Important
Trending

ಪಿಕ್ನಿಕ್ ಸ್ಪಾಟ್ ನಲ್ಲಿ ಮತ್ತೊಂದು ಜಲ ಅವಘಡ: ನೀರಿನ ಸುಳಿಯಲ್ಲಿ ಸಿಲುಕಿ ಕಣ್ಮರೆಯಾದ ಯುವಕ

ಅಂಕೋಲಾ: ಪಿಕ್ನಿಕ್ ಇಲ್ಲವೇ ಇತರೆ ಕಾರಣಗಳಿಂದ ಗೆಳೆಯರೊಂದಿಗೆ ತೆರಳಿದ್ದ ಯುವಕನೋರ್ವ ಗಂಗಾವಳಿ ನದಿ ನೀರಿನ ಸೆಳೆತದಲ್ಲಿ ಸಿಲುಕಿ ಕಣ್ಮರೆಯಾದ ಘಟನೆ ತಾಲೂಕಿನ ಹಿಲ್ಲೂರ ಹೊಸಕಂಬಿ ಅರಣ್ಯ ಇಲಾಖೆ ಕಛೇರಿ ಸಮೀಪ  ಸಂಭವಿಸಿದೆ. ಸುಹಾಸ ಕೃಷ್ಣ (ಪಾಂಡುರಂಗ)  ನಾಯ್ಕ (35 )  ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾದ ದುರ್ದೈವಿ ಯುವಕನಾಗಿದ್ದಾನೆ.

ಅಂಕೋಲಾದಿಂದ ಗೆಳೆಯರ ಬಳಗದವರು ಹಿಲ್ಲೂರ ಹೊಸಕಂಬಿ  ವ್ಯಾಪ್ತಿಯ ನದಿ ತೀರದ ಹಾಗೂ ಅರಣ್ಯ ಪ್ರದೇಶದ ನಡುವಿನ ಮರಳು ಪ್ರದೇಶದಲ್ಲಿ ಪಿಕ್ನಿಕ್ ಗೆ ತೆರಳಿದ್ದರು ಎನ್ನಲಾಗಿದ್ದು, ಇದೇ ವೇಳೆ  ನದಿ ತೀರದ ಮರದ ಬಳಿ ತನ್ನ ಪ್ಯಾಂಟ್ ಶರ್ಟ ಬಿಚ್ಚಿಟ್ಟು, ನೀರಿನಲ್ಲಿ ಮುಳುಗಿ ಕೊಂಡಗ ತೆಗೆಯಲು ಹೋದ ಎನ್ನಲಾದ ಈತ , ಆಕಸ್ಮಿಕ ನೀರಿನ ಸುಳಿಯಲ್ಲಿ  ಸಿಲುಕಿ ಕಣ್ಮರೆಯಾದ ಎನ್ನಲಾಗಿದೆ. ಈತನ ಜೊತೆಗೆ ನೀರಿಗೆ ಇಳಿದಿದ್ದ ಇನ್ನೊಬ್ಬ ಗೆಳೆಯ ಅದೃಷ್ಟ ವಶಾತ್ ನೀರಿನಿಂದ ಮೇಲೆ ಬಂದು ದಡ ಸೇರಿದ್ದಾನೆ. ಅರೆಕ್ಷಣದಲ್ಲಿ ನಡೆದ ಈ ದುರ್ಘಟನೆ ನದಿ ತೀರದಲ್ಲಿ ಕುಳಿತಿದ್ದ ಗೆಳೆಯರಿಗೆ ಶಾಕ್ ನೀಡಿದೆ.

ನೀರಿನಲ್ಲಿ ಕಣ್ಮರೆ ಆದ ಸುಹಾಸನನ್ನು ಹುಡುಕಲು ಆತನ ಗೆಳೆಯರು ಪ್ರಯತ್ನಿಸಿದ್ದಾರೆ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು  ಸ್ಥಳಕ್ಕೆ ಆಗಮಿಸಿದರೂ ಸಂಜೆಯ ಕತ್ತಲು, ನೀರಿನ ಜೋರಾದ ಹರಿವು ಮತ್ತಿತರ ಕಾರಣಗಳಿಂದ ಕಾರ್ಯಾಚರಣೆ ನಡೆಸಲು ಹಿನ್ನಡೆಯಾಗಿದೆ. .ಪಿ ಎಸ್ ಐ ಉದ್ದಪ್ಪ ಧರೆಪ್ಪನವರ ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಹೆದ್ದಾರಿ ಗಸ್ತು ವಾಹನ ಸಿಬ್ಬಂದಿಗಳು ಹಾಜರಿದ್ದರು.

ಬೊಬ್ರುವಾಡ, ಅಂಕೋಲಾ ಸುತ್ತಮುತ್ತಲ ಭಾಗಗಳ ಗೆಳೆಯರ ಬಳಗದವರು, ಹಿಲ್ಲೂರ, ಹೊಸ ಕಂಬಿ ಭಾಗದ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಘಟನೆ ಕುರಿತಂತೆ ಬೇಸರ ವ್ಯಕ್ತಪಡಿಸಿದರು. ನೀರಿನಲ್ಲಿ ಮುಳುಗಿ ಕಣ್ಮರೆಯಾದ ಯುವಕ ಬದುಕುಳಿದಿರಬಹುದೇ ಎಂಬ ಪ್ರಶ್ನೆಗಳಿಗೆ, ಸೋಮವಾರ  ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಘಟನೆ ಕುರಿತಂತೆ ಪೋಲೀಸರಿಂದ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ತಹಶೀಲ್ದಾರ ಅಶೋಕ ಭಟ್ಟ, ಸಿಪಿಐ ಸಂತೋಷ ಶೆಟ್ಟಿ ಸ್ಥಳ ಪರಿಶೀಲಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button