ಅಂಕೋಲಾ : ಬಸ್ ನಿಲ್ದಾಣದ ಆವರಣದಲ್ಲಿಯೇ ಚಾಲಕನ ನಿಯಂತ್ರಣ ತಪ್ಪಿದ ಬಸ್ ಇಳಿಜಾರಿನಲ್ಲಿದ್ದ ಮರ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 12 ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಬೆಳಿಗ್ಗೆ ಅಂಕೋಲಾದಲ್ಲಿ ಸಂಭವಿಸಿದೆ. . ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಾರವಾರ ಡಿಪೋದ ಬಸ್ ಇದಾಗಿದ್ದು , ಕಾರವಾರದಿಂದ ಹೊರಟು ಶಿರಸಿ, ಹಾವೇರಿ ಮಾರ್ಗವಾಗಿ ಬೆಂಗಳೂರಿಗೆ ತಲುಪಬೇಕಿತ್ತು.
ಇದನ್ನೂ ಓದಿ: SBI Recruitment 2023: ಉದ್ಯೋಗಾವಕಾಶ: 2 ಸಾವಿರ ಹುದ್ದೆಗಳು: 63 ಸಾವಿರದ ವರೆಗೆ ಮಾಸಿಕ ವೇತನ
ದಾರಿ ಮಧ್ಯೆ ಅಂಕೋಲಾ ಬಸ್ ನಿಲ್ದಾಣಕ್ಕೆ ಬಂದು ಶಿರಸಿಗೆ ತೆರಳಬೇಕಿದ್ದ ಎಚ್ ಬಿ ಸ್ವಾಮಿ ಎನ್ನಲಾದ ಚಾಲಕ , ಬಸ್ ನಿಲ್ದಾಣದಿಂದ 30 – 40 ಅಡಿ ದೂರದಲ್ಲೇ ತನ್ನ ನಿಯಂತ್ರಣ ಕಳೆದುಕೊಂಡು ಆವರಣದ ಇಳಿಜಾರಿನಲ್ಲಿದ್ದ ಮರವೊಂದಕ್ಕೆ ಜೋರಾಗಿ ಡಿಕ್ಕಿಪಡಿಸಿಕೊಂಡಿದ್ದಾನೆ. ಅಪಘಾತರಬಸಕ್ಕೆ ಬಸ್ಸಿನ ಎಡ ಮುಂಭಾಗ ಜಖಂ ಗೊಂಡು ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುಮಾರು 12 ಪ್ರಯಾಣಿಕರು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳ ಪಟ್ಟಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರವಾರದಿಂದ ಕೆಲ ಪ್ರಯಾಣಿಕರು ಶಿರಸಿ ಮಾರಿಕಾಂಬೆಯ ದರ್ಶನಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ದೇವಿಯ ಕೃಪೆಯಿಂದ ಇಷ್ಟರಲ್ಲಿಯೇ ನಾವು ಪಾರಾದೆವು. ಬಸ್ ನಿಲ್ದಾಣದಲ್ಲಿಯೇ ಈ ರೀತಿ ಅಪಘಾತವಾದರೆ,ಶಿರಸಿಯ ದುರ್ಗಮ ರಸ್ತೆಯಲ್ಲಿ ಇನ್ನೇನು ಕಾದಿತ್ತೊ ಎಂದು ಚಾಲಕನ ನಿಷ್ಕಾಳಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆರಂಭದಿಂದಲೂ ಅಂಕೋಲಾ ಬಸ್ ನಿಲ್ದಾಣದ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಅಪಸ್ವರ ಕೇಳಿ ಬರುತ್ತಲೇ ಇತ್ತಾದರೂ, ಜಾರು ಬಂಡಿಯಂತೆ ಅತೀ ಇಳಿಜಾರಾಗಿ ಬಸ್ ನಿಲ್ದಾಣದ ಆವರಣ ಇರುವುದೂ ಹಲವು ರೀತಿಯ ಅಪಾಯದ ಸಾಧ್ಯತೆಗೆ ಕಾರಣವಾಗಿದೆ ಎನ್ನುವ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.
ಒಂದೊಮ್ಮೆ ಬಸ್ ಮರಕ್ಕೆ ಬಡಿಯದಿದ್ದರೆ ಬಸ ನಿಲ್ದಾಣದ ಎದುರಿನ ರಿಕ್ಷಾ ನಿಲ್ದಾಣ ಇಲ್ಲವೇ ಈ ಹಿಂದೆ ಎರಡು ಮಕ್ಕಳನ್ನು ಬಲಿ ಪಡೆದಿದ್ದ ಕೆ. ಸಿ ರಸ್ತೆಗೆ ನುಗ್ಗಿದ್ದರೆ ಇನ್ನಷ್ಟು ಹೆಚ್ಚಿನ ಅಪಾಯವಾಗುತ್ತಿತ್ತು ಎನ್ನುತ್ತಾರೆ ಸ್ಥಳೀಯರು. ಚಾಲಕನ ನಿಷ್ಕಾಳಜಿ ಮತ್ತು ಅಜಾಗರೂಕ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆಯಾದರೂ,ವಾಹನದ ತಾಂತ್ರಿಕ ದೋಷ ಮತ್ತಿತರ ಕಾರಣಗಳಿರಬಹುದೇ ಎಂಬ ಕುರಿತು ತನಿಖೆಯಿಂದ ತಿಳಿದು ಬರ ಬೇಕಿದೆ.
ಪಿ. ಎಸೈ ಉದ್ದಪ್ಪ ಧರೆಪ್ಪ ನವರ ಮತ್ತು ಸಿಬ್ಬಂದಿಗಳು ಘಟನಾ ಸ್ಥಳ ಪರಿಶೀಲಿಸಿ, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಕಾನೂನು ಕ್ರಮ ಮುಂದುವರೆಸಿದ್ದಾರೆ. ಸ್ಥಳೀಯ ಸಾರಿಗೆ ಘಟಕದ ಸಿಬ್ಬಂದಿಗಳು ಹಾಜರಿದ್ದರು. ಅಪಘಾತದ ಘಟನೆ ಹಾಗೂ ಗಾಯಾಳುಗಳ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ