ಧಾರೇಶ್ವರ: ಶ್ರೀ ಧಾರಾನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಗಸ್ಟ್ 12 ರ ಶನಿವಾರದ ವರೆಗೆ ಶಾಕಲ ಋಕ್ ಸಂಹಿತಾ ಮಹಾಯಾಗ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗೋಕರ್ಣದ ಹರಿಹರೇಶ್ವರ ವೇದ ವಿದ್ಯಾಪೀಠ ದ ವತಿಯಿಂದ ಧಾರೇಶ್ವರದಲ್ಲಿ ಅಧಿಕ ಮಾಸದ ಪ್ರಯುಕ್ತ ಶಾಕಲ ಋಕ್ ಸಂಹಿತಾ ಮಹಾಯಾಗ, ಚತುರ್ವೇದ ಪಾರಾಯಣ, ಋಗ್ವೇದ ದಶಗ್ರಂಥ ಪಾರಾಯಣ, ಪದಪಾಠಾರ್ಚನೆ ಇವೇ ಮೊದಲಾದ ವಿಶೇಷ ಅನುಷ್ಠಾನ ಗಳು ನಡೆಯಲಿವೆ.
ಅಗಸ್ಟ್ 5 ಶನಿವಾರ ಮುಂಜಾನೆ ಮಹಾಸಂಕಲ್ಪ ಗಣಪತಿ ಪೂಜನ, ಪುಣ್ಯಾಹ ವಾಚನಗಳೊಂದಿಗೆ ಚತುರ್ದ್ರವ್ಯಾತ್ಮಕ ಅಥರ್ವಶೀರ್ಷ ಹವನದಿಂದ ಆರಂಭಗೊoಡು ಋಗ್ವೇದ ಮಹಾಯಾಗ ಶುಭಾರಂಭ ಗೊoಡಿದೆ. ಪ್ರತಿದಿನ ಮುಂಜಾನೆ ಹವನ, ಮಹಾಪೂಜೆ ನಡೆಯಲಿದ್ದು ಸಾಯಂಕಾಲ ಶಾಂತಿಪಾಠ ಸಾಯಂ ಪೂಜೆ ನಡೆಯಲಿದೆ. ಸೋಮವಾರ ಬೆಳಿಗ್ಗೆ ಶತರುದ್ರ ಹವನವೂ ನಡೆಯಲಿದೆ. ಅಗಸ್ಟ್ 10 ರ ಸಾಯಂಕಾಲ ರಾಜೋಪಚಾರ ಪೂಜೆಯೂ ನಡೆಯಲಿದೆ. ದಿನಾಂಕ 12 ರಂದು ಮುಂಜಾನೆ ಮಹಾ ಪೂರ್ಣಾಹುತಿ ಹಾಗೂ ಶ್ರೀ ಧಾರಾನಾಥ ದೇವರಲ್ಲಿ ಲಕ್ಷ ಬಿಲ್ವಾರ್ಚನೆ ಪೂರ್ವಕ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಪ್ರಸಾದ ಭೋಜನ ಇರುತ್ತದೆ.
ಅಧಿಕ ಮಾಸದ ಈ ವಿಶೇಷ ಸಂದರ್ಭದಲ್ಲಿ ಲೋಕ ಕಲ್ಯಾಣದ ಸಂಕಲ್ಪದೊAದಿಗೆ ನಡೆಯುವ ಈ ಎಲ್ಲಾ ಕಾರ್ಯಗಳಲ್ಲಿ ಸಕಲ ಭಕ್ತರೂ ಬಂದು ಸೇವಾಭಾಗಿಗಳಾಗಿ ಶ್ರೀ ಧಾರಾನಾಥ ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಎಂದು ದೇವಸ್ಥಾನದ ಆಡಳಿತ ಹಾಗೂ ಹರಿಹರೇಶ್ವರ ವೇದ ವಿದ್ಯಾಪೀಠ ಈ ಎರಡೂ ವತಿಯಿಂದ ಕೋರಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ