ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ವರ್ಗಾವಣೆಗೆ ಪಟ್ಟು: ತಹಶೀಲ್ದಾರರವರ ಮೂಲಕ ಸಚಿವರಿಗೆ ಮನವಿ ಸಲ್ಲಿಸಿದ ಮೀನುಗಾರಿಕಾ ಒಕ್ಕೂಟದ ಪ್ರಮುಖರು
ಅಂಕೋಲಾ ತಾಲೂಕಾ ಮೀನುಗಾರಿಕೆ ಇಲಾಖೆಯಲ್ಲಿ ಕಳೆದ ಕೆಲ ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರೆನಿಟಾ ಡಿಸೋಜಾ ಇವರನ್ನು ಅಂಕೋಲಾದಿಂದ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಮೀನುಗಾರಿಕಾ ಒಕ್ಕೂಟದ ಅಧ್ಯಕ್ಷ ಬೆಳಂಬಾರದ ಸುಂದರ ಖಾರ್ವಿ ನೇತ್ರತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ,ತಹಶೀಲ್ದಾರ್ ಮುಖಾಂತರ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ ಸಚಿವರಾದ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಮೀನುಗಾರರ ಆಶೋತ್ತರಗಳಿಗೆ ಸ್ಪಂದಿಸದ, ಸರಕಾರದ ಯೋಜನೆಗಳ ಸದುಪಯೋಗದ ಕುರಿತು ಮೀನುಗಾರರಿಗೆ ಸರಿಯಾದ ಮಾಹಿತಿ ನಿಡದೇ. ದೋಣಿ ಹಾಗೂ ಬೋಟ್ ಮಾಲಿಕರಿಗೆ ನೊಂದಣಿ ಮರುನೊಂದಣಿ ಡಿಸೈಲ್ ಬುಕ್ ಹೀಗೆ ಹಲವಾರು ಸೌಲತ್ತುಗಳಿಗೆ ಆನಾವಶ್ಯಕವಾಗಿ ಕಚೇರಿಗೆ ಅಲೆದಾಡುವಂತೆ ಮಾಡುವುದು.
ಕೆಲವು ಏಜಂಟರ ಮೂಲಕ ಹಣಕ್ಕೆ ಬೇಡಿಕೆ ಇಡುವುದನ್ನು ಮಾಡುತ್ತಿರುವ ಇಲ್ಲಿನ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಈ ಹಿಂದಿನಿಂದಲೂ ಕೆಲ ಮೀನುಗಾರ ಮುಖಂಡರು ಆಗ್ರಹಿಸುತ್ತಾ ಬಂದಿದ್ದರೂ, ಈವರೆಗೂ ಅಧಿಕಾರಿ ವರ್ಗಾವಣೆಗೊಂಡಿಲ್ಲ. ಈ ಕೂಡಲೇ ಅವರನ್ನು ಅಂಕೋಲಾದಿಂದ ವರ್ಗಾಯಿಸಬೇಕು. ಇನ್ನು ಕೆಲವೇ ದಿನಗಳಲ್ಲಿ ಮೀನುಗಾರಿಕಾ ಸೀಜನ್ ಆರಂಬವಾಗಲಿದ್ದು ದೋಣಿ ಹಾಗೂ ಬೋಟ್‌ಗಳ ನೊಂದಣಿ ಮತ್ತಿತರ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವಾಗಬೇಕಿದೆ.
ಮೀನುಗಾರರ ಸಂಕಷ್ಟದ ಅರಿವಿರುವ ಸಚಿವರು, ಒಂದು ವಾರದೊಳಗಾಗಿ ಅಧಿಕಾರಿಯನ್ನು ಇಲ್ಲಿಂದ ವರ್ಗಾಯಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಿ ಮೀನುಗಾರಿಕಾ ಇಲಾಖೆಯ ಕಚೇರಿಗೆ ಬೀಗಹಾಕಿ ಇವರು ವರ್ಗಾವಣೆ ಆಗುವವರೆಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದ ಮೀನುಗಾರ ಸಂಘಟನೆಗಳ ಪ್ರಮುಖರು, ತಹಶೀಲ್ದಾರ ಪ್ರವೀಣ್ ಹುಚ್ಚಣ್ಣನವರ್ ಅವರ ಮೂಲಕ ಮೀನುಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿದರು.
ತಾಲೂಕಾ ಮೀನುಗಾರ ಒಕ್ಕೂಟ ಸಮಿತಿ ಅಧ್ಯಕ್ಷ ಸುಂದರ ಖಾರ್ವಿ, ಕಾರ್ಯದರ್ಶಿ ಅರವಿಂದ, ಸೇರಿದಂತೆ ಇತರೆ ಪದಾಧಿಕಾರಿಗಳು ಸದಸ್ಯರು ಹಾಗೂ ಮೀನುಗಾರಿಕಾ ಫೆಡರೇಶನ್ ಸದಸ್ಯ ರಾಜು ಹರಿಕಂತ್ರ ಸೇರಿದಂತೆ ಇತರರಿದ್ದರು. ಇತ್ತೀಚಿನ ದಿನಗಳಲ್ಲಿ ತಮ್ಮನ್ನು ವರ್ಗಾವಣೆ ಮಾಡುವಂತೆ ಮೀನುಗಾರ ಪ್ರಮುಖರನೇಕರು ಪದೇ ಪದೇ ಒತ್ತಾಯಿಸುತ್ತಿಲ್ತಾರಲ್ಲ ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ವಿಸ್ಮಯ ಟಿವಿಯೊಂದಿಗೆ ಮಾತನಾಡಿ, ಈ ತಾಲ್ಲೂಕಿನ ನನ್ನ ಸೇವಾವಧಿಯ 5 ವರ್ಷಗಳ ಅವಧಿಯಲ್ಲಿ, ನನ್ನ ಅಧಿಕಾರ ಪರಿಮಿತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ ಮತ್ತು ಹಲವು ಮೀನುಗಾರರ ಸಂಕಷ್ಟಕ್ಕೆ ಸ್ವಂದಿಸಿದ ತೃಪ್ತಿ ಇದೆ.
ಆದರೂ ಕೆಲವರು ನನ್ನ ವಿರುದ್ಧ ಅದೇಕೋ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಮಹಿಳೆಯಾದ ನನಗೂ ವೈಯಕ್ತಿಕವಾಗಿ ಬೇಸರವೆನಿಸಿದೆ. ಈ ಕುರಿತು ಹೆಚ್ಚು ಪ್ರತಿಕ್ರಿಯಿಸಲಾರೆ. ಕಳೆದ 2 ವರ್ಷಗಳಿಂದ ನಾನೇ ಖುದ್ದಾಗಿ ವರ್ಗಾವಣೆಗೆ ವಿನಂತಿಸಿದ್ದರೂ ನಾನಾ ಕಾರಣಗಳಿಂದ ಈ ವರೆಗೂ ಆಗಿಲ್ಲ. ನೌಕರಿ ಎಂದ ಮೇಲೆ ವರ್ಗಾವಣೆ ಸಹಜ ಪ್ರಕ್ರಿಯೆ . ನನ್ನನ್ನು ಎಲ್ಲಿಯೇ ವರ್ಗಾಯಿಸದರೂ ಕರ್ತವ್ಯ ನಿರ್ವಹಿಸಲು ಸಿದ್ಧನಿದ್ದೇನೆ, ನನಗೂ ಇಲ್ಲಿಯ ಅನೇಕ ಮೀನುಗಾರರು, ಹಾಗೂ ತಾಲೂಕಿನ ಜನತೆ ಮತ್ತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀಡಿದ ಪ್ರೀತಿ – ವಿಶ್ವಾಸ ಹಾಗೂ ಗೌರವದ ಭಾವನೆಗಳಿಗೆ ಸದಾ ಚಿರಋಣಿ ಆಗಿರುತ್ತೇನೆ ಎಂದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ