Important
Trending

ಮನೆಯಂಚಿನ ನೆಲಸಮ ಬಾವಿಯಲ್ಲಿ ಬಿದ್ದು ಮೃತಪಟ್ಟ ಮಹಿಳೆ : ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಎರಡು ಪ್ರತ್ಯೇಕ ಪ್ರಕರಣ: ಇಬ್ಬರ ಸಾವು

ಅಂಕೋಲಾ : ಸುಂಕಸಾಳ ವ್ಯಾಪ್ತಿಯ ಮನೆಯೊಂದರ ಹತ್ತಿರದ ನೆಲಸಮದ ಬಾವಿಯೊಂದರಲ್ಲಿ ಮಹಿಳೆಯೊಬ್ಬಳು ಆಕಸ್ಮಿಕವಾಗಿ ಆಯತಪ್ಪಿ ಜಾರಿ ಬಿದ್ದು ಮೃತಪಟ್ಟಿದ್ದಾಳೆ. ರೀಟಾ ಇಸಂತಿ ಫರ್ನಾಂಡಿಸ್ (51 ) ಸಾ ಮೂಲೆ ಮನೆ ಇವಳೇ ಮೃತ ದುರ್ದೈವಿ ಮಹಿಳೆಯಾಗಿದ್ದು, ಸೆ.12 ರ ಮಂಗಳವಾರ ಬೆಳಿಗ್ಗೆ ತನ್ನ ಮನೆಯಂಚಿನ ಬಾವಿ ಬಳಿ ತೋಟದ ಕೆಲಸ ಮಾಡುವಾಗ ಇಲ್ಲವೇ ಇನ್ನಿತರೇ ಕಾರಣಗಳಿಂದ ಬಾವಿಯ ಹತ್ತಿರ ಹೋದವಳು, ಹುಲ್ಲು ಗಿಡಗಳು ಬೆಳೆದಿದ್ದ ನೆಲಸಮ ಬಾವಿಯಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಜಾರಿ ನೀರಿನಲ್ಲಿ ಬಿದ್ದಿರುವ ಸಾಧ್ಯತೆ ಕೇಳಿ ಬಂದಿದೆ. ಘಟನಾ ಸ್ಥಳಕ್ಕೆ ಪಿ ಎಸೈ ಉದ್ದಪ್ಪ ಧರೆಪ್ಪನವರ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಪ್ರತ್ಯೇಕ ಮತ್ತೊಂದು ಪ್ರಕರಣದಲ್ಲಿ ಜನರ ಓಡಾಟ ಕಡಿಮೆ ಇರುವ ತುಂಬದ ಕುಳಿ ಪ್ರದೇಶ ವ್ಯಾಪ್ತಿಯ ಬಾವಿ ಯಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಕೊ-ಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಇದನ್ನು ಗಮನಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ದುರ್ಗಮ ಹಾದಿ ದಾಟಿ ಸ್ಥಳಕ್ಕೆ ಆಗಮಿಸಿದ ಪಿ ಎಸೈ ಉದ್ದಪ್ಪ ಧರೆಪ್ಪನವರ, ಸಿಬ್ಬಂದಿಗಳಾದ ಸತೀಶ ಅಂಬಿಗ,ಜಗದೀಶ ನಾಯ್ಕ, ಕಾವ್ಯ ನಾಯ್ಕ,ಸುಂಕಸಾಳ ಹೊರ ಠಾಣಾ ಸಿಬ್ಬಂದಿ ವಿಜಯ ಟಿ ,ಗಬ್ಬು ನಾರುವ ವಾತಾವರಣದ ನಡುವೆಯೇ ತಮ್ಮ ಕರ್ತವ್ಯ ನಿರ್ವಹಿಸಿದರು.

ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯ ಕುಮಾರ ನಾಯ್ಕ ಹಾಗೂ ಸ್ಥಳೀಯರಾದ ವಿಜಯಕುಮಾರ ವಾಸುದೇವ ನಾಯ್ಕ, ಪೂಜಗೇರಿಯ ಕೃಷ್ಣ ಗಾಂವಕರ, ಕೇಶವ ದೇವಳಕರ, ನಾಗರಾಜ ನಾಯ್ಕ,ರಾಘವೇಂದ್ರ ನಾಯ್ಕ,,ರಾಘವೇಂದ್ರ ಗಾಂವಕರ, ಸುಂಕಸಾಳ ಓಪಿ ಸಿಬ್ಬಂದಿ ವಿಜಯ ಟಿ, ಮತ್ತಿತರರು ಮೃತದೇಹವನ್ನು ನೀರಿನಿಂದ ಮೇಲೆತ್ತಿ ಶವಾಗಾರಕ್ಕೆ ಸಾಗಿಸಲು ಸಹಕರಿಸಿದರು. ಮೃತ ವ್ಯಕ್ತಿ ಲಕ್ಷ್ಮಣ ನಾರಾಯಣ ಪಡ್ತಿ ಎಂದು ಗುರುತಿಸಲಾಗಿದೆ.

ಮೃತನ ಮಗ ಪ್ರಶಾಂತ ಸ್ಥಳಕ್ಕೆ ಬಂದು ಕಳೆದ ವಾರದಿಂದೀಚೆಗೆ ತನ್ನ ತಂದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದರು ಎಂದು ತಿಳಿಸಿ, ಮೃತ ದೇಹ ಗುರುತಿಸಿದ್ದಾನೆ. ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದು,ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆ ಶವಗಾರಕ್ಕೆ ಸಾಗಿಸಲು ಕನಸಿಗದ್ದೆ ವಿಜಯ್ ಕುಮಾರ್ ನಾಯ್ಕ ಸಹಕರಿಸಿದರು. ಸುಂಕಸಾಳ ಗ್ರಾಪಂ ವ್ಯಾಪ್ತಿಯ ಈ ಎರಡೂ (ಪ್ರತ್ಯೇಕ – ಪ್ರತ್ಯೇಕ ) ಸಾವಿನ ಘಟನೆಯ ಕುರಿತಂತೆ ನಿಖರ ಕಾರಣ ಹಾಗೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button