ಹೆಸರಾಂತ ಹಿರಿಯ ವರ್ತಕ ಪುಂಡ್ಲಿಕ ಪ್ರಭು ವಿಧಿವಶ: ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿದ ಅಂತ್ಯ ಸಂಸ್ಕಾರ
ಅಂಕೋಲಾ : ಪಟ್ಟಣದ ಹಿರಿಯ ವರ್ತಕ ಪುಂಡ್ಲಿಕ ಪಿ. ಪ್ರಭು (73 ) ಬುಧವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಪಟ್ಟಣದ ಮಠಾಕೇರಿಯ ಪ್ರತಿಷ್ಠಿತ (ಪುಂಡಿ) ಪ್ರಭು ಮನೆತನದವರಾಗಿದ್ದ ಇವರು, ಜೈ ಹಿಂದ್ ಮೈದಾನದ ಪಕ್ಕ ಇರುವ ಪೆಟ್ರೋಲ್ ಪಂಪ ಮಾಲಕರಾಗಿ, ಸಿಮೆಂಟ್ ಸೇರಿದಂತೆ ಹತ್ತಾರು ರೀತಿಯ ಸಗಟು ವ್ಯಾಪಾರದ ಮೂಲಕ ಕೇವಲ ತಾಲೂಕಿಗೆ ಅಷ್ಟೇ ಅಲ್ಲದೆ, ನಾಡಿನ ಪ್ರತಿಷ್ಠಿತ ವರ್ತಕರಾಗಿ ಗುರುತಿಸಿಕೊಂಡಿದ್ದರು.
ಅಂಕೋಲಾದ ಮಾವಿನ ಹಣ್ಣಿನ ಪಲ್ಪ್ ತಯಾರಿಸುತ್ತಿದ್ದ ಓರಿಯಂಟಲ್ ಕಂಪನಿಯ ಅಧ್ಯಕ್ಷರಾಗಿ, ವ್ಯಾಪಾರಸ್ಥರ ಸಂಘದ ಅಧ್ಯಕರಾಗಿ, ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಇವರು ಜಿಎಸ್ ಬಿ ಸಮಾಜದ ಅಧ್ಯಕ್ಷರಾಗಿದ್ದರು.ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂದಿರುತ್ತಿದ್ದ ಇವರು, ಸಮಾಜದ ಹಾಗೂ ಹಲವರ ಏಳಿಗೆಗೆ ಸಹಾಯ ಸಹಕಾರ ನೀಡುತ್ತಾ ಬಂದಿದ್ದರು. ಅನಾಥ ಶವ ಸಂಸ್ಕಾರಕ್ಕೆ ನೆರವು ಸೇರಿದಂತೆ ಅಸಹಾಯಕರಿಗೆ ನೆರವು ಹಾಗೂ ಧೈರ್ಯ ನೀಡುತ್ತಿದ್ದ ಇವರು ಸಮಾಜದ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸ ಗೌರವಗಳಿಸಿ ಬಾಳಿ ಬದುಕಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು, ಸಹೋದರರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಆರ್ ಎಸ್ ಎಸ್ ನ ಕಟ್ಟಾಳುವಾಗಿಯೂ ಇದ್ದ ಪುಂಡ್ಲಿಕ್ ಪ್ರಭು ನಿಧನಕ್ಕೆ ,ವಿಧಾನ ಸಭೆಯ ನಿಕಟ ಪೂರ್ವ ಅಧ್ಯಕ್ಷ ಮತ್ತು ಅಂಕೋಲಾ ಕ್ಷೇತ್ರವನ್ನು 3 ಬಾರಿ ಪ್ರತಿನಿಧಿಸಿದ್ದ ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರು ಮತ್ತು ಹಾಲಿ ಶಾಸಕರಾಗಿರುವ ಆರ್. ವಿ ದೇಶಪಾಂಡೆ, ಶಿವರಾಂ ಹೆಬ್ಬಾರ,ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಅಂಕೋಲಾ ಅರ್ಬನ ಬ್ಯಾಂಕ ಅಧ್ಯಕ್ಷ ಭಾಸ್ಕರ ನಾರ್ವೇಕರ,ರೋಟರಿ ಕ್ಲಬ್ ಅಧ್ಯಕ್ಷ ವಿನೋದ ಶಾನಭಾಗ,ಪ್ರಮುಖರಾದ ಮಾರುತಿ ನಾಯಕ, ಪದ್ಮನಾಭ ಪ್ರಭು, ಸುಭಾಸ ನಾರ್ವೇಕರ,ಗಜಾನನ ನಾಯಕ, ಸಾಯಿಕಿರಣ ಶೇಟಿಯಾ, ರಾಮನಾಥ ಬಾಳಿಗಾ, ಕೃಷ್ಣ ಕುಮಾರ ಮಹಾಲೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು. ಕುಟುಂಬ ವರ್ಗದವರು, ಬಂಧು – ಬಾಂಧವರು, ವಿವಿಧ ಸಮಾಜದ ಗಣ್ಯರು, ತಾಲೂಕಿನ ಜನತೆ ಸೇರಿದಂತೆ ಸಾವಿರಾರು ಜನರು ಮೃತರ ಅಂತಿಮ ದರ್ಶನ ಪಡೆದುಕೊಂಡರು. ಪಟ್ಟಣದ ಹಲವು ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿ , ಆಗಲಿದ ಹಿರಿಯ ವರ್ತಕನಿಗೆ ಗೌರವ ನಮನ ಸಲ್ಲಿಸಿದರು
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ