Follow Us On

Google News
Focus News
Trending

ಅಂಕೋಲಾದಲ್ಲಿ ಶೌರ್ಯ ಜಾಗರಣ ರಥಯಾತ್ರೆ : ಪಟ್ಟಣದ ವಿವಿಧೆಡೆ ಸಂಚರಿಸಿ ಜಾಗೃತಿ

ಅಂಕೋಲಾ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಶ್ರಯದಲ್ಲಿ ಆಯೋಜಿಸಲಾಗಿರುವ ಶೌರ್ಯ ಜಾಗರಣ ರಥಯಾತ್ರೆ ಅಂಕೋಲಾ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸಂಚರಿಸಿತು. ಸಂಘಟನೆಯ ಸ್ಥಳೀಯ ಪ್ರಮುಖರು ಸ್ವಾಗತಿಸಿದರು. ಅಂಕೋಲಾ ತಾಲೂಕಿನ ಕೊಡಸಣಿಯ ಶಾಂತಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ತಾಲೂಕಿನ ಹಿಂದೂ ಸಂಘಟನೆಗಳ ಪ್ರಮುಖರು ರಥಕ್ಕೆ ಪೂಜೆ ಸಲ್ಲಿಸಿ ತಾಲೂಕಿಗೆ ಸ್ವಾಗತ ಕೋರಿದರು.

ನಂತರ ಹನುಮಟ್ಟದ ಶ್ರೀಲಕ್ಷ್ಮೀ ನಾರಾಯಣ ಮಹಾಮಾಯಾ ದೇವಾಲಯಕ್ಕೆ ಆಗಮಿಸಿದ ರಥ ಅಲ್ಲಿ ಪೂಜೆ ಸ್ವೀಕರಿಸಿ, ಹನುಮಾನ ಕಟ್ಟೆ, ಆರ್ಯಾದುರ್ಗಾ ದೇವಸ್ಥಾನ, ಕುಂಡೋದರಿ ದೇವಸ್ಥಾನ ಮಾರ್ಗವಾಗಿ ಪಟ್ಟಣದ ಬಸ್ ನಿಲ್ದಾಣದ ಎದುರಿನಿಂದ ಕಿತ್ತೂರು ಚೆನ್ನಮ್ಮ ರಸ್ತೆ ಮೂಲಕ ಮಹಾಗಣಪತಿ ದೇವಾಲಯಕ್ಕೆ ಆಗಮಿಸಿತು. ದಾರಿ ಮಧ್ಯೆ ಹಲವೆಡೆ ಭಜರಂಗಿಗೆ ಜಯ ಘೋಷ ಕೂಗಿದ ಭಕ್ತರು,ವಿವಿಧ ಸಂಘಟನೆಯ ಪ್ರಮುಖರು ನಾವೆಲ್ಲ ಹಿಂದೂ ನಾವೆಲ್ಲ ಒಂದು, ಜೈ ಶ್ರೀ ರಾಮ ಎನ್ನುತ್ತಾ ಶಿಸ್ತು ಬಧ್ಧವಾಗಿ ಮೆರವಣಿಗೆಯಲ್ಲಿ ಸಾಗಿದರು.

ಆಯಾ ದೇವಸ್ಥಾನ ಹಾಗೂ ಮುಖ್ಯ ರಸ್ತೆಯ ಅಕ್ಕ ಪಕ್ಕಗಳಲ್ಲಿ ನಿಂತಿದ್ದ ನೂರಾರು ಜನರು ಶ್ರೀ ದೇವರಿಗೆ ಮತ್ತು ರಥಕ್ಕೆ ಪುಷ್ಟದಳ ಸಮರ್ಪಿಸಿದರು.ಕೆಲವರು ಆರತಿ ಹಾಗೂ ಹಣ್ಣು ಕಾಯಿ, ಬಾಳೆಗೊನೆ ಸೇವೆ ಸಮರ್ಪಿಸಿ ವೀರಾಂಜನೇಯನನ್ನು ಪ್ರಾರ್ಥಿಸಿದರು. ಗಣಪತಿ ದೇವಸ್ಥಾನದಿಂದ ಶಕ್ತಿ ದೇವತೆ ಭೂಮಿ ತಾಯಿ ಶ್ರೀ ಶಾಂತಾದುರ್ಗಾ ದೇವಾಲಯಕ್ಕೆ ಆಗಮಿಸಿದ ರಥಕ್ಕೆ ದೇವಸ್ಥಾನದ ಅರ್ಚಕರು ಆರತಿ ಪೂಜೆ ಸಲ್ಲಿಸಿದರು. ನಂತರ ರಥ ಯಾತ್ರೆ ಬಾಳೆಗುಳಿ ಮಾರ್ಗವಾಗಿ ಹಟ್ಟಿಕೇರಿ ಅವರ್ಸಾದತ್ತ ಪ್ರಯಾಣ ಬೆಳೆಸಿತು.

ಸ್ಥಳೀಯ ಯುವಕರು, ಮಹಿಳೆಯರು,ಬಿಜೆಪಿ ಪಕ್ಷದ ಕೆಲ ಕಿರಿಕಿರಿಯ ಮುಖಂಡರು,ಹಿoದೂ ಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಲಕ್ಷ್ಮೀನಾರಾಯಣ ಮಹಾಮಾಯಾ ದೇವಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಸಂಜಯ ಶೇಟ್ ಮಾತನಾಡಿ ಹಿಂದೂ ಧರ್ಮದ ರಕ್ಷಣೆಗೆ ವಿಶ್ವ ಹಿಂದೂ ಪರಿಷತ್ ಸದಾ ಸಿದ್ಧವಾಗಿ ನಿಂತಿದ್ದು ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60 ವರ್ಷಗಳು ತುಂಬಿರುವ ಪ್ರಯುಕ್ತ ಶೌರ್ಯ ಜಾಗರಣ ರಥಯಾತ್ರೆ ನಡೆಸಲಾಗುತ್ತಿದೆ ಎಂದರು.

ಇಂದು ರಾಜ್ಯದಲ್ಲಿ ದೇಶ ದ್ರೋಹಿಗಳು ಹಿಂದೂ ಸಮಾಜದ ಮೇಲೆ ಅಟ್ಟಹಾಸ ನಡೆಸುತ್ತಿರುವುದು ಕಂಡು ಬಂದಿದ್ದು ಸರ್ಕಾರ ತಮ್ಮ ವೋಟ್ ಬ್ಯಾಂಕ್ ಉಳಿಸಲು ಅವರಿಗೆ ಜೊತೆಯಾಗಿ ನಿಂತಿರುವುದು ನಾಚಿಗೆಗೇಡು ಎಂದ ಅವರು ದೇಶ ಮತ್ತು ಹಿಂದೂ ಧರ್ಮದ ಮೇಲೆ ನಡೆಯುವ ದೌರ್ಜನ್ಯ ಸಹಿಸುವುದಿಲ್ಲ ಎಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button