Important
Trending

ತೇಜೋವಧೆ ಆರೋಪ: ಯುವಕನ ವಿರುದ್ಧ ನೈತಿಕ ಪೊಲೀಸ್ ಗಿರಿ: ಆರೋಪಿಗಳ ಬಂಧನಕ್ಕೆ ಆಗ್ರಹ

ಕುಮಟಾ: ತನ್ನ ತೇಜೋವಧೆ ಮಾಡಿದ್ದಾನೆ ಎಂದು ಆರೋಪಿಸಿ, ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ತೋರಿಸಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲ್ಲೆಗೊಳಗಾದವನ ಪರ ಧ್ವನಿಗೂಡಿಸಿದ ಗ್ರಾಮಸ್ಥರು ಇಂದು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ನಡೆದಿದೆ.

ಕುಮಟಾ ತಾಲೂಕಿನ ಅಳ್ವೇಕೊಡಿ ನಿವಾಸಿ ಹಾಗೂ ಕಾಂಗ್ರೆಸ್ ಮುಖಂಡ ಗಜು ನಾಯ್ಕ ಹಾಗೂ ಸವಿತಾ ಪಟಗಾರ ಎಂಬುವವರ ಬಗ್ಗೆ ಕುಮಟಾದ ಅಳ್ವೇಕೊಡಿ ನಿವಾಸಿ ಕೃಷ್ಣ ನಾಯ್ಕ ಎಂಬುವವನು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯ ತಿಳಿದ ಗಜು ನಾಯ್ಕ, ಸವಿತಾ ಪಟಗಾರ ಹಾಗೂ ಪ್ರಮೋದ ದೇಶಭಂಡಾರಿ ಎಂಬುವವರು ಕುಮಟಾ ಪಟ್ಟಣದ ಪೇಂಟ್ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಕೃಷ್ಣ ನಾಯ್ಕ ಈತನಿಗೆ ಕರೆ ಮಾಡಿ ಕರೆಸಿಕೊಂಡು, ಕುಮಟಾದ ಹುಂಡೈ ಶೋರೂಮ್ ಬಳಿ ಚಪ್ಪಲಿಯಿಂದ ಮನಸ್ಸಿಗೆ ಬಂದoತೆ ಹೊಡೆದಿದ್ದಾರೆ .

ಅಲ್ಲದೆ, ಅವಾಚ್ಯ ಶಬ್ಧದಿಂದ ಬೈದು ಹಲ್ಲೆ ಮಾಡಿದ್ದಾರೆ. ಈ ದೃಷ್ಯವನ್ನು ತಾವೇ ಸ್ವತಃ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಕಾರ್ಯ ಮಾಡಿದ್ದರು. ಇದಿರಿಂದಾಗಿ ಮನನೊಂದ ಕೃಷ್ಣ ನಾಯ್ಕ ಆತ್ಮ ಹತ್ಯೆಮಾಡಿಕೊಳ್ಳುವ ಹಂತಕ್ಕೂ ಸಹ ಹೊಗಿದ್ದ÷ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಳ್ವೇಕೊಡಿ ಗ್ರಾಮಸ್ಥರು, ಹಲ್ಲೆಗೊಳಗಾದ ಕೃಷ್ಣ ನಾಯ್ಕ ಈತನ ಕುಟುಂಬಸ್ಥರು ಕುಮಟಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿದರು.

ಪೊಲೀಸ್ ಠಾಣೆ ಎದುರು ಜಮಾಯಿಸಿದ ನೂರಾರು ಸಾರ್ವಜನಿಕರು, ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಕರಣದ ಕುರಿತು ಮಾಹಿತಿ ನೀಡಿದರು. `ಅಮಾಯಕ ಯುವಕ ಕೃಷ್ಣ ನಾಯ್ಕ ಎಂಬಾತನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಈ ರೀತಿಯ ಅಮಾನವೀಯ ಕೃತ್ಯ ಎಸಗಲು ಪ್ರೋತ್ಸಾಹ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದರು. ಈ ವೇಳೆ ಹಲ್ಲೆಗೊಳಗಾದ ಕೃಷ್ಣ ನಾಯ್ಕ ಮಾತನಾಡಿ, ಹಲ್ಲೆ ನಡೆದ ದಿನದ ಘಟನೆಯ ಕುರಿತಾಗಿ ಸಂಕ್ಷಿಪ್ತ ವಿವರಣೆ ನೀಡಿದರು.

ಈ ವೇಳೆ ಸ್ಥಳೀಯ ಮಹಿಳೆಯರು ಮಾತನಾಡಿ, ಕೃಷ್ಣ ನಾಯ್ಕ ಅಮಾಯಕನಾಗಿದ್ದು, ಆತನ ವ್ಯಕ್ತಿತ್ವ ಎನೆಂದು ಅರಿತಿರುವ ಕಾರಣಕ್ಕಾಗಿಯೇ ಇಂದು ನಾವೆಲ್ಲರೂ ಒಗ್ಗೂಡಿ ಆತನ ಪರವಾಗಿ ನಿಂತಿದ್ದೇವೆ ಎಂದರು. ಈ ಕುರಿತಾಗಿ ಹಲ್ಲೆ ಎಸಗಿದವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಅಳ್ವೇಕೊಡಿಯ ನೂರಾರು ಗ್ರಾಮಸ್ಥರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button