Important
Trending

ಟ್ರಾಲಿಯ ರೋಪ್ ತುಂಡಾಗಿ ಉರುಳಿದ ಕಬ್ಬಿಣದ ಚೌಪಟ್ಟಿಗಳು: ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಅಂಕೋಲಾ: ಇಲ್ಲಿನ ನೀಲಂ ಪುರ ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅವಘಡವೊಂದರಲ್ಲಿ ಅತಿವೇಗದಿಂದ ಸಾಗುತ್ತಿದ್ದ ಟ್ರಾಲಿಯ ರೋಪ್ ತುಂಡಾಗಿ, ಅದರಲ್ಲಿದ್ದ ಕಬ್ಬಿಣದ ಚೌಪಟ್ಟಿಗಳು ಕೆಳಗೆ ಉರುಳಿದ ಪರಿಣಾಮ, ಹೆದ್ದಾರಿ ಅಂಚಿನಲ್ಲಿ ನಡೆದು ಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ ನೋವುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟ್ರಾಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಂತ್ರದ ಬಿಡಿ ಭಾಗ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗುವಂತಾದ ಘಟನೆ ಅಂಕೋಲಾ ತಾಲೂಕಿನ ನೀಲಂಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸoಭವಿಸಿದೆ.

ಹಾವೇರಿ ನಿವಾಸಿಗಳಾದ ದರ್ಶನ ಕೆಂಚಪ್ಪ ಕಂಡೋಜಿ (12) ಕಿರಣ ಹನುಮಂತಪ್ಪ ಮೇಗಲಮನೆ (12) ಗಾಯಗೊಂಡ ವಿದ್ಯಾರ್ಥಿಗಳು. ಅಜ್ಜಿಕಟ್ಟಾ ಸರ್ಕಾರಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿಗಳಾದ ಇವರು ಶನಿವಾರದ ತರಗತಿ ಮುಗಿದ ನಂತರ ಹೆದ್ದಾರಿ ಪಕ್ಕದ ಕಚ್ಚಾರಸ್ತೆ ಮೂಲಕ ಬಾಳೇಗುಳಿ – ವಿಠಲ ಘಾಟ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಭಾರೀ ಗಾತ್ರದ ಸರಕು ತುಂಬಿ ಅಂಕೋಲಾ ಮಾರ್ಗವಾಗಿ ಮಂಗಳೂರು ಕಡೆ ಸಾಗುತ್ತಿದ್ದ ವೇಳೆ ಸರಕುಗಳಿಗೆ ಕಟ್ಟಿದ್ದ ಹಗ್ಗ ತುಂಡಾಗಿ ಅದರಲ್ಲಿದ್ದ ಕಬ್ಬಿಣದ ಚೌಕಟ್ಟುಗಳು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿದ್ದಿದೆ. ದರ್ಶನ ಎಂಬಾತನ ಎಡಗಾಲಿಗೆ ಹಾಗೂ ಕಿರಣ ಎಂಬಾತನ ಎಡಕಾಲಿನ ತೊಡೆ ಮತ್ತು ಬಲ ಕೈ ಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಸ್ಥಳೀಯರು ಗಾಯಾಳುಗಳನ್ನು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಕ್ರಿಮ್ಸ್ ಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಅಂಕೋಲಾ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಮತ್ತು ಸುನೀಲ ಹುಲ್ಲೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಲು ಮಾಗದರ್ಶನ ಮಾಡಿದರು. ಮತ್ತು ಎನ್ ಎಚ್ ಐ ಹಾಗೂ ತಮ್ಮ ಇಲಾಖಾ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ, ಹೆದ್ದಾರಿಯಲ್ಲಿ ಇತರೆ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ, ಅಲ್ಲಲ್ಲಿ ಬಿದ್ದ ಕಬ್ಬಿಣದ ಚೌಕಟ್ಟುಗಳನ್ನು ಪಕ್ಕಕ್ಕೆ ಸರಿಸಿ,ಟ್ರಾಲಿ ಯನ್ನು ಹೆದ್ದಾರಿ ಪಕ್ಕಕ್ಕೆ ನಿಲ್ಲಿಸಲು ಸೂಚಿಸಿ ಸಂಚಾರ ಸುರಕ್ಷತೆಗೆ ಕ್ರಮ ಕೈಗೊಂಡರು.

ಅದೃಷ್ಟ ವಶಾತ ಹೆದ್ದಾರಿ ಅಂಚಿನಲ್ಲಿ ನಡೆದು ಕೊಂಡು ಹೋಗುತ್ತಿದ್ದ ಕೆಲ ಪುಟಾಣಿಗಳು, ಅವರ ಪಾಲಕರು, ಮತ್ತಿತರ ಕೆಲ ವಿದ್ಯಾರ್ಥಿಗಳು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಘಟನಾ ಸ್ಥಳದಲ್ಲಿ ವಿದ್ಯಾರ್ಥಿಗಳ ಛತ್ರಿ ಮತ್ತಿತರ ಪರಿಕರ ಬಿದ್ದಿರುವುದು ಕಂಡುಬoತು.

ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಮಾಹಿತಿ ಪಡೆದು, ಕೆಲ ಅಗತ್ಯ ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಶಾಂತಲಾ ನಾಯಕ , ಹಾಗೂ ಇಲಾಖೆಯ ಇತರರು ಆಸ್ಪತ್ರೆಗೆ ಭೇಟಿ ನೀಡಿ , ಗಾಯಾಳು ವಿದ್ಯಾರ್ಥಿಗಳಿಗೆ ಧ್ಯೆರ್ಯ ತುಂಬಿ, ಮುಂದಿನ ಕ್ರಮ ಕೈಗೊಂಡರು.

ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಟ್ರಾಲಿ ಚಾಲಕ ಮಹಾರಾಷ್ಟ್ರದ ಕೋಲಾಪುರ ನಿವಾಸಿ ವಿಜಯ ಬಲಭೀಮ ಡೊರೊಲೆ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದ್ದು, ಸುದ್ದಿ ತಿಳಿದ ಶಾಸಕ ಸತೀಶ ಸೈಲ್ ಬಡ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೆ ಒತ್ತು ನೀಡುವಂತೆ ಸಂಬAಧಿಸಿದವರಿಗೆ ಸೂಚಿಸಿದ್ದಾರೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button