ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನವೊಂದು (ಟಾಟ್ ಇಂಟ್ರಾ ) ಮರಕ್ಕೆ ಗುದ್ದಿಕೊಂಡ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಧಾರವಾಡ -ಬೆಳಗಾವಿ ರಾ.ಹೆ 48 ರ ಕಿತ್ತೂರು ವ್ಯಾಪ್ತಿಯಲ್ಲಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಪಂ.ವ್ಯಾಪ್ತಿಯ ಗಾಬಿತಕೇಣಿ ಯ ನಿವಾಸಿ, ಕ್ಲೀನರ್ ವೃತ್ತಿಯ, ಮನೋಹರ ದಶರಥ ಭೂತೆ (50) ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ.
ಗಾಬಿತಕೇಣಿಯ ರೋಷನ್ ಪ್ರಮೋದ ಭಟ್ (25) ಈತ ತಾನು ಚಲಾಯಿಸುತ್ತಿದ್ದ ಟಾಟಾ ಗೂಡ್ಸ ವಾಹನವನ್ನು (ಕೆ.ಎ 30-ಎ 4201 ) ರಾಷ್ಟೀಯ ಹೆದ್ದಾರಿ 48 ರಲ್ಲಿ ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು, ಕಿತ್ತೂರು ತಾಲೂಕಿನ, ದೇವರಶಿಗಿಹಳ್ಳಿ ಕ್ರಾಸ್ ಹತ್ತಿರ ತನ್ನ ವಾಹನ ಕಂಟ್ರೋಲ್ ಮಾಡದೇ, ರಸ್ತೆಯ ಎಡ ಬದಿಯ ಮರಕ್ಕೆ ಡಿಕ್ಕಿಪಡಿಸಿದ ಪರಿಣಾಮ, ವಾಹನದಲ್ಲಿದ್ದ ಕ್ಲೀನರ್ ಮನೋಹರ ಭೂತೆ ಈತನಿಗೆ ಭಾರೀ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಅಪಘಾತದ ರಭಸಕ್ಕೆ ವಾಹನ ನುಜ್ಜು ಗುಜ್ಜಾಗಿದ್ದು ಚಾಲಕ ರೋಶನ್ ಭಟ್ ಈತನಿಗೂ ಭಾರಿ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಕಿತ್ತೂರು ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನು ಕ್ರಮ ಕೈಗೊಂಡ ಪೊಲೀಸರು ಮೃತನ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಿದರು.
ಮೃತನ ಕುಟುಂಬಸ್ಥರು ಮತ್ತು ಸಂಬಂಧಿಗಳು ಅಂಕೋಲಾದಿಂದ ಕಿತ್ತೂರಿಗೆ ತೆರಳಿ, ಅಲ್ಲಿಂದ ಗಾಬಿತ ಕೇಣಿಗೆ ಮೃತ ದೇಹ ತಂದು, ಊರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಮೃತನಿಗೆ, ಪತ್ನಿ ಮತ್ತು ಒಬ್ಬ ಮಗ ಹಾಗೂ ಒಬ್ಬಳು ಮಗಳಿದ್ದು, ಮೃತನ ಕುಟುಂಬಸ್ಥರು ಹಾಗೂ ಊರಿನಲ್ಲಿ ಶೋಕದ ಛಾಯೆ ಕಂಡು ಬಂದಿದೆ.
ಸರಳ ವ್ಯಕ್ತಿತ್ವದ ಮನೋಹರ ಭೂತೆ ಆಕಾಲಿಕ ನಿಧನಕ್ಕೆ ಶಾಸಕ ಸತೀಶ್ ಸೈಲ್, ಉದ್ಯಮಿ ಸುರೇಶ ನಾಯಕ ಅಲಗೇರಿ, ಗಾಬಿತ ಕೇಣಿಯ ಪ್ರಮುಖರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತನ ಕುಟುಂಬಸ್ಥರು ಹಾಗೂ ಊರ ನಾಗರಿಕರು ಸೇರಿದಂತೆ ನೂರಾರು ಜನ ಅಂತಿಮ ದರ್ಶನ ಪಡೆದುಕೊಂಡರು. ಅಪಘಾತದ ಘಟನೆ ಕುರಿತಂತೆ ಮತ್ತಷ್ಟು ಹೆಚ್ಚಿನ ವಿವರ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ