ಅಂಕೋಲಾ : ಪುರಸಭೆ ವ್ಯಾಪ್ತಿಯ ಆಸ್ಲಗದ್ದೆಯ ಮನೆಯೊಂದರ ಎದುರಿನ ಪ್ರದೇಶದಲ್ಲಿ ಭಾರೀ ಗಾತ್ರದ ಪತಂಗ (ಅಟ್ಲಾಸ್ ಮೊತ್) ವೊಂದು ಕೆಲ ಕಾಲ ಕಾಣಿಸಿಕೊಂಡು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿತ್ತು. ಅಂಗೈಗಿಂತಲೂ ದೊಡ್ಡ ಗಾತ್ರದ ಬಹಳ ಅಪರೂಪದ ಪತಂಗ , ಜ್ಯೋತಿ ನಾಯ್ಕ್ ಎನ್ನುವವರ ಮನೆಯ ಅಂಗಳದ ಎದುರು ಪತ್ತೆಯಾಗಿತ್ತು. ಕಾಗೆ ಅಥವಾ ಇತರೆ ಪಕ್ಷಿಗಳು ಅದನ್ನು ಕುಕ್ಕಲು ಮುಂದಾದವು ಎನ್ನಲಾಗಿದ್ದು, ಈ ವೇಳೆ ಗೋವಿಂದ ಉರಿಯಾ ನಾಯ್ಕ ಅದನ್ನು ಗಮನಿಸಿ, ಸುಂದರ ಪಾತರಗಿತ್ತಿ ಇದು ಎಂದು ತಿಳಿದು ಅದನ್ನು ರಕ್ಷಿಸಲು ಮುಂದಾಗಿದ್ದಾರೆ.
ಬಳಿಕ ಹತ್ತಿರದಲ್ಲೇ ಇದ್ದ ಈಶ್ವರ್ ನಾಯ್ಕ್,ಮಿಲನ್ ಹುಲಸ್ಪಾರ, ಮಹಮದ್ ಸಾಬ್, ಜ್ಯೋತಿ ನಾಯ್ಕ ಮತ್ತಿತರರು ಸಹಕರಿಸಿದ್ದು, ಎಲ್ಲರೂ ಅದರ ಬಣ್ಣ,ಪುಕ್ಕ ಇತ್ಯಾದಿ ವರ್ಣನೆಯನ್ನು ಮಾಡುತ್ತ ಬಲು ಖುಷಿ ಹಾಗೂ ಕುತೂಹಲದಿಂದ ವೀಕ್ಷಿಸಿದ್ದಾರೆ.ಸ್ಥಳೀಯ ಪ್ರಮುಖ ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ್ ನಾಯ್ಕ ಅಸ್ಲಗದ್ದೆ ಇವರು,ಈ ಅಪರೂಪದ ಪತಂಗವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ.
ಸಾಮಾನ್ಯವಾಗಿ ಹಲವರು ಇದನ್ನು ಚಿಟ್ಟೆ ಅಥವಾ ಪಾತರಗಿತ್ತಿ ಎಂದೇ ಭಾವಿಸಿ ಕೊಳ್ಳುತ್ತಾರಾದರು,ಅಸಲಿಗೆ ಇದು ಚಿಟ್ಟೆ (ಪಾತರಗಿತ್ತಿ ) ಆಗಿರದೇ, ದೈತ್ಯಾಕಾರದ ಪತಂಗವಾಗಿದೆ. ಅಟ್ಲಾಸ್ ಮೊತ್ ಅಥವಾ ಮಾಥ್ ಎನ್ನಲಾಗುವ ಇದರ ವೈಜ್ಞಾನಿಕ ಹೆಸರು ಅಟಾಕಸ್ ಅಟ್ಲಾಸ್ ಎನ್ನಲಾಗುತ್ತಿದೆ.
ಈ ಕುರಿತು ವಿಸ್ಮಯ ವಾಹಿನಿಯವರು ವಲಯ ಅರಣ್ಯಾಧಿಕಾರಿ ಜಿ.ವಿ ನಾಯ್ಕ ಇವರಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದಾದಾಗ,ಮಾಧ್ಯಮದೊಂದಿಗೆ ಮಾತನಾಡಿದ ಅವರು ಚಿಟ್ಟೆಗೂ ಪತಂಗಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಪೇರಲೆ, ಸಂಪಿಗೆಯಂತ ಕೆಲವೊಂದು ಸೀಮಿತ ಮರಗಳಲ್ಲಿ ಮಾತ್ರ ಮೊಟ್ಟೆ ಇಟ್ಟು ,ಬಳಿಕ ಮೊಟ್ಟೆಯಿಂದ ಹೊರ ಬರುವ ಹುಳ ( ಕಂಬಳಿ ಹುಳ ) ಮರದ ಎಲೆಗಳನ್ನು ತಿಂದು ಕೋಶ ರಚಿಸುತ್ತದೆ. ಅದರಿಂದ ಹೊರಬರುವ ಗಂಡು ಪತಂಗ ,ಹೆಣ್ಣು ಪತಂಗದೊಂದಿಗೆ ಸೇರಿ ಒಂದೆರಡು ವಾರಗಳಲ್ಲಿ ಸಾವನ್ನಪ್ಪುತ್ತದೆ ಎಂದು ಅದರ ಜೀವನ ಚಕ್ರದ ಕುರಿತು ವಿವರಣೆ ನೀಡಿದರು.
ಈ ಜಾತಿಯ ಪತಂಗಗಳ ವಿಶೇಷತೆ ಎಂದರೆ, ಇವುಗಳಿಗೆ ಬಾಯಿ ಹಾಗೂ ಜೀರ್ಣಾಂಗ ವ್ಯವಸ್ಥೆ ಇರುವುದೇ ಇಲ್ಲಾ. ಕೋಶದಿಂದ ಹೊರಬಂದು ಪತಂಗದ ಪೂಣಾವಸ್ಥೆ ತಲುಪಿದ ನಂತರ ಇವು ಏನನ್ನು ತಿನ್ನುವುದಿಲ್ಲ.ಹುಳುವಾಗಿರುವಾಗ ತಿಂದ ಎಲೆಗಳ ಪೌಷ್ಟಿಕಾಂಶದ ಆಧಾರದ ಮೇಲೆಯೇ ಬದುಕಿನ ಕಾಲಚಕ್ರದ ಅವಧಿ ಸೀಮಿತವಾಗಿದ್ದು, ತನ್ನ ಶಕ್ತಿಯನ್ನು ಉಳಿಸಿಕೊಳ್ಳಲು ಪತಂಗವು ಹೆಚ್ಚಾಗಿ ಹಾರದೇ,ಗಿಡಗಳ ಎಲೆಗಳ ಮೇಲೆ ಹೆಚ್ಚಾಗಿ ವಿಶ್ರಮಿಸುತ್ತದೆ.ದಿನಗಳದಂತೆ ಶಕ್ತಿ ಕಳೆದುಕೊಳ್ಳುತ್ತಾ ಬಲಹೀನ ವಾಗುವ ಈ ಪತಂಗ ಹಕ್ಕಿ, ಇರುವೆ, ಓತಿಕ್ಯಾತ ಗಳಿಗೂ ಆಹಾರವಾಗುತ್ತದೆ ಎನ್ನುತ್ತಾರೆ. ಕೀಟ ತಜ್ಞರು. ಒಟ್ಟಿನಲ್ಲಿ ಹಲವರ ಆಶ್ಚರ್ಯ ಹಾಗೂ ಕುತೂಹಲಕ್ಕೆ ಕಾರಣವಾದ ಈ ಪತಂಗ ಅಂಕೋಲಾ ಸೇರಿದಂತೆ ಕರಾವಳಿ ಭಾಗಗಳಲ್ಲಿ ಆಗಾಗ ಬಲು ಅಪರೂಪಕ್ಕೆ ಕಂಡುಬರುತ್ತವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ