯಕ್ಷಗಾನ ಮತ್ತಿರರ ಕಾರ್ಯಗಳು ನಡೆಯುತ್ತಿದ್ದವು . ಬೃಹತ್ ಆಲದ ಮರ ಬಿದ್ದ ಪರಿಣಾಮ ,ಅದರ ರಂಬೆ ಕೊಂಬೆಗಳು ರವೀಂದ್ರ ಫಾತರಫೇಕರ ಎಂಬುವರ ಮನೆಯ ಆವರಣದ ವರೆಗೂ ಅಪ್ಪಳಿಸಿ ಮನೆಗೂ ಕೆಲ ಪ್ರಮಾಣದ ಹಾನಿ ಆಗಿದೆ. ಅವರ ಮನೆಯ ಬಾಡಿಗೆದಾರರೊಬ್ಬರ , ಹಾಗೂ ಹೊರಗಡೆ ಇದ್ದ ಇನ್ನೊಬ್ಬರ ಬೈಕ್ ಜಖಂಗೊಂಡಿದೆ ದೇವಸ್ಥಾನದ ಕಂಪೌಂಡ ಗೋಡೆ ಹಾಗೂ ಬಾರಾಗಣ ಕಟ್ಟೆ ಹಾನಿಯಾಗಿದೆ. ಮರದ ರಂಭೆ ಕೊಂಬೆಗಳು ವಿದ್ಯುತ್ತ ತಂತಿಯ ಮೇಲೆರಿಗೆ ಬಿದ್ದ ಪರಿಣಾಮ 2 ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ಸುತ್ತಮುತ್ತಲ ಹತ್ತಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಹೆಸ್ಕಾಂ ಇಲಾಖೆ ಆದಷ್ಟು ಶೀಘ್ರವಾಗಿ , ವಿದ್ಯುತ್ತ ಸಂಪರ್ಕ ಸರಿಗೊಳಿಸಲಿ ಎಂದು ಸ್ಥಳೀಯರು ವಿನಂತಿಸಿದ್ದಾರೆ..ಭಾರೀ ಗಾತ್ರದ ಮರ ಬಿದ್ದರೂ, ಸ್ಥಳೀಯ ಆರಾಧ್ಯ ದೇವರ ಕೃಪೆಯಿಂದ ಯಾವೊಬ್ಬರೂ ತೊಂದರೆಗೆ ಸಿಲುಕದೇ, ಸುರಕ್ಷಿತವಾಗಿರುವಂತಾಗಿದೆ ಎಂದು, ಪುರಸಭೆಯ ಮಾಜಿ ಉಪಾಧ್ಯಕ್ಷೆ ಮತ್ತು ಹಾಲಿ ಸದಸ್ಯೆ ರೇಖಾ ಗಾಂವಕರ, ಸ್ಥಳೀಯ ಪ್ರಮುಖ ನಾಗೇಶ ಬಿ ನಾಯ್ಕ, ಮಹಾದೇವ ನಾಯ್ಕ, ತುಕಾರಾಮ ಗಾಂವಕರ, ನಾಗೇಂದ್ರ ಗಾಂವಕರ, ಉದಯ ನಾಯ್ಕ, ಗೋ ಪ್ರೇಮಿಗಳ ತಂಡದ ಕಿರಣ, ಅಜಯ ಮತ್ತಿತರು ದೈವ ಶಕ್ತಿ ಕುರಿತು ತಮ್ಮ ನಂಬಿಕೆ ವ್ಯಕ್ತಪಡಿಸಿದರು. ಪೊಲೀಸ್ ಹಾಗೂ ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದರು. ಭಾರೀ ಮಳೆ ಹಿನ್ನಲೆಯಲ್ಲಿ ಶಾಲಾ – ಕಾಲೇಜುಗಳಿಗೆ(ಪ್ರಾಥಮಿಕ ಹಂತದಿಂದ ಪಿಯುಸಿ ವರೆಗಿನ ) ಜುಲೈ 24 ರ ಸೋಮವಾರ ರಜೆ ಘೋಷಿಸಲಾಗಿದೆ. ಘಟ್ಟದ ಮೇಲಿನ ಪ್ರದೇಶ, ಹಾಗೂ ಅಕ್ಕಪಕ್ಕದ ತಾಲೂಕು – ಹಾಗೂ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾದರೆ, ಗಂಗಾವಳಿ ನದಿ ನೀರಿನ ಹರಿವಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಆದರೂ ನದಿ ತೀರದ ಸಾರ್ವಜನಿಕರು ಅನಗತ್ಯ ಆತಂಕ ಪಡದೇ, ಸೂಕ್ತ ಮುನ್ನೆಚ್ಚರಿಕೆಯಿಂದ ಇರುವಂತೆ ಕೋರಲಾಗಿದೆ. ತುರ್ತು ಸಂದರ್ಭಗಳಲ್ಲಿ ERSS 112 ನಂಬರ, ಇಲ್ಲವೇ ತಮ್ಮ ಹತ್ತಿರದ ಸ್ಥಳೀಯ ಸಂಸ್ಥೆಗಳು, ಅಧಿಕಾರಿ ಹಾಗೂ ಸಿಬ್ಬಂದಿಗಳು, ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಅಂಕೋಲಾ ಉಪವಿಭಾಗದ 33 ಕೆ.ವಿ ಮತ್ತು 11 ಕೆ.ವಿ ವಿದ್ಯುತ್ ಉಪ ವಿತರಣಾ ಕೇಂದ್ರದಿಂದ ಹೊರಡುವ ಮಾಸ್ತಿಕಟ್ಟಾ,ಹಳವಳ್ಳಿ, ರಾಮನಗುಳಿ, ಶಿರಗುಂಜಿ ಪೀಡರುಗಳ ಮೇಲೆ ಜಂಗಲ್ ಕಟಿಂಗ, ಇನ್ಸುಲೇಟರ್ ಬದಲಾವಣೆ, ಜಿ.ಓ.ಎಸ್ ದುರುಸ್ಥಿ, ಜಂಪುಗಳ ಬದಲಾವಣೆ ಮೊದಲಾದ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಜುಲೈ 24 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಅಗಸೂರು, ಹಿಲ್ಲೂರು, ಅಚವೆ, ಸುಂಕಸಾಳ ಹಾಗೂ ಡೋಂಗ್ರಿ ಗ್ರಾಮ ಪಂಚಾಯತ್ ಸೇರಿದಂತೆ ತಾಲೂಕಿನ ಇತರೆಡೆಯ ಗ್ರಾಮೀಣ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ