ಬಹುಕಾಲ ಕತ್ತಲಲ್ಲೇ ಕಾಲ ಕಳೆದರಂತೆ ಗುಳೆ ಗ್ರಾಮಸ್ಥರು : ಹೆಸ್ಕಾಂ ಇಲಾಖೆ ಎದುರು ಪ್ರತಿಭಟನೆ
ತಹಶೀಲ್ದಾರರಿಗೂ ಪ್ರತ್ಯೇಕ ಮನವಿ
ಅಂಕೋಲಾ : ಕಳೆದ 2 ತಿಂಗಳಿಂದ ತಮ್ಮ ಗ್ರಾಮಕ್ಕೆ ವಿದ್ಯುತ್ತ ಇಲ್ಲದೇ ಶಾಲಾ ಮಕ್ಕಳು, ಗ್ರಾಮಸ್ಥರು ನಾನಾ ತೊಂದರೆ ಅನುಭವಿಸುವಂತಾಗಿದ್ದು, ಹೆಸ್ಕಾಂ ಇಲಾಖೆ ಎದುರು ಜಮಾಯಿಸಿದ ಸ್ಥಳೀಯರು ಗ್ರಾಮಕ್ಕೆ ವಿದ್ಯುತ್ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರಲ್ಲದೇ ಈ ಕುರಿತು ತಹಶೀಲ್ದಾರ ಅವರಿಗೂ ಪ್ರತ್ಯೇಕ ಮನವಿ ಸಲ್ಲಿಸಿ, ನಮ್ಮ ಗ್ರಾಮದ ಸಮಸ್ಯೆ ಪರಿಹಾರಕ್ಕೆ ಸಂಬಂಧಿತ ಹೆಸ್ಕಾಂ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ವಿನಂತಿಸಿದ್ದಾರೆ.
ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಕುಗ್ರಾಮದಂತಿರುವ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಗುಳೆ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ವಿದ್ಯುತ್ತ ಇಲ್ಲದೇ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನಾನಾ ರೀತಿ ಸಂಕಷ್ಟ ಅನುಭವಿಸುವಂತಾಗಿದೆ. ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಹಾಗೂ ಸ್ಥಳೀಯ ಯುವ ಮುಖಂಡ ರಾಘವೇಂದ್ರ ಜಿ ನಾಯ್ಕ ಮನವಿ ಓದಿದರು. ಗುಳೆ ಭಾಗದ ಹಾಲಕ್ಕಿ ಸಮುದಾಯದ ಪ್ರಮುಖರಾದ ಪಾಂಡು, ಪಾಂಡುರಂಗ, ಸುರೇಶ, ರಾಜು, ದಿಗಂಬರ, ತೋ ಕು, ಆನಂದು, ಮುಕುಂದ, ಸಂತು, ರುಮ್ಮಾ, ನಾರಾಯಣ, ಮಧು, ರಂಜನಾ ಗೌಡ ಮತ್ತಿತರರಿದ್ದರು. ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಉಮೇಶ ನಾಯ್ಕ, ಗುಳೆ ಗ್ರಾಮಸ್ಥರ ಪ್ರತಿಭಟನೆಗೆ ಬೆಂಬಲಿಸಿ, ವಿದ್ಯುತ್ ಸಂಪರ್ಕ ಶೀಘ್ರವಾಗಿ ನೀಡುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು.
ತಹಶೀಲ್ದಾರ ಕಾರ್ಯಾಲಯದಲ್ಲಿ ಉಪ ತಹಶೀಲ್ದಾರ ಸುರೇಶ ಹರಿಕಂತ್ರ ಮನವಿ ಸ್ವೀಕರಿಸಿದರು. ಹೆಸ್ಕಾಂ ಇಲಾಖೆ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಸಲ್ಲಿಸಲಾದ ಪ್ರತ್ಯೇಕ ಮನವಿಯನ್ನು ಹೆಸ್ಕಾಂ ಕಾಮಗಾರಿ ಘಟಕದ ಮೇಲ್ವಿಚಾರಕ ಸತೀಶ ನಾಯ್ಕ ಸ್ವೀಕರಿಸಿದರು.
ಗ್ರಾಮಸ್ಥರು ದೂರುವಂತೆ ಕಳೆದ ಎರಡು ತಿಂಗಳಿಂದ ಕರೆಂಟ್ ಇಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಖಾಧಿಕಾರಿ ವಿಶ್ವನಾಥ ನಾಯ್ಕ, ಇತ್ತೀಚಿನ ಭಾರೀ ಗಾಳಿ – ಮಳೆಯಿಂದ ಮರಬಿದ್ದು ವಿದ್ಯುತ್ ಕಂಬಗಳು ಮುರಿದಿದ್ದು, ಇನ್ಸುಲೇಟರ್ ವೈಫಲ್ಯ ಮತ್ತಿತರ ಕಾರಣಗಳಿಂದ ವಾರದ ಅವಧಿಯಲ್ಲಿ ಸ್ಥಳೀಯರಿಗೆ ಸಮರ್ಕಕ ವಿದ್ಯುತ್ತ ಪೂರೈಕೆ ಮಾಡಲು ಸಾಧ್ಯವಾಗಿರಲ್ಲಿಲ್ಲ, ಮೊಬೈಲ್ ನೆಟವರ್ಕ್ ಸಮಸ್ಯೆ, ಬೆತ್ತದ ಹಳ್ಳ ದಾಟಿ ಸಾಗಬೇಕಾದ ದುರ್ಗಮ ಹಾದಿ ಮತ್ತಿತರ ಕಾರಣದಿಂದ ಕೆಲಸಕ್ಕೆ ಹಿನ್ನಡೆಯಾಗಿ, ಗ್ರಾಮಸ್ಥರಿಗೆ ಆದ ತೊಂದರೆಗೆ ವಿಷಾದಿಸುತ್ತೇವೆ. ಆದರೂ ಗ್ರಾಮಸ್ಥರು ಮರದ ರೆಂಬೆ ಕೊಂಬೆ ತೆರವಿಗೆ ನಮ್ಮ ಇಲಾಖೆ ಜೊತೆ ಸಹಕರಿಸಿದ್ದು.ಕಳೆದ 2-3 ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿ ಇಂದು ಜುಲೈ 31 ರಂದು ವಿದ್ಯುತ್ ಸಂಪರ್ಕ ಸರಿಪಡಿಸಲಾಗಿದೆ ಎಂದರು.
ಒಟ್ಟಿನಲ್ಲಿ ಗ್ರಾಮಸ್ಥರು ವಿದ್ಯುತ್ ಇಲ್ಲದೇ ಕತ್ತಲಲ್ಲೇ ಬಹು ಹೊತ್ತು ಕಳೆಯುವಂತಾದರೆ, ಸಿಬ್ಬಂದಿ ಕೊರತೆ, ಪ್ರಕೃತಿ ವಿಕೋಪ ಮತ್ತಿತರ ಕಾರಣಗಳಿಂದ ಹೆಸ್ಕಾಂ ಇಲಾಖೆಯವರೂ ಸಹ ತಮ್ಮ ಪ್ರಾಣ ಕೈಯಲ್ಲಿ ಹಿಡಿದು ತಾಲೂಕಿನ ಹಲವೆಡೆ ನಿರಂತರ ಬೆಳಕು ನೀಡಲು ಪ್ರಯತ್ನಿಸುತ್ತಿದ್ದು, ಸರ್ಕಾರ ತಾಲೂಕಿನ ಸ್ಥಿತಿಗತಿ ಅರಿತು, ಇಲಾಖಾ ಸಿಬ್ಬಂದಿ ಕೊರತೆ ನಿವಾರಣೆ, ಸೌಲಭ್ಯ ವಂಚಿತ ಗುಳೆ ಮತ್ತಿತರ ಗ್ರಾಮಗಳಿಗೆ ರಸ್ತೆ, ಸೇತುವೆ ಸಂಪರ್ಕ ಕಲ್ಪಿಸಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ