Big NewsImportant
Trending

ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರ: ನಾಗಪಂಚಮಿಯoದು ವಿಶೇಷ ಪೂಜೆ: ನಾಗ ದೋಷ ಮುಕ್ತಿಗಾಗಿ ರಾಜ್ಯದ ಮೂಲೆಮೂಲೆಯಿಂದ ಆಗಮಿಸುತ್ತಾರೆ ಭಕ್ತರು

ಹೊನ್ನಾವರ: ಸುಬ್ರಹ್ಮಣ್ಯ ಕ್ಷೇತ್ರವೆಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಆದರೆ ಆ ಕ್ಷೇತ್ರಕ್ಕಿಂತ ಪುರಾತನವಾದ, ಅದರಷ್ಟೇ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಕ್ಷೇತ್ರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿದೆ. ಹೌದು, ಇದು ಪ್ರಸಿದ್ದ ನಾಗಕ್ಷೇತ್ರಗಳಲ್ಲೊಂದು. ಹೀಗಾಗಿ ನಾಗರಪಂಚಮಿಗೆ ಇಲ್ಲಿ ಜನಸಾಗರವೇ ಹರಿದುಬರುತ್ತದೆ.

ಉತ್ತರಕನ್ನಡದ ಜೇನುಕೃಷಿಕನನ್ನು ಶ್ಲಾಘಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ಇಲ್ಲಿ ನಾಗರ ಕಲ್ಲಿಗೆ ನೈವೇದ್ಯ ನೀಡಿ, ಹಾಲಿನ ಅಭಿಷೇಕ ಮಾಡಿ, ಇಡಿಯಾದ ಬಾಳೆಗೊನೆ, ಅಡಿಕೆ ಹಿಂಗಾರ, ತೆಂಗಿನಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತರು ತಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ನಾಗರ ಹಾವಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಪರಿಹಾರ ದೊರೆಯುತ್ತದೆ, ಹಾವಿನ ದೊಷ ದೂರವಾಗುತ್ತದೆ ಎಂಬುದು ಪ್ರತೀತಿ. ಚರ್ಮರೋಗ ನಿವಾರಣೆ, ಸಂತಾನಪ್ರಾಪ್ತಿ , ದುಸ್ವಪ್ನ ದೂರೀಕರಣ, ವೈವಾಹಿಕ ಸಂಬoಧ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರ ವೃದ್ಧಿಗೆ ಜನ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಬೆಳ್ಳಿ, ಕಂಚು, ತಾಮ್ರಗಳ ತೊಟ್ಟಿಲು, ಸುಬ್ರಹ್ಮಣ್ಯ ಮೂರ್ತಿ, ನಾಗ ದೇವರ ಮೂರ್ತಿಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಮತ್ತು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆಯುತ್ತಾರೆ.

ನಾಗ ದೋಷ ಮುಕ್ತಿಗಾಗಿ ಹಲಾರು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾಧ ಸ್ವೀಕರಿಸುತ್ತಾರೆ. ಭಕ್ತರು ನಾಗರಪೂರ್ತಿಗಳನ್ನು ಪ್ರತಿಷ್ಟಾಪಿಸಲು ಪ್ರತ್ಯೇಕವಾಗಿ ನಾಗವನ ನಿರ್ಮಿಸಲಾಗಿದ್ದು 4000 ಕ್ಕೂ ಅಧಿಕ ನಾಗರ ಕಲ್ಲುಗಳಿವೆ. ಸರ್ಪ ಸಂಸ್ಕಾರವನ್ನು ಹೊರತುಪಡಿಸಿ ಎಲ್ಲಾ ಬಗೆಯ ಪೂಜೆಗಳು ಶ್ರೀ ಕ್ಷೇತ್ರ ಮುಗ್ವಾದಲ್ಲಿ ಜರುಗುತ್ತವೆ.

ಈ ದೇವಾಲಯ ನಾರದಮುನಿಗಳಿಂದ ಪ್ರತಿಷ್ಠಾಪನೆಯಾಗಿದ್ದು ಎಂಬ ಉಲ್ಲೇಖವಿದೆ. ಇಲ್ಲಿ ಬಂದು ಸೇವೆ ಸಲ್ಲಿಸಿದ್ರೆ ಭಕ್ತರ ಇಷ್ರ‍್ಥ ಸಿದ್ಧಿಸುತ್ತದೆ ಎಂಬುದು ನಂಬಿಕೆ. ಪ್ರತರ‍್ಷ ಚಂಪಾ ಷಷ್ಠಿಯಂದು ವಿಶೇಷ ಉತ್ಸವ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಹೀಗೆ ಮೂರು ಸಲ ಪ್ರಾಕಾರ ಬಲಿ ನಡೆಯುತ್ತದೆ. ಮಕರ ಸಂಕ್ರರಣದoದು ವಿಶೆಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವ ರಂಗಪೂಜೆ ಮತ್ತು ಮೂರು ಸಲ ಬಲಿಗಳು ನಡೆಯುತ್ತವೆ.

ಸ್ಕಂದ ಪುರಾಣದ ಸಹ್ಯಖಂಡದಲ್ಲಿ ಈ ಕ್ಷೇತ್ರದ ಮಹಿಮೆ ಬಣ್ಣಿಸಲ್ಪಟ್ಟಿದೆ. ಪ್ರಾಚೀನಕಾಲದಲ್ಲಿ ನೈಮಿಷಾರಣ್ಯವು ಋಷಿಮುನಿಗಳ ಆವಾಸವೂ ಧ್ಯಾನ, ತಪಸ್ಸು, ಭಗವತ್ ಚಿಂತನೆಗಳ ಕೇಂದ್ರವೂ ಆಗಿತ್ತಂತೆ ಈ ಕ್ಷೇತ್ರ. ಈ ಸ್ಥಳದಲ್ಲಿ ಬಾಲಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳ ಆವಾಸವಿದೆ. ಲೋಕ ಸಂಚಾರಿಗಳಾದ ನಾರದಮುನಿಗಳು ಒಮ್ಮೆ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನ ದರ್ಶನ ಪಡೆದು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ವಿಶೇಷ ಶಕ್ತಿ ಪ್ರಾಪ್ತಿಗಾಗಿ ಅಲೆದಾಡುತ್ತಿದ್ದರು.

ಈ ವೇಳೆ ಶರಾವತಿ ನದಿಯ ಉಪನದಿಯಾದ ಪಂಚಮುಖಿ ಹೊಳೆ ದಂಡೆಯಲ್ಲಿ ಶ್ರೀಗೋಪಾಲಕೃಷ್ಣನ ಸಾನಿಧ್ಯ ಕಂಡು ಧನ್ಯರಾದರು. ಅಲ್ಲಿ ಕೆಲಕಾಲ ನೆಲೆಸಿ ಮುಂದಕ್ಕೆ ಪ್ರಯಾಣಿಸಿದಾಗ ಸುಬ್ರಹ್ಮಣ್ಯ ಸ್ವಾಮಿಯ ಆವಾಸವಿದ್ದು ಈ ಸ್ಥಳದಲ್ಲಿ ಸುಬ್ರಹ್ಮಣ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಅಶರೀರವಾಣಿಯಾಯಿತು. ಅನತಿ ದೂರದಲ್ಲಿಯೇ ಅವರಿಗೆ ಏಕಮುಖ , ದ್ವಿಬಾಹುಗಳಿಂದ ಶೋಭಿತವಾದ ಸುಬ್ರಹ್ಮಣ್ಯನ ಶಿಲಾಮೂರ್ತಿ ಗೋಚರಿಸಿತು. ಆಗ ನಾರದರು ಸ್ಥಳೀಯ ಪುರೋಹಿತರ ಸಹಾಯದಿಂದ 9 ದಿನಗಳ ಪರ್ಯಂತ ಪಂಚರಾತ್ರಾ ವಿಧಿ ಮೂಲಕ ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಲಸುಬ್ರಹ್ಮಣ್ಯನೆಂದು ಕರೆದರು.

ದೇಗುಲದ ಎದುರು ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿಯನ್ನು ನಿರ್ಮಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡಿ ಮುಂದಕ್ಕೆ ಸಂಚಾರ ಕೈಗೊಂಡರು ಎಂಬುದು ನಂಬಿಕೆ. ನಾಗರ ಪಂಚಮಿ ಬಹಳ ವಿಶೇಷವಾದದ್ದು. ನಾಗವನದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ನಾಗವನದಲ್ಲಿ ಯಾರೂ ನಾಗದೇವರನ್ನ ಪ್ರತಿಷ್ಠೆ ಮಾಡಿದ್ದಾರೋ ಅವರು ನಾಗರಪಂಚಮಿಯoದು ಬಂದು ಸೇವೆ ಸಲ್ಲಿಸುತ್ತಾರೆ.

ಶ್ರೀಧರ ನಾಯ್ಕ ವಿಸ್ಮಯ ನ್ಯೂಸ್, ಹೊನ್ನಾವರ

Back to top button