ಮುಗುಚಿಬಿದ್ದ ಮೀನುಗಾರಿಕೆಗೆ ತೆರಳಿದ ದೋಣಿ: ಚಿಕ್ಕಪಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಇಬ್ಬರು ಮೀನುಗಾರರು

ಅಂಕೋಲಾ: ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮುಗುಚಿ ಬಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಅಂಕೋಲಾ ತಾಲೂಕಿನ ಹಾರವಾಡಾ – ಬೆಲೇಕೇರಿ ಸಮುದ್ರ ವ್ಯಾಪ್ತಿಯಲ್ಲಿ ಸಂಭವಿಸಿದೆ. ಅದೃಷ್ಟ ವಶಾತ ದೋಣಿಯಲ್ಲಿದ್ದ ಇಬ್ಬರು ಮೀನುಗಾರರರನ್ನು ಸ್ಥಳೀಯ ಇತರೆ ದೋಣಿಯವರು ರಕ್ಷಿಸಿದ್ದಾರೆ.

ಅಂಕೋಲಾ ತಾಲೂಕಿನ ಹಾರವಾಡ ವ್ಯಾಪ್ತಿಯಲ್ಲಿ ದೋಣಿ ಮೀನುಗಾರರಿಬ್ಬರು ,ಶ್ರೀ ಲಕ್ಷ್ಮೀ ರವಳನಾಥ ನಾಡದೋಣಿಯಲ್ಲಿ ಸೋಮವಾರ ನಸುಕಿನ ಜಾವ ಸಮುದ್ರ ಮೀನುಗಾರಿಕೆಗೆ ನಡೆಸುತ್ತಿದ್ದ ವೇಳೆ ಜಲ ಅವಘಡ ಸಂಭವಿಸಿದೆ. ಗಾಬಿತವಾಡದ ಬಾಬು ಟಾಕೇಕರ ಮತ್ತು ಸೋಮನಾಥ ಸಾದಿಯೇ ಎನ್ನುವವರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮುಗುಚಿ ಬಿದ್ದು ಗಾಯಗೊಂಡಿದ್ದಾರೆ. ಸಮುದ್ರದಲ್ಲಿ ಒಮ್ಮೇಲೆ ಬಂದ ಅಲೆಗಳ ರಭಸಕ್ಕೆ ದೋಣಿ ಮಗುಚಿಬಿದ್ದಿದೆ ಎನ್ನಲಾಗಿದ್ದು, ಇಂಜಿನ್ ಹಾಗೂ ಬಲೆ ಸೇರಿ ಲಕ್ಷಾಂತರ ಮೌಲ್ಯದ ಹಾನಿ ಅಂದಾಜಿಸಲಾಗಿದೆ.

,ಹತ್ತಿರದಲ್ಲೇ ಬೇರೆ ದೋಣಿಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೆಲ ಸ್ಥಳೀಯ ಮೀನುಗಾರರು, ನೀರಿನಲ್ಲಿ ಬಿದ್ದ ಟಾಕೇಕರ ಮತ್ತು ಸಾದಿಯೇ ಇವರ ಜೀವ ರಕ್ಷಣೆಗೆ ಮುಂದಾಗಿದ್ದಾರೆ. ಅದೃಷ್ಟವಶಾತ್ ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕ್ಕ ಪುಟ್ಟ ಗಾಯಗೊಂಡ ಅವರನ್ನು ಅಂಬುಲೆನ್ಸ್ ಮೂಲಕ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಒಳಪಡಿಸಲಾಗಿದೆ. ಬೆಲೇಕೇರಿ ಕರಾವಳಿ ಕಾವಲು ಪಡೆ ಪಿ ಎಸ್ ಐ ಪ್ರಿಯಾಂಕ , ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಕೆ ಏನ್ ಡಿ ಸಿಬ್ಬಂದಿಗಳು ಹಾಜರಿದ್ದರು.

ನಿತ್ಯಾನಂದ ಸಾದಿಯೇ, ಅಭಿಷೇಕ ಲುಮಾಜಿ, ರಾಹುಲ್ ಗಿರಫ್ ಮುತಾಂದವರು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.ಮೀನುಗಾರಿಕೆಯನ್ನೇ ಅವಲಂಬಿಸಿ ಲಕ್ಷಾಂತರ ರೂಪಾಯಿ ಸಾಲ ಮಾಡಿ,ತಮ್ಮ ಜೀವ ಪಣಕಿಟ್ಟು ನೀರಿಗಿಳಿಯುವ ಮೀನುಗಾರರ ಬದುಕು ಅತೀವ ಸಂಕಷ್ಟದಲ್ಲಿದ್ದು,ನಾನಾ ಕಾರಣಗಳಿಂದ ನೊಂದ ಕುಟುಂಬಗಳಿಗೆ ಹಲವು ಬಾರಿ ಯೋಗ್ಯ ಪರಿಹಾರ ದೊರೆಯದಿರುವುದು ಆ ಕುಟುಂಬವನ್ನು ಮತ್ತಷ್ಟು ಬೀದಿಗೆ ತಂದು ನಿಲ್ಲಿಸುವ ಸಾಧ್ಯತೆ ಇರುವುದರಿಂದ,ಸಂಬಂಧಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ,ಈ ಹಿಂದಿನ ಕೆಲ ಪ್ರಕರಣಗಳಲ್ಲಿ ಪರಿಹಾರ ವಿತರಣೆಗೆ ಇರುವ ತೊಡಕು ನಿವಾರಣೆಗೆ ಯೋಗ್ಯ ಕ್ರಮ ಕೈಗೊಂಡು,ಕಡಲ ಮಕ್ಕಳ ಒಡಲು ತಂಪಾಗಿಸಬೇಕು ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version