ಕಾರವಾರ: ಶಿರಸಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿರಸಿ-ಕುಮಟಾ ರಸ್ತೆಯ ಅಗಲೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳು ಸಿಲುಕಿಕೊಂಡು ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿರುವ ಘಟನೆಗಳು ನಡೆದಿದೆ. ಅಲ್ಲದೆ, ಶಿರಸಿ-ಕುಮಟಾ ರಸ್ತೆಯಲ್ಲಿ ಕಾಮಗಾರಿಯಿಂದಾಗಿ ರಸ್ತೆಯು ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಯೋಗ್ಯವಲ್ಲ. ಈ ಎಲ್ಲಾ ದೃಷ್ಟಿಯಿಂದ ಪ್ರಯಾಣಿಕರ ವಾಹನಗಳನ್ನು ಹೊರತುಪಡಿಸಿ ಉಳಿದ ಭಾರೀ ಸರಕು ಸಾಗಾಣಿಕೆ ವಾಹನಗಳು ಹಾಗೂ ಭಾರೀ ಗಾತ್ರದ ವಾಹನಗಳು (10 ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ಚಕ್ರಗಳು ) ಮಾತ್ರ ಬದಲಿ ಮಾರ್ಗವನ್ನು ಬಳಸುವಂತೆ ಸಹಾಯಕ ಆಯುಕ್ತ ಆರ್. ದೇವರಾಜ್ ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆಯ ಮುನ್ಸೂಚನೆ
ಇದೇ ಜುಲೈ 25ರ ಮಧ್ಯಾಹ್ನ 1 ಗಂಟೆಯಿoದ 26ರ ಬೆಳಿಗ್ಗೆ 8.30ರ ವರೆಗೆ ರೆಡ್ ಅಲರ್ಟ್ ಸೂಚನೆ ನೀಡಲಾಗಿದ್ದು, 220 ಮಿ.ಮೀ ಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಿದ್ದಾಪುರ ತಾಲೂಕಿನ ಕೋಡ್ಕಣಿ ವ್ಯಾಪ್ತಿಯಲ್ಲಿ 321 ಮಿ.ಮೀ ಮಳೆಯಾಗಿದ್ದು ಇದು ರಾಜ್ಯದಲ್ಲಿಯೇ ಅತಿಹೆಚ್ಚು ಮಳೆಯಾಗಿದೆ.
ಇನ್ನೊಂದೆಡೆ, ಭಾರಿ ಮಳೆಗೆ ಶಿರಸಿ ಕುಮಟಾ ಹೆದ್ದಾರಿ ಯಲ್ಲಿ ಧರೆ ಕುಸಿತ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ರಾಗೀಹೊಸಳ್ಳಿ ಸಮೀಪ ಧರೆಕುಸಿದು ಮೂರು ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್ ಆಗಿತ್ತು. ಧರೆ ಕುಸಿದು ಹೆದ್ದಾರಿ ಬಂದ್ ಆಗುವ ಲಕ್ಷಣಗಳಿರುವ ಸ್ಥಳಗಳಿಗೆ ಸೋಮವಾರ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧರೆ ಕುಸಿತ ಉಂಟಾದರೆ ತಕ್ಷಣ ತೆರುವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಸ್ಮಯ ನ್ಯೂಸ್, ಶಿರಸಿ