ಅಂಕೋಲಾ: ಪೋಲಿಸ್, ಅಬಕಾರಿ ಮತ್ತು ಪುರಸಭೆ ಕಾರ್ಯ ವೈಖರಿ ಕುರಿತು ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಆಡಳಿತ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಿ, ಇಲಾಖೆಗಳು ತಮ್ಮ ಜವಾಬ್ದಾರಿ ನಿಭಾಯಿಸುವಂತೆ ಎಚ್ಚರಿಕೆ ನೀಡಿದ ಘಟನೆ ಶನಿವಾರ ನಡೆದಿದೆ. ಪಟ್ಟಣ ವ್ಯಾಪ್ತಿಯ ಕೆಲ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳು ಕುಡುಕರ ಮೋಜು ಮಸ್ತಿ ತಾಣವಾಗುತ್ತಿರುವ ಈ ಕುರಿತು ಅಂಕೋಲಾ ಜೆ.ಎಂ.ಎಫ್. ಸಿ ಹಿರಿಯ ನ್ಯಾಯಾಧೀಶ ಮನೋಹರ. ಎಂ ಮತ್ತು ಕಿರಿಯ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ನ್ಯಾಯಾಲಯ ಆವರಣದಲ್ಲಿ ತೀವ್ರ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೀಯ ಲೋಕ್ ಅದಾಲತ್ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ನಾಡವರ ಸಭಾಭವನದ ಪಕ್ಕ ಹೆಣ್ಣುಮಕ್ಕಳ ಹಾಸ್ಟೆಲ್, ಬಾಲಕರ ಹಾಸ್ಟೆಲ್ ಗಳಿದ್ದು, ಆ ಮಕ್ಕಳು ಸಾಗುವ ರಸ್ತೆಯಲ್ಲೇ ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಇಂತಹ ಸ್ಥಳಗಳಲ್ಲಿ ಓಡಾಡುವ ಹೆಣ್ಣು ಮಕ್ಕಳ ಸುರಕ್ಷತೆಗೆ ಒತ್ತು ನೀಡಬೇಕಾದ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಕಂಡು ಬರುತ್ತಿದೆ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ಮೇಲೆ ಮುಲಾಜಿಲ್ಲದೇ ಪ್ರಕರಣ ದಾಖಲಿಸಿ ಎಂದು ಹಿರಿಯ ಜೆ.ಎಂ.ಎಫ್. ಸಿ ನ್ಯಾಯಾಧೀಶ ಮನೋಹರ.ಎಂ ಅವರು ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಹಾಸ್ಟೆಲುಗಳಲ್ಲಿ ವಸತಿ ಮಾಡಿ ಶಾಲೆಗೆ ಹೋಗುವ ವಿದ್ಯಾರ್ಥಿನಿಯರ ಸುರಕ್ಷತೆಯ ಜವಾಬ್ದಾರಿ ಎಲ್ಲರ ಮೇಲಿದೆ. ಕುಡುಕರು ಇಂಥ ಸ್ಥಳದಲ್ಲಿ ಬೀಡು ಬಿಡುವುದು ಬೇರೆ ಪ್ರಕರಣಗಳಿಗೆ ದಾರಿ ಮಾಡಿಕೊಟ್ಟ ಹಾಗೆ ಆಗುತ್ತದೆ ಅದಕ್ಕೆ ಅವಕಾಶ ನೀಡಬೇಡಿ. ತಮ್ಮ ಬೀಟ್ ವ್ಯಾಪ್ತಿಯಲ್ಲಿ ಏನು ನಡೆಯುತ್ತಿದೆ ಎಂದು ಬೀಟ್ ಪೊಲೀಸರ ಗಮನಕ್ಕೆ ಬರುವುದಿಲ್ಲ ಎಂದಾದರೆ ಅವರು ಏನು ಕರ್ತವ್ಯ ಮಾಡುತ್ತಿದ್ದಾರೆ? ಬೀಟ್ ವ್ಯವಸ್ಥೆ ಇರುವುದಾರರೂ ಏಕೆ ? ಬೀಟ್ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾದರೆ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ನ್ಯಾಯಾಧೀಶರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕಿರಿಯ ಜೆ.ಎಂ.ಎಫ್. ಸಿ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಅಬಕಾರಿ ಇಲಾಖೆ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ,
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡದಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು . ವಾರದ ಅವಧಿಯೊಳಗೆ ಇಲಾಖೆಗಳ ಕಾರ್ಯವೈಖರಿಯನ್ನು ಗಮನಿಸಲಾಗುವುದು. ಈಗಲಾದರೂ ಸರಿಯಾದ ಕರ್ತವ್ಯ ನಿರ್ವಹಿಸದಿದ್ದರೆ ನೇರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದ ಕೆಲವು ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳು ಕಸ ತ್ಯಾಜುಗಳಿಂದ ತುಂಬಿ ಗಬ್ಬೆದ್ದು ನಾರುತ್ತಿವೆ. ಸಾರ್ವಜನಿಕರಿಗೆ ಮಲೇರಿಯಾ , ಡೆಂಗ್ಯೂ ಭೀತಿಯೂ ಕಾಡುವಂತಾಗಿದೆ. ಸ್ವಚ್ಛತೆ ಕಾರ್ಯ ಪುರಸಭೆ ವತಿಯಿಂದ ಸರಿಯಾಗಿ ನಡೆಯುತ್ತಿಲ್ಲ. ಸ್ವತಃ ನಾವೇ ಕೆಲ ಸ್ಥಳ ಪರಿಶೀಲನೆ ಮಾಡಿಯೇ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದು ಈ ಕುರಿತು ಸುಳ್ಳು ಸಮರ್ಥನೆ ಬೇಕಾಗಿಲ್ಲ. ಅಗತ್ಯ ಇದ್ದರೆ ತಾವು ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಸ್ವಚ್ಛತೆಯ ಕೆಲಸಕ್ಕೆ ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ನ್ಯಾಯಾಧೀಶರು ಪುರಸಭೆ ಅಧಿಕಾರಿಗಳಿಗೆ ಅವರ ಜವಾಬ್ದಾರಿ ತಿಳಿ ಹೇಳಿದಂತಿದ್ದು ಇನ್ನು ಮುಂದಾದರೂ ಸಂಬಂಧಿತ ಇಲಾಖೆಗಳು ಎಚ್ಚೆತ್ತುಕೊಂಡು ತಮ್ಮ ಜವಾಬ್ದಾರಿ ನಿಭಾಯಿಸುವರೇ ಕಾದುನೋಡಬೇಕಿದೆ. ಗಬ್ಬು ನಾರುತ್ತಿರುವ ಇಲ್ಲಿನ ಪರಿಸರದ ಕುರಿತು ವಿಸ್ಮಯ ವೆಬ್ ನ್ಯೂಸ್ ಮತ್ತು ವಿಸ್ಮಯ ಟಿವಿಯಲ್ಲೂ ಈ ಕುರಿತು ವಿಸ್ತೃತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ