Focus News
Trending

ನಿತ್ಯವೂ ಮನೆಯಲ್ಲಿ ಗಾಂಧಿ ಪೂಜೆ ಮಾಡುತ್ತಿದ್ದ ನಿವೃತ್ತ ಪೋಸ್ಟ್ ಮೆನ್ ಲಿಂಗು ಲಕ್ಷ್ಮೇಶ್ವರ ವಿಧಿವಶ

ಅಂಕೋಲಾ : ಪುರಸಭೆ ವ್ಯಾಪ್ತಿಯ ಲಕ್ಷ್ಮೇಶ್ವರ ವಾರ್ಡ್ ನಿವಾಸಿಯಾಗಿದ್ದ ಲಿಂಗು ಬಿ ಲಕ್ಷ್ಮೇಶ್ವರ (83), ಅ.25ರ ಬುಧವಾರ ರಾತ್ರಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದರು. ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು, ಪೋಸ್ಟಮೆನ್ ಲಿಂಗು, ಲಕ್ಷ್ಮೇಶ್ವರ ಪೋಸ್ಟ್ ಮೆನ್ ಎಂದೇ ಚಿರಪರಿಚಿತರಾಗಿದ್ದರು.

ತಮ್ಮ ನಿವೃತ್ತಿ ನಂತರವೂ ಸದಾ ಚಟುವಟಿಕೆಯಿಂದ ಇದ್ದ ಇವರು,ತಮ್ಮ ಇಳಿ ವಯಸ್ಸಿನಲ್ಲಿಯೂ ಸೈಕಲ್ ತುಳಿಯುತ್ತಾ,ಸರಳ ಜೀವನದ ಮೂಲಕ ಇತರರಿಗೆ ಮಾದರಿಯಾಗಿದ್ದರು. ನಿವೃತ್ತಿ ನಂತರ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡು ಈ ಹಿಂದೆ ಲಕ್ಷ್ಮೇಶ್ವರ ಗ್ರಾಮವು ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದ್ದಾಗ, ಸ್ಥಳೀಯ ವಾರ್ಡ್ ಸದಸ್ಯರಾಗಿ ಆಯ್ಕೆಯಾಗಿ, ಜನ ಸೇವೆ ಸಲ್ಲಿಸಿದ್ದರು.

ಪ್ರತಿ ವರ್ಷ ತಮ್ಮ ಮನೆಯಲ್ಲಿ ಚೌತಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿಕೊಂಡು ಬಂದಿದ್ದ ಇವರು,ಊರಿನ ಹಾಗೂ ಇತರಡೆಯ ಹತ್ತಾರು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತನು ಮನ ಧನ ಸಹಾಯ ಸಹಕಾರ ನೀಡುತ್ತ ಬಂದಿದ್ದರು.ತಮ್ಮ ಮನೆಯಲ್ಲಿ ಹಿರಿಯರ ಕಾಲದಿಂದ ನಡೆದು ಬಂದಿದ್ದ ಗಾಂಧೀಜಿಯವರ ಉಬ್ಬು ಚಿತ್ರಕ್ಕೆ ( ಕಲಾಕೃತಿಗೆ ) ಪ್ರತಿನಿತ್ಯ ಪೂಜೆ ಮಾಡುವ ಕಾಯಕದೊಂದಿಗೆ,ಸ್ಥಳೀಯ, ರಾಜ್ಯ ಮಟ್ಟದ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು.

ಇತ್ತೀಚೆಗೆ ಆಗಾಗ ಭಾಧಿಸುತ್ತಿದ್ದ ಅನಾರೋಗ್ಯ ಸಮಸ್ಯೆಯಿಂದ, ಅವರನ್ನು ಕುಟುಂಬಸ್ಥರು ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳ ಪಡಿಸುತ್ತಾ ಬಂದಿದ್ದು, ಕಳೆದೆರಡು ದಿನಗಳ ಹಿಂದೆ ಮತ್ತೆ ಕಾಣಿಸಿಕೊಂಡ ಆರೋಗ್ಯ ಏರುಪೇರಿನಿಂದಾಗಿ,ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ರಾತ್ರಿ ಕೊನೆ ಉಸಿರೆಳೆದರು. ಸೋಮವಾರ ಬೆಳಿಗ್ಗೆ ಮೃತರ ಅಂತ್ಯಕ್ರಿಯೆಯನ್ನು ಕೋಟೆವಾಡದ ಹಿಂದು ಸ್ಮಶಾನ ಭೂಮಿಯಲ್ಲಿ ನೆರವೇರಿಸಲಾಯಿತು.

ಮೃತರ ಪುತ್ರ ನ್ಯಾಯಾಲಯದ ಸಿಬ್ಬಂದಿ, ಮಂಜು ಲಕ್ಷೇಶ್ವರ, ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.ಊರಿನ ಹಾಗೂ ವಿವಿಧ ಸಮಾಜದ ಪ್ರಮುಖರು,ಕುಟುಂಬದ ಆಪ್ತರು ಹಿತೈಷಿಗಳು,ಸಂಬಂಧಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ,ಮೃತರ ಅಂತಿಮ ದರ್ಶನ ಪಡೆದುಕೊಂಡರು. ಮೃತರು,ಪತ್ನಿ, ಈರ್ವರು ಪುತ್ರಿಯರು, ಓರ್ವ ಮಗ ,ಅಳಿಯಂದಿರು,ಸೊಸೆ, ಮೊಮ್ಮಕ್ಕಳು ಸೇರಿ ಅಪಾರ ಬಂಧು ಬಳಗ ತೊರೆದಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button