ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸಿ ಚರ್ಚೆ: ಶಾಸಕರನ್ನು ಸನ್ಮಾನಿಸಿ ಗೌರವಿಸಿದ ಗ್ರಾಮಸ್ಥರು
ಅಂಕೋಲಾ: ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಹೊನ್ನಳ್ಳಿಯಲ್ಲಿ, ಕ್ಷೇತ್ರದ ನೂತನ ಶಾಸಕ ಸತೀಶ್ ಸೈಲ್ ಅವರ ಸನ್ಮಾನ ಸಮಾರಂಭ ಮತ್ತು ಏತ ನೀರಾವರಿ ಸೇರಿದಂತೆ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸಿ ಚರ್ಚಿಸಲಾಯಿತು. ಅಂಕೋಲಾ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಹೊನ್ನಳ್ಳಿ ಗ್ರಾಮದಲ್ಲಿ ಕಾರವಾರ ಅಂಕೋಲಾ ಕ್ಷೇತ್ರದ ನೂತನ ಶಾಸಕ ಸತೀಶ್ ಸೈಲ್ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹೊನ್ನಳ್ಳಿ ಶಾಲಾ ಹೊರ ಆವರಣದಲ್ಲಿರುವ ತೆರೆದ ವೇದಿಕೆಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮವನ್ನು ಶಾಸಕ ಸತೀಶ್ ಸೈಲ್ ಮತ್ತು ಸ್ಥಳೀಯ ಗಣ್ಯರು ದೀಪ ಬೆಳಗಿ ಉದ್ಘಾಟಿಸಿದರು.
ಹೊನ್ನಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರ ಪರವಾಗಿ, ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಗ ಸೂರು ಗ್ರಾಮ ಪಂಚಾಯತ್ ನ ಕೆಲ ಹಾಲಿ ಹಾಗೂ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು , ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷರು,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಹಾಗೂ ಊರಿನ ಪ್ರಮುಖರು, ಗೌಡರು, ಅಚವೆ ಪಂಚಾಯತ ಪ್ರಮುಖರು ಸೇರಿದಂತೆ ಹಲವರು,ಉದ್ದೇಶಿತ ಹೊನ್ನಳ್ಳಿ ಕಿಂಡಿ ಅಣೆಕಟ್ಟು ಯೋಜನೆಯಿಂದ ಸ್ಥಳೀಯ ಪ್ರದೇಶಗಳು ಮುಳುಗಡೆಯಾಗುವ ಆತಂಕ ವ್ಯಕ್ತಪಡಿಸಿ,ಯೋಜನೆಯ ರದ್ದತಿಗೆ ಆಗ್ರಹಿಸಿ, ಶಾಸಕರಲ್ಲಿ ವಿನಂತಿಸಿದರು.
ಮತ್ತು ಈ ಹಿಂದಿನ ಹೊನ್ನಳ್ಳಿ ಏತ ನೀರಾವರಿ ಯೋಜನೆ ನಿರ್ವಹಣೆ ಕೊರತೆಯಿಂದ ನೀರಿಲ್ಲದೇ ಸ್ಥಳೀಯ ರೈತರು ಮತ್ತಿತರರು ಪಡುತ್ತಿರುವ ಕಷ್ಟ ನಿವೇದಿಸಿಕೊಂಡು, ಯೋಜನೆಯ ಮರು ಪ್ರಯೋಜನ ಸ್ಥಳೀಯರಿಗೆ ಸಿಗುವಂತೆ ಅನುಕೂಲ ಕಲ್ಪಿಸಿಕೊಡುವಂತೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ವೈದ್ಯರೊಬ್ಬರನ್ನು ನೇಮಿಸುವಂತೆ ವಿನಂತಿಸಿಕೊಂಡರು.ಸನ್ಮಾನ ಸ್ವೀಕರಿಸಿ ಮತ್ತು ಸ್ಥಳೀಯ ಸಮಸ್ಯೆಯನ್ನು ಆಲಿಸಿ, ಮಾತನಾಡಿದ ಶಾಸಕ ಸತೀಶ ಸೈಲ್,ತಿಂಡಿ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳೋಣ.
ಅವಶ್ಯವಿದ್ದರೆ ಯೋಜನೆಯ ಸಾಧಕ ಪಾದಕಗಳ ಬಗ್ಗೆ ಖಾಸಗಿ ಅಧ್ಯಯನ ನಡೆಸಿ ತೀರ್ಮಾನಿಸೋಣ ಎಂದರಲ್ಲದೇ , ಏತ ನೀರಾವರಿ ಯೋಜನೆಯ ನಿರ್ವಹಣೆ ಕೊರತೆ ಸರಿಪಡಿಸಿ ಸ್ಥಳೀಯರಿಗೆ ನೀರು ಸರಬರಾಜು ಮಾಡುವದಾಗಿ ಭರವಸೆ ನೀಡಿದರು. ಮತ್ತು ಸ್ಥಳೀಯ ಗ್ರಾಮಸ್ಥರ ಬೇಡಿಕೆಯಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ವೈದ್ಯರ ನೇಮಕದ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಘಟಕ ಪ್ರಮುಖ ಗೋಪು ನಾಯಕ ಅಡ್ಲೂರ ಶಾಸಕರ ಜನಪರ ಕಾಳಜಿ ಕುರಿತು ಮೊಬೈಲ್ ರೆಕಾರ್ಡಿಂಗ್ ತೋರಿಸಿ, ಧ್ವನಿವರ್ಧಕದ ಮೂಲಕ ಜನರಿಗೆ ಕೇಳಿಸಿದರು. ರಾಘು ಕಾಕರಮಠ ನಿರೂಪಿಸಿದರು. ಗ್ರಾಮದ ಹಾಗೂ ಇತರೆ ಪ್ರಮುಖರು,ಸ್ಥಳೀಯ ನಾಗರಿಕರು, ಇತರರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ