ಕಸ ಎಸೆಯಬೇಡಿ ಎಂದಿದ್ದೆ ತಪ್ಪಾಯ್ತೆ? ಪೌರಕಾರ್ಮಿಕರ ಮೇಲೆ ಹಲ್ಲೆ
ಆ ವಾರ್ಡ್ ಕಸ ತೆಗೆಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದ ಪೌರಕಾರ್ಮಿಕರು
ಕಾರವಾರ: ಕಸ ಎಸೆಯದಂತೆ ತಿಳಿಸಿದ್ದಕ್ಕೆ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಕಾರವಾರ ಘಟಕದ ಪದಾಧಿಕಾರಿಗಳು ಪೌರಾಯುಕ್ತ ಚಂದ್ರಮೌಳಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಚೇತನಕುಮಾರ ವಿ ಕೊರಾರ್ ಎಂಬುವವರು ಸ್ವಚ್ಛತಾ ಕೆಲಸದ ಪಾಳಿ ಮುಗಿಸಿ ಮನೆಗೆ ತೆರಳುವಾಗ ಬಸ್ ನಿಲ್ದಾಣದ ಬಳಿ ನಿತಿನ್ ಹರಿಕಂತ್ರ ಎಂಬುವವರು ಕಸ ಬಿಸಾಡುತ್ತಿದ್ದರು. ಆಗ ಚೇತನಕುಮಾರ್ ಈಗಷ್ಟೆ ಸ್ವಚ್ಛತೆ ಮಾಡಿದ್ದು ಪುನಃ ಇಲ್ಲಿ ಕಸ ಬಿಸಾಡದಂತೆ ತಿಳಿಸಿದ್ದಾರೆ.
ಆಗ ನಿತೀನ್ ಹರಿಕಂತ್ರ ಹಾಗೂ ನಿತೇಶ ಹರಿಕಂತ್ರ ಇವರು ಅವಾಚ್ಯ ಶಬ್ದಗಳಿಂದ ನಿಂದಿಸಿ ನಾನು ಇಲ್ಲಿಯೇ ಕಸ ಬಿಸಾಡುತ್ತೇನೆ, ನನಗೆ ಹೇಳುವವನು ನೀನು ಯಾರು? ಕಸ ಆರಿಸುವವ ನೀನು. ಈ ಕಸ ತೆಗೆದುಕೊಂಡು ಹೋಗು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಅಲ್ಲದೆ ಬಳಿಕ ತಮ್ಮ ಮೇಲೆ ಹಾಗೂ ಬಿಡಿಸಲು ಬಂದ ಕಚೇರಿ ಸಿಬ್ಬಂದಿ ಮರುಷೋತ್ತಮ ಕೊರಗನ ಮೇಲೆ ಹಲ್ಲೆ ಮಾಡಿದ್ದಾರೆ.
ಇದರಿಂದ ನಗರಸಭೆ ಪೌರಕಾರ್ಮಿಕರಿಗೆ ಮನೆ-ಮನೆ ತಿರುಗಿ ಸ್ವಚ್ಚತೆ ಕೆಲಸ ಮಾಡಲು ಜೀವ ಭಯ ಕಾಡುತ್ತಿದೆ. ನಾವು ಆರೋಪಿಗಳನ್ನು ಬಂಧಿಸುವವರೆಗೂ ಆ ವಾರ್ಡ್ ಕಸ ತೆಗೆಯುವುದಿಲ್ಲ ಎಂದು ಪೌರಕಾರ್ಮಿಕರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಇನ್ನು ಈ ಕುರಿತು ಮಾಹಿತಿ ನೀಡಿದ ಪೌರಾಯುಕ್ತ ಚಂದ್ರಮೌಳಿ ಕಸ ಎಸೆಯದಂತೆ ಸೂಚಿಸಿದ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಬಗ್ಗೆ ದೂರು ನೀಡಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು. ಸಾರ್ವಜನಿಕರ ಕೆಲಸ ಮಾಡುವ ನೌಕರರಿಗೆ ಈ ರಿತಿ ಹಲ್ಲೆ ಮಾಡುವುದು ತಪ್ಪು. ಯಾರೇ ಇಂತಹ ಕೆಲಸ ಮಾಡಿದರು ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ