ಭಟ್ಕಳ: ಕೆಲದಿನಗಳಿಂದ ಸಚಿವ ಮಂಕಾಳ ವೈದ್ಯ ಅವರ ಬಲಗೈ ಹೆಬ್ಬೆರಳಿಗೆ ಉಗುರು ಸುತ್ತು ಆಗಿದ್ದು, ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಿರಂತರ ಕೆಲಸದ ಒತ್ತಡದಲ್ಲಿ ಸಚಿವ ಮಂಕಾಳ ವೈದ್ಯ ಅವರು ತಮ್ಮ ಹೆಬ್ಬೆರಳಿಗಾದ ಉರುಗು ಸುತ್ತಿನ ಚಿಕಿತ್ಸೆಯನ್ನು ಮಾಡಿಸಲು ಸಾಧ್ಯವಾಗಿಲ್ಲವಾಗಿತ್ತು.
ಆದರೆ, ತಾಲೂಕಾ ಆಡಳಿತ ಸೌಧದಲ್ಲಿ ಜಿಲ್ಲಾ ಮಟ್ಟದ ಒಳಚರಂಡಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ನಡೆಸಿದ್ದು ಆ ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಅವರ ಬಳಿ ಉಗುರು ಸುತ್ತು ಆಗಿರುವದನ್ನು ತೋರಿಸಿದ್ದಾರೆ. ಈ ವೇಳೆ ಡಾ. ಸವಿತಾ ಕಾಮತ ಅವರು ತಕ್ಷಣಕ್ಕೆ ಇದಕ್ಕೊಂದು ಚಿಕ್ಕ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆಯನ್ನು ಸೂಚಿಸಿದ್ದರು.
ಈ ಹಿನ್ನೆಲೆ ಸಚಿವರು ರಾತ್ರಿ ವೇಳೆ ಸಾಮಾನ್ಯರಂತೆ ಸರಕಾರಿ ಆಸ್ಪತ್ರೆಗೆ ಬಂದು ವೈದ್ಯರ ಸೂಚನೆಯಂತೆ ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಂಡಿದ್ದಾರೆ. 15 ನಿಮಿಷದ ಚಿಕ್ಕ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ಸರ್ಜನ ಡಾ. ಅರುಣ ಕುಮಾರ ಹಾಗೂ ತಾಲೂಕಾ ಆರೋಗ್ಯಾಧಿಕಾರಿ, ಅರವಳಿಕೆ ತಜ್ಞೆ ಡಾ. ಸವಿತಾ ಕಾಮತ ಹಾಗೂ ಡಾ. ಲಕ್ಷ್ಮೀಶ ನಾಯ್ಕ ಅವರು ನಡೆಸಿದರು. ಉಗುರು ಸುತ್ತ ಪ್ರಮಾಣ ಹೆಚ್ಚಿದ್ದ ಹಿನ್ನೆಲೆ ಕಾಳಜಿ ಅನಿವಾರ್ಯ ಎಂದು ಸಚಿವರಿಗೆ ಡಾ. ಅರುಣ ಕುಮಾರ ಅವರು ಸೂಚಿಸಿದರು. ವಿಶೇಷವಾಗಿ ಕಾಳಜಿ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡಕ್ಕೆ ಸಚಿವರು ಧನ್ಯವಾದ ಸಲ್ಲಿಸಿದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ