ಜಗದ ರಕ್ಷಕನ ಜನುಮದಿನ

ಇಂದು ಕೃಷ್ಣ ಜನ್ಮಾಷ್ಟಮಿ
ಎಲ್ಲಡೆ ವಾಸುದೇವನ ಸ್ಮರಣೆ

[sliders_pack id=”3498″]

(ಶ್ರಾವಣಮಾಸದ ಕೃಷ್ಣ ಪಕ್ಷದ ಅಷ್ಟಮಿ ರೋಹಿಣಿ ನಕ್ಷತ್ರದಲ್ಲಿ ವಸುದೇವ–ದೇವಕಿಯ ಮಗನಾಗಿ ಜನಿಸಿದ ಕೃಷ್ಮನು ನಂದಗೋಪ-ಯಶೋದೆಯ ಪಾಲನೆಯಲ್ಲಿ ಬೆಳೆಯುವನು. ದುಷ್ಟರ ಸಂಹಾರಕ್ಕೆ ಶಿಷ್ಯರ ಪೊರೆಯಲು ಅವತರಿಸಿದ ವಾಸುದೇವನು ತನ್ನ ಲೀಲಾವಿನೋದದಿಂದ ಜಗದ ಜನರಿಗೆ ಆನಂದ ಉಂಟುಮಾಡಿದವನು. ಕೃಷ್ಣನ ಜನ್ಮದಿನ ಕೃಷ್ಣಾಷ್ಟಮಿಯಾಗಿ ಜಗತ್ತಿನಾದ್ಯಂತ ಸಂಭ್ರಮದಿಂದ ಕೃಷ್ಣ ಭಕ್ತರು ಆಚರಿಸುವರು. ತನ್ನಿಮಿತ್ತ ಈ ಲೇಖನ.)
ಭಗವಾನ್ ಶ್ರಿಕೃಷ್ಣನ ವ್ಯಕ್ತಿತ್ವ ಅದ್ಭುತವಾದುದು. ಆತನ ಜೀವನದ ಪ್ರತಿ ಘಟನೆಯೂ ಅನುಸರಣೀಯವಾದುದು. ಅದಕ್ಕಾಗಿಯೇ ಮಾನವನು ಸಾವಿರಾರು ವರ್ಷಗಳಿಂದ ಕೃಷ್ಣನ ನಡೆ-ನುಡಿಗಳನ್ನು ಅನುಸರಿಸುತ್ತಾ ಬಂದಿದ್ದಾನೆ. ಆತನ ಬಾಲ್ಯಲೀಲೆಗಳಿಂದ ಹಿಡಿದು ನಿರ್ಯಾಣದ ತನಕದ ಘಟನೆಗಳು ಇಂದಿಗೂ ಸಹ, ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಸಮಾಧಾನವನ್ನು ಸೂಚಿಸುತ್ತದೆ. ದೇವರದೇವ ಮಾನವರೂಪದಲ್ಲಿ ಅವತರಿಸಿ, ಸಾಮಾನ್ಯ ಮಾನವರಲ್ಲಿ ಸಾಮಾನ್ಯವಾಗಿ ತನ್ನ ಲೀಲೆಯನ್ನು ತೋರುತ್ತಾ, ಅಲೌಕಿಕ ಸಾಮಥ್ರ್ಯವನ್ನು ಪ್ರಕಟಿಸಿದನು. ಬಾಲ್ಯದಲ್ಲಿ ಕೃಷ್ಣ ತನ್ನ ಗೊಲ್ಲ ಗೆಳೆಯರೊಂದಿಗೆ ಬೆಣ್ಣೆಗಳನ್ನು ಕಳ್ಳತನ ಮಾಡುವುದು, ಗೋಪಿಕಾಸ್ತ್ರೀಯರ ಮೊಸರಿನ ಗಡಿಗೆಗಳನ್ನು ಒಡೆಯುವುದು. ಇದೆಲ್ಲಾ ಬಾಲ್ಯದ ತುಂಟತನದಂತೆ ತೋರಿದರೂ, ಅದಕ್ಕಿಂತ ಮಿಗಿಲಾಗಿ ದುಷ್ಟ ಕಂಸನ ತನಕ ಹಾಲು-ಮೊಸರು ಬೆಣ್ಣೆ-ತುಪ್ಪ ತಲುಪದಂತೆ ಮಾಡುವ ಗಂಭೀರ ಯೋಜನೆಯಾಗಿತ್ತು. ಕಂಸವನ್ನು ವಧಿಸಿದ ಮೇಲೆ ಮಥುರೆಯ ರಾಜನಾಗಬಹುದಿತ್ತು, ಆದರೆ ಆ ರಾಜ್ಯ ಮೋಹದಿಂದ ದೂರ ಉಳಿದು ಮಥುರೆಯ ರಾಜಸಿಂಹಾಸನದ ಮೇಲೆ ಕಂಸನ ತಂದೆ ಉಗ್ರಸೇನನನ್ನು ಅದರ ಪೂರ್ವಕವಾಗಿ ಕುಳ್ಳಿರಿಸಿದನು.

ಸರ್ವ ಸಮರ್ಥನಾಗಿದ್ದರೂ ಸರ್ವರ ಸಹಭಾಗಿತ್ವವನ್ನು ಉಪಯೋಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ. ಗೋಪಾಲಕ ಕೃಷ್ಣ ತನ್ನ ಗೊಲ್ಲ ಸಹಚರರೊಂದಿಗೆ ಗೋವುಗಳನ್ನು ಮೇಯುಸುತ್ತಾ ಗೋವರ್ಧನ ಪರ್ವತದತ್ತ ತೆರಳಿದನು. ಅಲ್ಲಿ ಗೋಪಿಕಾಸ್ತ್ರೀಯರು ಹಲವು ಬಗೆಯ ನೈವಿದ್ಯದ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಹಾಡುತ್ತಾ ಕುಣಿಯುತ್ತಾ ಇಂದ್ರೋತ್ಸವವನ್ನು ಆಚರಿಸುತ್ತಿದ್ದರು. ಶ್ರೀಕೃಷ್ಣ ಈ ಉತ್ಸವದ ಸಂಭ್ರಮಕ್ಕೆ ಕಾರಣ ಕೇಳಲಾಗಿ ಗೋಪಿಕಾಸ್ತ್ರೀಯರು “ಇಂದು ದೇವತೆಗಳ ರಾಜ ಇಂದ್ರನ ಪೂಜೆ ನಡೆಯುವುದು ಇದರಿಂದ ಪ್ರಸನ್ನಗೊಂಡ ದೇವರಾಜ ಇಂದ್ರನು ಮಳೆ ಸುರಿಸುವನು.” ಎಂದರು. ಕೃಷ್ಣ ಹೇಳಿದ-“ ಇಂದ್ರ ಅಷ್ಟು ಶಕ್ತಿವಂತನೇ? ಅದಕ್ಕಿಂತ ಹೆಚ್ಚಿನ ಶಕ್ತಿವಂತ ನಮ್ಮ ಗೋವರ್ಧನ ಪರ್ವತನಿದ್ದಾನೆ. ಗೋವರ್ಧನ ಪರ್ವತದ ಕಾರಣದಿಂದಾಗಿಯೇ ಮಳೆಯಾಗುವುದು. ಆದ್ದರಿಂದ ನಾವು ಗೋವರ್ಧನಪರ್ವತವನ್ನು ಪೂಜಿಸಬೇಕು” ಎಂದಾಗ ಗೋಪಿಕಾಸ್ತ್ರೀಯರು ಒಪ್ಪಿದರು. ಇಂದ್ರನ ಪೂಜಿಸುವ ಬದಲಾಗಿ ಗೋವರ್ಧನಪರ್ವತ ಪೂಜಿಸುವ ತಯಾರಿ ನಡೆಯುವುದು. ಎಲ್ಲಾ ಗೊಲ್ಲರು-ಗೋಪಿಕಾಸ್ತ್ರೀಯರು ತಮ್ಮ ತಮ್ಮ ಮನೆಯಿಂದ ಸಿದ್ದಪಡಿಸಿಕೊಂಡು ಬಂದ ನೈವೇದ್ಯದ ಪದಾರ್ಥಗಳನ್ನು ಗೋವರ್ಧನಪರ್ವತನಿಗೆ ಪೂಜಿಸಿ ಅರ್ಪಿಸಲು ಪ್ರಾರಂಭಿಸಿದರು. ಈ ಸಂಗತಿ ದೇವೆಂದ್ರನಿಗೂ ತಲುಪಿತು. ಕೋಪಗೊಂಡ ಇಂದ್ರ ಮೇಘಗಳಿಗೆ ಈ ಕೂಡಲೇ ಆ ಭಾಗಕ್ಕೆ ತೆರಳಿ ಮಳೆಸುರಿಸಿ ಜಲಪ್ರಳಯ ಉಂಟುಮಾಡಿ ಎಂದು ಆಜ್ಞಾಪಿಸಿದ. ಅದೇ ಪ್ರಕಾರವಾಗಿ ಮುಸಲಧಾರೆಯಾಗಿ ಮಳೆ ಸುರಿಯಿತು. ಗೋವರ್ಧನ ಪರ್ವತದ ತಪ್ಪಲಿನಲ್ಲಿ ನೆರೆದ ಸರ್ವರೂ ಭಯಭೀತರಾಗಿ ಕೃಷ್ಣನ ಮೊರೆ ಹೋದರು. ಈಗಾಗಲೇ ಪೂತನಿ, ಅಘಾಸುರ, ಧೇನುಕಾಸುರ ಮುಂತಾದವರನ್ನು ಸಂಹರಿಸಿದ ಕಾರಣ, ಕೃಷ್ಣನ ಅಲೌಕಿಕ ಶಕ್ತಿ ಎಲ್ಲರಿಗೂ ವಿದಿತವಾಗಿತ್ತು. ಕೃಷ್ಣ ಅಲ್ಲಿ ನೆರೆದ ಸರ್ವರಿಗೂ ಗೋವರ್ಧನಪರ್ವತನಿಗೆ ಶರಣು ಹೋಗುವಂತೆ ಹೇಳಿದನು. ಅವನೇ ಎಲ್ಲರನ್ನೂ ರಕ್ಷಿಸುವನು ಎಂದು ಹೇಳಿ, ಕೃಷ್ಣ ತನ್ನ ಕಿರುಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ, ಎಲ್ಲಾ ಗೋವುಗಳನ್ನು ಗೋಪಾಲಕರನ್ನು ರಕ್ಷಿಸಿದ ಎಂದು ಹೇಳಲಾದರೂ, ಎಲ್ಲಾ ಗೋಪಾಲ ಬಾಲಕರಿಗೆ ತಮ್ಮ ತಮ್ಮ ದಂಡಗಳ ಮೂಲಕ ಪರ್ವತದ ಕೆಳಭಾಗವನ್ನು ಎತ್ತಿ ಹಿಡಿಯಲು ಹೇಳಿದ. ಅಮಿತ ಉತ್ಸಾಹದಿಂದ ತಮ್ಮ ತಮ್ಮ ದಂಡದ ಮೂಲಕ ಪರ್ವತದ ಅಡಿಯಲ್ಲಿ ಶಕ್ತಿ ಕೇಂದ್ರಿಕರಿಸಿದರು. ಯೋಗೇಶ್ವರ ಎಲ್ಲವನ್ನೂ ಮಾಡಲು ಸಾಮಥ್ರ್ಯವನ್ನು ಹೊಂದಿದ್ದರೂ ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕಾರ್ಯನಿರ್ವಹಿಸಿದ. ಇದರಿಂದ ಅವರೆಲ್ಲರಿಗೂ ಸಫಲತೆಯ ಭಾವನೆ ಉಂಟಾಗುವಂತೆ ಮಾಡಿದ. ಹಾಗೂ ಮೊದಲ ಬಾರಿಗೆ ಪ್ರಕೃತಿ ಪೂಜೆಗೆ ಕರೆ ನೀಡಿ ಕ್ರಾಂತಿ ಉಂಟುಮಾಡಿದ.

ಮಿತ್ರತ್ವದ ಮರ್ಮವನ್ನು ಶ್ರೀಕೃಷ್ಣನ ಹೊರತಾಗಿ ಮತ್ಯಾರು ಅರಿಯಲು ಸಾಧ್ಯ? ಕೃಷ್ಣನ ಬಾಲ್ಯ ಗೆಳೆಯ ಬಡಸುದಾಮ ಕೃಷ್ಣನ ಅರಮನೆ ತಲುಪಿದ. ಕೃಷ್ಣ ಸುದಾಮನನ್ನು ತಾನೆ ಸ್ವತ: ಸ್ವಾಗತಿಸಿ ಆದರದಿಂದ ಸತ್ಕರಿಸಿದ. ಕೆಲದಿನಗಳ ತನಕ ತನ್ನ ಮನೆಯಲ್ಲಿಯೇ ಉಳಿಸಿಕೊಂಡು ಕೊನೆಯಲ್ಲಿ ಸನ್ಮಾನಿಸಿ ಬಿಳ್ಕೋಟ್ಟ. ಜನರು ಯೋಚಿಸಿದರು-ಸುದಾಮ,ಭಗವಂತನಿಗೆ ತಮ್ಮ ಸ್ಥಿತಿಯನ್ನು ನಿವೇದಿಸಿ ದಾರುಣ ಬಡತನ ಹೋಗಲಾಡಿಸಬಹುದಿತ್ತು. ಧನ-ಸಂಪತ್ತುಗಳನ್ನು ಕೇಳಿಕೊಳ್ಳಬಹುದಿತ್ತಲ್ಲ? ಕೃಷ್ಣನ ಲೀಲೆಯನ್ನು ನೋಡಿರಿ. ಸುದಾಮ ತನ್ನ ನಗರಕ್ಕೆ ಬಂದು ತಲುಪಿದ. ತನ್ನ ಗುಡಿಸಿಲಿನ ಸ್ಥಾನದಲ್ಲಿ ದೊಡ್ಡದೊಂದು ವೈಭವೋಪೇತವಾದ ಭವನವನ್ನು ನೋಡಿ ಆಶ್ವರ್ಯಗೊಂಡ. ಕೃಷ್ಣ ಮಿತ್ರಧರ್ಮವನ್ನು ಕೊನೆಯತನಕ ಪಾಲಿಸುತ್ತಾ, ತನ್ನ ಗೆಳೆಯ ಸುದಾಮನ ಸ್ವಾಭಿಮಾನಕ್ಕೆ ಚ್ಯುತಿಯಾಗದಂತೆ ಆತನ ಗಮನಕ್ಕೆ ತರದೆ, ಹೇಳದೆ ಆತನಿಗೆ ತಲುಪಿಸುವ ಕಲೆ ಕೃಷ್ಣನ ಹೊರತಾಗಿ ಇನ್ಯಾರಿಗೆ ಇರಲು ಸಾಧ್ಯ?

ಕೌರವ-ಪಾಂಡವರ ನಡುವೆ ಯುದ್ಧ ಸಂಭವಿಸಬಾರದೆಂದು ಅಂತಿಮಕ್ಷಣದವರೆಗೂ ಪ್ರಯತ್ನಿಸಿದ. ಕೌರವ-ಪಾಂಡವರ ನಡುವೆ ಸಂಧಾನಕ್ಕೆ ಪ್ರಯತ್ನಿಸಿದ. ಆದರೆ ಯುದ್ಧವೇ ನಡೆಯಬೇಕೆಂದು ಉಭಯತ್ರ ತೀರ್ಮಾನವಾಗಿ ಕುರುಕ್ಷೇತ್ರದಲ್ಲಿ ಸೇರಿದಾಗ, ಆ ಸಂದರ್ಭದಲ್ಲಿ ಅರ್ಜುನ ಶಸ್ತ್ರ ತ್ಯಜಿಸಿ ಈ ಯುದ್ಧ ಮಾಡಲಾರೆ ಎಂದಾಗಲೂ, ತನ್ನ ಜನರ ವಿರುದ್ಧವೇ ಹೋರಾಡುವಂತೆ ಅರ್ಜುಜನಿಗೆ ಉಪದೇಶಿಸಿದ. ಸತ್ಯ ಮತ್ತು ಧರ್ಮದ ಪಾಲನೆಗಾಗಿ ಯುದ್ಧ ಸಂಘರ್ಷ ಅನಿವಾರ್ಯ ಎಂದು ಗೀತೋಪದೇಶದ ಮೂಲಕ ಉಪದೇಶಿಸಿದ ಅದಿಂದು ಎಲ್ಲರಿಗೂ ಮಾರ್ಗದರ್ಶಕವಾಗಿದೆ.

ಯೋಗೇಶ್ವರ ಕೃಷ್ಣನ ಜೀವನ ದರ್ಶನವೊಂದು ಆದರ್ಶ ಜೀವನ ಶೈಲಿಯಾಗಿದೆ. ಅದನ್ನು ತಮ್ಮದಾಗಿಸಿಕೊಂಡು ನಮ್ಮ ಜೀವನವನ್ನು ಪೂರ್ಣತೆಯತ್ತ ತೆರಳುವಂತೆ ಮಾಡಬೇಕು. ಆತನ ಜೀವನದ ಒಂದೊಂದು ಪ್ರಸಂಗವೂ ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೂ ಸಮಾಧಾನ ತೋರುವುದು. ಕೃಷ್ಣನನ್ನು ಕೇವಲ ಪೂಜಿಸುವುದಲ್ಲ. ಆತನ ಚರಿತ್ರೆಯನ್ನು ಆದರ್ಶಗಳನ್ನು ಪಾಲಿಸಲು ಪ್ರಯತ್ನಿಸಿದಾಗಲೇ ಕೃಷ್ಣಜನ್ಮಾಷ್ಟಮಿ ಹಬ್ಬ ಸಾರ್ಥಕವಾಗುವುದು.

ಲೇಖನ:
ಶ್ರೀ ಗಣೇಶ ಭಟ್, ಸಂಸ್ಕøತ ಉಪನ್ಯಾಸಕರು
ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜು, ನೆಲ್ಲಿಕೇರಿ ಕುಮಟಾ (ಉ.ಕ)
Exit mobile version