ಸ್ವಾಮಿ ವಿವೇಕಾನಂದ ಗುರುಕುಲ ಶಾಲೆಯಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ: ಗುರುಕುಲದಲ್ಲೊಂದು ಶಾಶ್ವತ ಪ್ರತಿಭೆ
ಅಂಕೋಲಾ : ಇಲ್ಲಿನ ಹೊಸಗದ್ದೆಯಲ್ಲಿರುವ ಸ್ವಾಮಿ ವಿವೇಕಾನಂದ ಗುರುಕುಲ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ನಿವೃತ್ತ ಮುಖ್ಯಾಧ್ಯಾಪಕ ಲಕ್ಷ್ಮಣ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ಮಕ್ಕಳಲ್ಲಿಯೂ ಒಂದಲ್ಲ ಒಂದು ಸುಪ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅವಕಾಶ ಕೊಟ್ಟಾಗ ಅವರ ಪ್ರತಿಭೆ ಬೆಳಕಿಗೆ ಬರಲು ಸಾಧ್ಯವಾಗುತ್ತದೆ. ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.
ಮುಖ್ಯ ಅತಿಥಿ ಕಲಾವಿದರ ವೇದಿಕೆಯ ಅಧ್ಯಕ್ಷ ಹಾಗೂ ಪತ್ರಕರ್ತ ನಾಗರಾಜ ಜಾಂಬಳೇಕರ ಮಾತನಾಡಿ ಪ್ರತಿಭೆ ಹುಟ್ಟಿನಿಂದ ಬರಬಹುದು ಅಥವಾ ಇತರರಿಂದ ಪ್ರೇರಣೆಯಾಗಿ ಬಂದಿರಬಹುದು ಆದರೆ ಪರಿಶ್ರಮ ಅಗತ್ಯ. ಪರಿಶ್ರಮವಿಲ್ಲದೆ ಪ್ರತಿಭೆಯನ್ನು ಉಳಿಸಿ ಬೆಳೆಸಿಕೊಳ್ಳಲು ಸಾಧ್ಯವಾಗುವದಿಲ್ಲ. ಗುರುಕುಲ ಶಾಲೆಯ ಆಡಳಿತ ಮತ್ತು ಬೋಧಕ ಸಿಬ್ಬಂದಿಗಳು ಉತ್ತಮ ಶಿಕ್ಷಣದ ಜೊತೆಗೆ ಮಕ್ಕಳ ಪ್ರತಿಭೆಗೆ ಉತ್ತಮ ಅವಕಾಶಗಳನ್ನು ನೀಡುತ್ತಿರುವದು ಶ್ಲಾಘನೀಯ. ಈ ಶಾಲೆ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕವಾಗಿ ಒಳ್ಳೆಯ ಸಾಧನೆ ಮಾಡಲಿದೆ ಎಂದರು. ವೇದಿಕೆಯಲ್ಲಿ ಶಾಲೆಯ ಪ್ರಿನ್ಸಿಪಾಲರಾದ ಹಸನ್ ಶೇಖ ಹಾಗೂ ಮುಖ್ಯಾಧ್ಯಾಪಕ ವಿವೇಕ ಗೌಡ ಉಪಸ್ಥಿತರಿದ್ದರು. ಶಿಕ್ಷಕಿ ರೂಪಾ ಗೌಡ ಸ್ವಾಗತಿಸಿದರು. ಬಿಂದು ಸುನೀಲರಾಜ್ ಕಾರ್ಯಕ್ರಮ ನಿರ್ವಹಿಸಿದರು. ನಯನಾ ಗಾಂವಕರ ವಂದಿಸಿದರು. ನಂತರ ಎಲ್ ಕೆ ಜಿ ಯಿಂದ ಎಂಟನೇ ವರ್ಗದವರೆಗಿನ ಮಕ್ಕಳಿಗಾಗಿ ಛದ್ಮವೇಶ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಬಹುಮಾನ ಗೆದ್ದರು. ಈ ಸಂದರ್ಭದಲ್ಲಿ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿಗಳು, ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.
ಗುರುಕುಲದಲ್ಲೊಂದು ಅಸಾಧಾರಣ ಪ್ರತಿಭೆ ಶಾಶ್ವತ ಅಣ್ವೇಕರ.
ಹೊಸಗದ್ದೆಯ ಸ್ವಾಮಿ ವಿವೇಕಾನಂದ ಗುರುಕುಲದಲ್ಲಿನ ವಿದ್ಯಾರ್ಥಿ ಶಾಶ್ವತ ಅಣ್ವೇಕರ ತನ್ನ ವಿಶಿಷ್ಠ ಶೈಲಿಯ ಡ್ಯಾನ್ಸ ನಿಂದ ನಾಡಿನ ಗಮನ ಸೆಳೆಯುತ್ತಿದ್ದಾನೆ. ಅಲ್ಲದೆ ಅಂಕೋಲೆಯ ಜನತೆ ಹುಬ್ಬೇರಿಸುವಂತೆ ಮಾಡಿದ್ದಾನೆ. ಗುರುಕುಲ ಶಾಲೆಯಲ್ಲಿ 6 ನೇ ತರಗತಿಯಲ್ಲಿರುವ ಶಾಶ್ವತ ಅಣ್ವೇಕರ ಇಷ್ಟು ಚಿಕ್ಕ ವಯಸ್ಸಿನಲ್ಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಿರಿಯರ ಸೋಲೊ ಡಾನ್ಸ ಚಾಂಪಿಯನಶಿಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಲ್ಲದೆ ಕುಂದಾಪುರ, ಗಂಗಾವತಿ, ಸೊರಬಾ, ಭದ್ರಾವತಿ, ಕುಮಟಾ, ಉಡುಪಿ ಮುಂತಾದ ಕಡೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈಗಾಗಲೇ ಟಿವಿ ಚಾನೆಲ್ಲಿನ ಡಾನ್ಸ ಶೋ ಆಡಿಶನ್ನಿಗೂ ಎಂಟ್ರಿ ಕೊಟ್ಟಿರುವ ಈ ಪೋರ ಶೀಘ್ರದಲ್ಲಿ ಟಿವಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾನೆ ಎನ್ನಲಾಗಿದೆ. ಇವನ ಈ ಸಾಧನೆಗೆ ಸ್ವಾಮಿ ವಿವೇಕಾನಂದ ಗುರುಕುಲ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಸೂಕ್ತ ಪ್ರೋತ್ಸಾಹ ನೀಡುತ್ತ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ