Follow Us On

WhatsApp Group
Big News
Trending

ನನ್ನ ಜೀವ ಇರೋವರೆಗೂ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ, ಅಡ್ಜೆಸ್ಟ್ ಮೆಂಟ್ ರಾಜಕೀಯ ನನಗೆ ಬೇಡ :- ಅನಂತಮೂರ್ತಿ ಹೆಗಡೆ

ಶಿರಸಿ: ನಾನು ದೇಶಪಾಂಡೆ ಸಾಹೇಬರ ಅಭಿಮಾನಿ, ಅವರ ಬಗ್ಗೆ ಅಪಾರ ಗೌರವ ಇದೆ, ನಾನು ಅವರಲ್ಲಿ ನನ್ನ ಜಿಲ್ಲೆಯ ಜನರಿಗೆ ಮೆಡಿಕಲ್ ಕಾಲೇಜು – ಅಸ್ಪತ್ರೆ ಕೊಡಿಸಿ ಅಂತ ಮನವಿ ಮಾಡಿದ್ದೆ, ಅದಕ್ಕಾಗಿ ಜಿಲ್ಲಾ ಕಾಂಗ್ರೆಸ್ ನಾಯಕರು ನನ್ನ ಮೇಲೆ ವೈಯಕ್ತಿಕ ವಾಗ್ದಾಳಿ ಮಾಡುತ್ತಿರುವುದು ಸರಿಯೇ ಎಂದು ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರ ಹೇಳಿಕೆಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ದೇಶಪಾಂಡೆ ಸಾಹೇಬರು ಸುಮಾರು 30 -40 ವರ್ಷ ನಮ್ಮ ಜಿಲ್ಲೆಯನ್ನು ಆಳಿದ್ದಾರೆ, ಇವತ್ತಿಗೂ ಒಂದೂ ಮೆಡಿಕಲ್ ಕಾಲೇಜು – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ, ಒಂದೇ ಒಂದು ಫ್ಯಾಕ್ಟರಿ ಇಲ್ಲ ಎಂಬುದಾಗಿ ನನ್ನ ಜಿಲ್ಲೆ ಜನರ ನೋವನ್ನ ವ್ಯಕ್ತಪಡಿಸಿದ್ದೇನೆ ಅಷ್ಟೇ. ನೀವು ಕೂಡ ಈ ಮಣ್ಣಿನ ಮಕ್ಕಳೆ, ನಿಮ್ಮ ಕುಟುಂಬ ಕೂಡ ಊರಲ್ಲಿ ಇದೆ, ನಿಮ್ಮ ಅಪ್ಪ – ಅಮ್ಮ, ಅಕ್ಕ ತಂಗಿಯರಿಗೆ ಖಾಯಿಲೆ ಬಂದರೆ ಎಲ್ಲಿ ಹೋಗುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಸಾಹೇಬರ , ಮೊಮ್ಮಕ್ಕಳಿಗೆ ಇರುವ ತಿಳುವಳಿಕೆ ನಿಂಗಿಲ್ಲ ಎಂದು ನನ್ನನ್ನ ನಿಂದಿಸುತ್ತೀರಿ, ಇರ್ಲಿ ಬಿಡಿ ನಾವು ಬಡವರ ಮನೆ ಮಕ್ಕಳು ನಮಗೆಲ್ಲಿ ಬರಬೇಕು ಅವರ ಜ್ಞಾನ, ನಾನು ಕಂಡಿರುವುದು ಬಡವರ ಕಣ್ಣೀರು, ವಯಸ್ಸಾದ ತಂದೆ – ತಾಯಿಗೆ ಚಿಕಿತ್ಸೆ ಸಿಗದೆ ಅವರು ಪಡುವ ದುಃಖ, ನಮ್ಮ ಊರಿನ ಮಕ್ಕಳು ಬೇರೆ ಊರಿಗೆ ಹೋಗಿ ಪಡುವ ಕಷ್ಟ, ಅವಮಾನ. ಆದರೆ ಬಡವರ ಕಣ್ಣೀರು ಒರೆಸುವುದು ಹೇಗೆ ಎನ್ನುವ ಜ್ಞಾನ ನನಗೆ ಖಂಡಿತವಾಗಿ ಇದೆ.

ನಾನು ದೇಶಪಾಂಡೆ ಅವರಲ್ಲಿ ಆಸ್ಪತ್ರೆ ಮಾಡಿಸಿ ಎನ್ನುವ ವಿನಂತಿ ಮಾಡಿದ್ದಕ್ಕೆ ನನ್ನ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವ ನೀವು, ನಮ್ಮ ಜಿಲ್ಲೆಯ ಜ್ವಲಂತ ಸಮಸ್ಯೆಗಾಗಿ ಹಿಂದೆ ಪತ್ರಿಕಾಗೋಷ್ಠಿ ನೀವು ಯಾಕೆ ಮಾಡಲಿಲ್ಲ? ಇದು ಅಡ್ಜೆಸ್ಟ್ ಮೆಂಟ್ ರಾಜಕೀಯ ಅಲ್ಲವೇ? ಇಂತಹ ರಾಜಕೀಯದಿಂದಲೇ ನಮ್ಮ ಜಿಲ್ಲೆ ಹಿಂದುಳಿದಿದೆ. ವಿರೋಧ ಪಕ್ಷದವರು, ಆಡಳಿತ ಪಕ್ಷದರು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ನನ್ನ ಬಗ್ಗೆ ಎಷ್ಟು ಬೇಕಾದರೂ ವೈಯಕ್ತಿಕ ನಿಂದನೆ ಮಾಡಿ, ನನ್ನಲ್ಲಿ ಎದುರಿಸುವ ಶಕ್ತಿ ಇದೆ.

ಆದರೆ ನಮ್ಮ ಜಿಲ್ಲೆಯಲ್ಲಿ ಆಸ್ಪತ್ರೆ ಇಲ್ಲ. ಅದಕ್ಕಾಗಿ ಹೋರಾಟ ಮಾಡೋಣ ಅಂತ ಒಂದೇ ಒಂದೂ ಮಾತೂ ಹೇಳಿಲ್ಲ, ಈಗ ನಿಮ್ಮದೇ ಸರ್ಕಾರ ಇದೆ. ನೀವು ಹೋರಾಟ ಮಾಡಿ ನಾವು ಹೋಗಿ ಒತ್ತಡ ಹಾಕುತ್ತೇವೆ ಎಂಬ ಮಾತೂ ಇಲ್ಲ. ಒಂದೇ ಒಂದೂ ಫ್ಯಾಕ್ಟರಿ ನಮ್ಮ ಊರಲ್ಲಿ ಇಲ್ಲ. ಅದಕ್ಕಾಗಿ ಕನಿಷ್ಠ ಕನಿಕರ ಕೂಡ ನಿಮಗೆ ಇಲ್ಲವಲ್ಲ ಎಂದ ಅವರು ಜಿಲ್ಲೆ ಎಲ್ಲ ರೀತಿಯಲ್ಲೂ ಬಹಳ ಅಭಿವೃದ್ಧಿ ಆಗಿದೆ. ಒಮ್ಮೆ ಜಿಲ್ಲೇಯ ಪ್ರವಾಸ ಮಾಡಿ ಎನ್ನುವ ನಿಮಗೆ ಜಿಲ್ಲೆಯ ಸಮಸ್ಯೆ ಕುರಿತು ಅರಿವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಫ್ಯಾಕ್ಟರಿ ಯಾಕೆ ಆಗಿಲ್ಲ ಎಂದರೆ ಇಡೀ ಜಿಲ್ಲೆಯಲ್ಲಿ ಜಾಗವೇ ಇಲ್ಲ ಏನ್ನುತ್ತೀರಿ, ಹಿರೆಗುತ್ತಿಯಲ್ಲಿ 1800 ಏಕರೆ ಜಾಗ ಇದೆ KIADB ಜಾಗ ಅನಾಥವಾಗಿ ಇರುವುದು ಗೊತ್ತಿಲ್ಲವೆ?, ಮೂರೂರು ಗುಡ್ಡ 5000 ಎಕರೆ ಇದೆ , ದಿವಗಿ ಗುಡ್ಡ 500 ಎಕರೆ ಇದೆ , ಕಂದಾಯ ಭೂಮಿ ಕೊಟ್ಟರೆ ಫಾರೆಸ್ಟ್ ಇಲಾಖೆಯವರು ಬದಲಾಯಿಸಿ ಕೊಡುತ್ತಾರೆ, ಒಂದು ಎಕರೆ ಜಾಗದ ಗಾರ್ಮೆಂಟ್ ಫ್ಯಾಕ್ಟರಿ ಯಲ್ಲಿ 500 ಜನರಿಗೆ ಉದ್ಯೋಗ ಕೊಡಬಹುದು , ಶಿರಸಿ ಭಾಗದಲ್ಲಿ 5 ರಿಂದ 10 ಎಕರೆ ಫ್ಯಾಕ್ಟರಿ ಮಾಡುವ ಜಾಗ ಬಹಳಷ್ಟಿದೆ, ಮಾಡಿದ್ದರೆ ನಮ್ಮ ಮನೆ ಮಕ್ಕಳಿಗೆ ಉದ್ಯೋಗ ಸಿಗುತ್ತಿತ್ತಲ್ಲವೆ?ಎಲ್ಲಿಯೂ ಜಾಗದ ಕೊರತೆ ಇಲ್ಲ , ಇಚ್ಛಾ ಶಕ್ತಿ ಕೊರತೆ ಅಷ್ಟೇ ಎಂದರು

ಮಂಗಳೂರಿನ K S ಹೆಗ್ಡೆ ಆಸ್ಪತ್ರೆಗೆ ವಿಶೇಷ ಬಸ್ ಬಿಡುವುದು ಅಭಿವೃದ್ಧಿಯೇ?

ನಮ್ಮ ಊರಲ್ಲಿ ಅಸ್ಪತ್ರೆ ಕಟ್ಟುವುದು ಅಭಿವೃದ್ಧಿಯೇ? ಯೋಚಿಸಿ. ಅಭಿವೃದ್ಧಿ ನೋಡಲು ನನಗೆ ಪ್ರವಾಸ ಮಾಡಿ ಎನ್ನುತ್ತೀರಿ, ಪ್ರವಾಸ ಯಾಕೆ ಸ್ವಾಮಿ, ನಿಮ್ಮ ಕಚೇರಿಯ ಮುಂದಿರುವ ‘ನೆಮ್ಮದಿ ಕುಟೀರ ‘ಕ್ಕೆ ಒಮ್ಮೆ ಹೋಗಿ ಸಾಕು. ಪ್ರತಿನಿತ್ಯ ಬರುವ ಹೆಣಗಳನ್ನ ನೋಡಿ, 20 ರಿಂದ 30 ವರ್ಷದ ಯುವಕರು ವಾಹನ ಅಪಘಾತ ಆಗಿ ಸರಿಯಾಗಿ ಚಿಕಿತ್ಸೆ ಸಿಗದೆ, ಇನ್ನೂ ಕೆಲವರು ಹೃದಯಾಘಾತ ಆಗಿ 5 ಘಂಟೆ ಪ್ರಯಾಣ ಮಾಡಲಾಗದೆ ಸಾಯುತ್ತಿದ್ದಾರೆ, ತಾವು ಆ ಅಭಿವೃದ್ಧಿ ಯನ್ನ್ ಕಣ್ಣಾರೆ ನೋಡಬಹುದು.

ಇತ್ತೀಚೆಗೆ ಯಡಳ್ಳಿ ರಿಕ್ಷಾ ಚಾಲಕ ಕುಟುಂಬ ಅಪಘಾತ ಆದಾಗ ಶಿರಸಿಯಲ್ಲಿ ಚಿಕಿತ್ಸೆ ನೀಡದೆ ಹುಬ್ಬಳ್ಳಿಗೆ ಕಳಿಸಿದ್ದಾರೆ, ಆ ತಾಯಿಗೆ 2 ಘಂಟೆ ಒಳಗಾಗಿ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದಳು, ನಾನು ಆ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದೇನೆ, ಆ ತಾಯಿಯ ಶರೀರ ಬೆಂಕಿಯಲ್ಲಿ ಸುಡುವಾಗ ನನ್ನ ರಕ್ತ ಕುದಿಯಲು ಪ್ರಾರಂಭಿಸಿತು.

ನನ್ನ ಜಿಲ್ಲೆಯಲ್ಲಿ ಒಂದೂ ಸರಿಯಾದ ಅಸ್ಪತ್ರೆ ಇಲ್ಲ ಎಂದು ಕಣ್ಣೀರು ಬಂತು, ನಾನು ಶಪಥ ಮಾಡಿದ್ದೇನೆ. ನನ್ನ ಜಿಲ್ಲೆಗೆ ಸರಿಯಾದ ಅಸ್ಪತ್ರೆ -ಮೆಡಿಕಲ್ ಕಾಲೇಜು ಆಗೋವರೆಗೂ ಹೊರಾಡುತ್ತೇನೆ ಮತ್ತು ನನ್ನ ಕೊನೆ ಉಸಿರು ಇರೋ ವರೆಗೂ ಹೋರಾಡುತ್ತೇನೆ. ಕಾಲ ಬದಲಾಗಿದೆ ಸ್ವಾಮಿ, ಆರೋಪ – ಪ್ರತ್ಯಾರೋಪ ನಾವುಗಳು ಮಾಡಿಕೊಂಡರೆ ಏನೂ ಪ್ರಯೋಜನ ಇಲ್ಲ, ಸಾಧನೆ ಮಾಡಬೇಕು, ನನಗೆ ಸ್ಪಷ್ಟವಾದ ಗುರಿ ಇದೆ , ಗುರುವಿನ ಆಶೀರ್ವಾದ ಇದೆ, ಸಾಧನೆ ಮಾಡೆ ಮಾಡುತ್ತೇನೆ ಎಂದರು

ನಾನು ಶ್ರೀ ದೀಪಕ್ ದೊಡ್ಡುರ್ ರವರಲ್ಲಿ ಕೈ ಮುಗಿದು ಕೇಳುತ್ತೇನೆ, ನಿಮಗೆ ದೇಶಪಾಂಡೆಯವರು ಬಹಳ ಆತ್ಮೀಯರು, ನೀವು ಹೇಳಿದರೆ ಕೇಳುತ್ತಾರೆ, ಒಂದು ಸಹಾಯ ಕೇಳಿ ಅವರಲ್ಲಿ ಅಸ್ಪತ್ರೆಗಾಗಿ ಸ್ವಂತ ಹಣ ಖರ್ಚು ಮಾಡಲು ಇಷ್ಟ ಇಲ್ಲ ಅಂದರೆ ಬಿಡಿ, ಅವರಿಗೆ ನಮ್ಮ ಜಿಲ್ಲೆ ಅಧಿಕಾರ, ಅಸ್ತಿತ್ವ ಎಲ್ಲ ಕೊಟ್ಟಿದೆ ಅಲ್ಲವೇ? ದೇಶಪಾಂಡೆ ಸಾಹೇಬರಿಗೆ ನಮ್ಮ ದೇಶದ ಅಂಬಾನಿ, ಅದಾನಿಯಿಂದ ಹಿಡಿದು ಇನ್ಫೋಸಿಸ್ ಸಂಸ್ಥೆಯ ಮಾಲೀಕರ ವರೆಗೆ ಎಲ್ಲರೂ ಸ್ನೇಹಿತರೇ, ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಶಿರಸಿ ಮೂಲದ ಶ್ರೀ ನಂದನ್ ನೀಲೇಕಣಿಯವರು ಮುಂಬಯಿ I I T ಗೆ 340 ಕೋಟಿ ರೂಪಾಯಿ ದಾನ ಮಾಡಿದ್ದಾರೆ ನಾವೆಲ್ಲ ಪತ್ರಿಕೆಯಲ್ಲಿ ಓದಿದ್ದೇವೆ, ಹೀಗೆ ಎಲ್ಲ ಕಂಪನಿಯಯಲ್ಲಿ CSR ಪಂಡ್ 2 % ಇರತ್ತೆ. ಅದನ್ನು ಪ್ರತೀ ವರ್ಷ ದಾನ ಮಾಡುತ್ತಿರುತ್ತಾರೆ, ಮಾಡಲೇ ಬೇಕು , ದೇಶಪಾಂಡೆ ಯವರು ಒಂದು ಮಾತನ್ನು ಇಬ್ಬರು ಸ್ನೇಹಿತರಿಗೆ ಹೇಳಿದರೆ 500 ಕೋಟಿ ಹಣ ಒಂದು ತಿಂಗಳಲ್ಲಿ ಸಂಗ್ರಹ ಆಗುತ್ತದೆ. ಸಾಹೇಬರ ಸ್ನೇಹಿತರು ತೆರಿಗೆ ಕಟ್ಟುವ ಹಣ ನಮಗೆ ಕೊಟ್ಟರೆ ನಾವೂ ಸ್ವಾಭಿಮಾನ ದಿಂದ ನಿಟ್ಟೆ K S ಹೆಗ್ಡೆ ತರಹ ಅಸ್ಪತ್ರೆ ನಿರ್ಮಿಸಿ ಸ್ವಾಭಿಮಾನಿಯಾಗಿ ಬದುಕೋಣ, ನಿಮ್ಮ ಕುಟುಂಬ, ಬಂಧು ಬಳಗ ಇಲ್ಲಿದೆ ಎಂಬುದನ್ನ ಮರೀಬೇಡಿ, ಹೇಗಾದರೂ ಮಾಡಿ ಒಂದು ಒಳ್ಳೆಯ ಅಸ್ಪತ್ರೆ ನಿರ್ಮಿಸಿದರೆ ಎಲ್ಲರಗೂ ಸಹಾಯ ಆಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button