ಮಗಳ ಜೊತೆ ಸಂಬಂಧಿಗಳ ಮನೆಗೆ ಗಣೇಶ ಹಬ್ಬಕ್ಕೆ ತೆರಳುತ್ತಿದ್ದವ ದೇವರ ಪಾದ ಸೇರಿದ | ಜವರಾಯನಾಗಿ ಬಂದ ಕಾರು
ಕಾರು ಡಿಕ್ಕಿ ಹೊಡೆದು ಸಿಡಿದು ಬಿದ್ದ ಬೈಕ್ ಸವಾರ ಸಾವು
ಅಂಕೋಲಾ: ತಂದೆ ಮತ್ತು ಮಗಳು ಗಣೇಶ ಚೌತಿಗೆಂದು ತಮ್ಮ ಸಂಬಂಧಿಗಳ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಜೋರಾಗಿ ಬಂದ ಕಾರೊಂದು ಡಿಕ್ಕಿ ಪಡಿಸಿದ ಪಡಿಸಿದ ಪರಿಣಾಮ, ಬೈಕ್ ಸವಾರ ಸಿಡಿದು ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಧಾರುಣ ಘಟನೆ ರಾ.ಹೆ. 66 ರ ವಿಠಲಘಾಟ ಬಳಿಯ ಕಾಮತ ಉಪಚಾರ ಹೋಟೇಲ್ ಹತ್ತಿರದ (ಗೋಲ್ಡನ್ ಜ್ಯುಬಿಲಿ ಪೆಟ್ರೋಲ್ ಪಂಪ್ ಎದುರಿನ ) ಕ್ರಾಸ್ ಬಳಿ ಸಂಭವಿಸಿದೆ.
ಕಾರವಾರ ಗುರುಮಠ ನಿವಾಸಿ ಉದಯ ನಾರಾಯಣ ನಾಯ್ಕ (65) ಮೃತ ದುರ್ದೈವಿಯಾಗಿದ್ದು, ತನ್ನ ಮಗಳೊಂದಿಗೆ ಹೋಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಮಗಳನ್ನು ಕುಳ್ಳಿರಿಸಿಕೊಂಡು, ಅಂಕೋಲಾ ಮಾರ್ಗವಾಗಿ ಗೋಕರ್ಣ ಸಮೀಪದ ಗಂಗಾವಳಿಯ ಸಂಬಂಧಿಗಳ ಮನೆಗೆ, ಗಣೇಶ ಚೌತಿ ಹಬ್ಬಕ್ಕೆ ತೆರಳುತ್ತಿರುವ ವೇಳೆ, ದಾರಿ ಮಧ್ಯೆ ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋರಾಗಿ ಬಂದ (KA22 C 1396 ನೊಂದಣಿ ಸಂಖ್ಯೆ) ಕಾರು ಬೋರಾಗಿ ಡಿಕ್ಕಿ ಪಡಿಸಿದೆ. ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ನಲ್ಲಿದ್ದ ತಂದೆ ಮತ್ತು ಮಗಳು ಪಕ್ಕಕ್ಕೆ ಸಿಡಿದು ಬಿದ್ದು ಗಂಭೀರ ಗಾಯಗೊಂಡ ತಂದೆ ದುರದೃಷ್ಟವಶಾತ್ ಮೃತ ಪಟ್ಟರೆ, ಮಗಳು ಚಿಕ್ಕ ಪುಟ್ಟ ಗಾಯ ನೋವಿನೊಂದಿಗೆ ಚಿಕಿತ್ಸೆಗೊಳಪಟ್ಟಿದ್ದು ಜೀವಪಾಯದಿಂದ ಪಾರಾಗಿದ್ದಾಳೆ.
ಎನ್. ಎಚ್ ಎ.ಐ ಅಂಬುಲೆನ್ಸ್ ಚಾಲಕ ನಾಗರಾಜ ಐಗಳ ಮತ್ತು ಸ್ಥಳೀಯರ ಸಹಕಾರದಲ್ಲಿ ಗಾಯಾಳುಗಳನ್ನು ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಉದಯ ನಾಯ್ಕನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವದಾಗಿ ಧೃಡ ಪಡಿಸಿದ್ದಾರೆ. ತಾವು ಬೇಡ ಬೇಡ ಎಂದರೂ ತಂದೆಯವರು ಒತ್ತಾಯ ಮಾಡಿದ್ದರಿಂದ ಅವರಿಗೆ ಬೇಸರವಾಗದಿರಲಿ ಎಂದು ನಾನೂ ಬರಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುವಂತಾಯಿತು.
ಈಗ ನೋಡಿದರೆ ನಮ್ಮ ಕುಟುಂಬದ (ಉದಯ) ದೀಪವೇ ಆರಿ ಹೋದ ಅನುಭವವಾಗಿದೆ ಎಂದು ಮೃತನ ಜೊತೆಗಿದ್ದ ಮಗಳು ಆಸ್ಪತ್ರೆಯಲ್ಲಿ ರೋಧಿಸುತ್ತಿರುವುದನ್ನು ನೋಡಿದರೆ ಎಂಥವರ ಕರುಳು ಚುರ್ ಎನ್ನದೇ ಇರದು. ಮೃತನ ಸಂಬಂಧಿಗಳು ಅಂಕೋಲಾ ಅಂಬಾರ ಕೋಡ್ಲ ನಲ್ಲಿದ್ದು ಸುದ್ದಿ ತಿಳಿದು ಆಸ್ಪತ್ರೆಗೆ ಆಗಮಿಸಿ ಮಗಳಿಗೆ ಚಿಕಿತ್ಸೆ ಕೊಡಿಸಿ, ಮೃತನ ಮಗಳಿಗೆ ಸಾಂತ್ವನ ಹೇಳಿದರು.
ರಾಷ್ಟೀಕೃತ ಬ್ಯಾಂಕ್ ಒಂದರ ಪಿಗ್ಮಿ ಕಲೆಕ್ಟರ್ ಎನ್ನಲಾದ ಉದಯ ನಾಯ್ಕ ತನ್ನ ಸರಳ ನಡೆ ನುಡಿಯಿಂದ ಹಲವರ ಪ್ರೀತಿ ವಿಶ್ವಾಸ ಗಳಿಸಿದ್ದು, ಮತ್ತೊಂದು ಮಗಳ ಮದುವೆಯ ಕನಸು ಕಟ್ಟಿಕೊಂಡು ಮನೆಯ ಯಜಮಾನನಾಗಿ ಸಂಸಾರದ ಜವಾಬ್ದಾರಿ ನಿಭಾಯಿಸುತ್ತಿದ್ದ ಎನ್ನಲಾಗಿದ್ದು ,ಹಬ್ಬದ ಸಂಭ್ರಮದಲ್ಲಿ ಕುಟುಂಬದವರ ಜೊತೆ ಬೆರೆಯಲು ತೆರಳುತ್ತಿದ್ದವ, ಮತ್ತೆ ಬಾರದ ಲೋಕಕ್ಕೆ ತೆರಳಿ ದೈವ ಪಾದ ಸೇರುವಂತಾಗಿರುವುದು ವಿಧಿ ಲಿಖಿತವೇ ಸರಿ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್ಐ ಗಳಾದ ಉದ್ದಪ್ಪ ಧರೆಪ್ಪನವರ, ಸುನೀಲ ಹುಲ್ಗೊಳ್ಳಿ , ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ, ಕಾನೂನು ಕ್ರಮ ಮುಂದುವರೆಸಿದ್ದಾರೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ