ಕುಮಟಾ: ತಾಂಡವ ಕಲಾನಿಕೇತನ ಬೆಂಗಳೂರು ಹಾಗೂ ವೈಭವ ಸಮಿತಿ ಅರ್ಪಿಸುವ ಕುಮಟಾ ವೈಭವ 2023 ಕ್ಕೆ ಅದ್ದೂರಿಯಾದ ಚಾಲನೆ ದೊರೆತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ 5 ದಿನಗಳ ಕಾಲ ಕುಮಟಾದ ಮಣಕಿ ಮೈದಾನದಲ್ಲಿ ನಡೆಯಲಿರುವ ಕುಮಟಾ ವೈಭವದ ಮೊದಲನೆ ದಿನದ ಕಾರ್ಯಕ್ರಮವು ವಿಜೃಂಭಣೆಯಿoದ ಶುಭಾರಂಭಗೊoಡಿತು.
ಮೊದಲನೆ ದಿನದ ಸಭಾ ಕಾರ್ಯಕ್ರಮದ ಉದ್ಘಾನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ನಾಯ್ಕ ಅವರು ದೀಪ ಬೆಳಗುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಮಟಾ ವೈಭವದ ಮೂಲಕ ತಾಂಡವ ಕಲಾನಿಕೇತನ ಬೆಂಗಳೂರು ಇದರ ಅಧ್ಯಕ್ಷರಾದ ಮಂಜುನಾಥ ನಾಯ್ಕ ಅವರು ಕಲೆ, ಸಂಸ್ಕೃತಿ, ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯವಾದುದು. ಅದೇ ರೀತಿ ಇಂದು ಮೊದಲನೆ ದಿನದ ಉದ್ಘಾಟನೆ ಸಂದರ್ಭದಲ್ಲಿ ಸ್ಥಳೀಯ ಕಲೆಯಾದ ಸುಗ್ಗಿ ಕುಣಿತದ ಕಲಾವಿದರಿಂದ ಸ್ವಾಗತಿಸಿರುವುದು ಬಹಳ ಸಂತಸದ ಸಂಗತಿ. ಇಂತಹ ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ಏರ್ಪಡಿಸುವುದು ಅಷ್ಟು ಸುಲಭದ ಮಾತಲ್ಲವಾಗಿದ್ದು, ಎಲ್ಲವನ್ನು ಅತ್ಯಂತ ಅಚ್ಚುಕಟ್ಟಾಗಿ ರೂಪಿಸಲಾಗಿದೆ ಎನ್ನುತ್ತಾ ಕಾರ್ಯಕ್ರಮದ ಆಯೋಜನೆಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಕರ್ಣದ ಮಹಾಭಲೇಶ್ವರ ದೇವಾಲಯದ ಪ್ರದಾನ ಅರ್ಚಕರಾದ ರಾಜಗೋಪಾಲ ಅಡಿ ಅವರು ಮಾತನಾಡಿ, ಎಲ್ಲಾ ವಿಚಾರದಲ್ಲಿಯೂ ಕುಮಟಾ ತಾಲೂಕು ಮಧ್ಯವರ್ತಿ ಸ್ಥಳವಾಗಿದ್ದು, ಜೋತೆಗೆ ವಿವಿಧ ಕ್ಷೇತ್ರಗಳಿಗೆ ಸಾಕಷ್ಟು ಪ್ರತಿಭಾನ್ವಿತರನ್ನು ಕೊಡುಗೆಯಾಗಿ ನೀಡಿದ ತಾಲೂಕಾಗಿದೆ. ತಾಂಡವ ಕಲಾನಿಕೇತನ ಬೆಂಗಳೂರು ಈ ಒಂದು ಸಂಸ್ಥೆಯು ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೋತೆಗೆ ನಮ್ಮಲ್ಲಿನ ಆಗು ಹೋಗುಗಳ ಕುರಿತಾಗಿ ಚಿಂತನೆ ನಡೆಸುವತ್ತ ಸಾಗುತ್ತಿರುವುದು ಸಂತಸದ ವಿಷಯ ಎಂದರು.
ಈ ವೇಳೆ ಕುಮಟಾದ ಖ್ಯಾತ ವೈದ್ಯರು, ಬಿ.ಜೆ.ಪಿ ಮುಖಂಡರಾದ ಡಾ. ಜಿ.ಜಿ ಹೆಗಡೆ ಅವರು ಮಾತನಾಡಿ, ಕರ್ನಾಟಕದ ಕಾಶ್ಮಿರ ಎಂದು ಕರೆಯಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯು ತನ್ನದೇ ಆದ ವಿಶೇಷತೆಗಳಿಂದ ಸುಪ್ರಸಿದ್ದವಾಗಿದೆ. ಅದೇ ರೀತಿ ಕುಮಟಾ ತಾಲೂಕು ಸಹ ಜಿಲ್ಲೆಯ ವಿಶೇಷ ತಾಲೂಕಾಗಿದೆ. ಇಂತಹ ಕಾರ್ಯಕ್ರಮಗಳ ಆಯೋಜನೆಯು ಇನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಆ ಮೂಲಕ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರಯುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಂಡವ ಕಲಾನಿಕೇತನ ಇದರ ಅಧ್ಯಕ್ಷರಾದ ಮಂಜುನಾಥ ನಾಯ್ಕ, ಪ್ರಮುಖರಾದ ಸುಬ್ಬಯ್ಯ ನಾಯ್ಕ, ನರಸಿಂಹ ಭಟ್ ಕಡತೋಕಾ, ಡಾ. ಸುಮಲತಾ, ಗೋಕರ್ಣ ಗ್ರಾಮ ಪಂಚಾಯತ್ ಅದ್ಯಕ್ಷರಾದ ಸುಜಯ ಶೇಟ್, ಸಂತೋಷ ನಾಯ್ಕ, ಸೂರ್ಯಕಾಂತ ಗೌಡ, ಮುಂತಾದ ಅತಿಥಿಗಳು ಹಾಜರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಸುಗ್ಗಿ ಕುಣಿತ, ಯಕ್ಷಗಾನ, ಭರತನಾಟ್ಯ, ಗುಮ್ಮಟೆ ಪಾಂಗ ಹಾಗೂ ಕರ‍್ಸ್ ಕನ್ನಡದ ಕಲಾವಿದರಿಂದ ನಡೆದ ಎದೆತುಂಬಿ ಹಾಡುವೆನು ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ