Important
Trending

ವಾಹನ ಬಡಿದು ಮಹಿಳೆ ದುರ್ಮರಣ: ನಿದ್ದೆ ಮಂಪರಿನಲ್ಲಿ ಅಪಘಾತ ಪಡಿಸಿದನೇ ಚಾಲಕ ?

ಅಂಕೋಲಾ : ಸಂಕ್ರಾಂತಿ ಹಬ್ಬದ ದಿನದಂದೇ ಭೀಕರ ಹೆದ್ದಾರಿ ಅಪಘಾತ ಸಂಭವಿಸಿದ್ದು, ಪಾದಾಚಾರಿ ಮಹಿಳೆಯೋರ್ವಳಿಗೆ ಗೂಡ್ಸ್ ರಿಕ್ಷಾ ಬಡಿದ ಪರಿಣಾಮ , ಮಹಿಳೆ ಹೆದ್ದಾರಿ ಅಂಚಿಗೆ ಸಿಡಿದು ಬಿದ್ದು ಮೃತ ಪಟ್ಟ ಘಟನೆ ಅಂಕೋಲಾದಲ್ಲಿ ಸಂಭವಿಸಿದೆ. ರಾ. ಹೆ. 66 ರ ಕೋಟೆವಾಡಾ ಮುಕ್ರಿಧಾಮ ಕಾಂಪೌಂಡಿಗೆ ಹೊಂದಿಕೊಂಡಿರುವ, ಸ್ಥಳೀಯರು ಲಿಂಬು ಚಾಳ ಎಂದು ಕರೆಯುವ ಪ್ರದೇಶದ ಎದುರುಗಡೆ ಈ ರಸ್ತೆ ಅಪಘಾತ ಸಂಭವಿಸಿದೆ. ಕಾರವಾರದಿಂದ ಹೊನ್ನಾವರದ ಕಾಸರಗೋಡ ಟೊಂಕಾ ಪ್ರದೇಶದ ಕಾರ್ಯಕ್ರಮಕ್ಕೆ ಸೌಂಡ್ ಮತ್ತು ಲೈಟಿಂಗ್ ಸಿಸ್ಟಮ್ ಹೊತ್ತೊಯ್ದಿದ್ದ ಟಾಟಾ ಎಸ್ ಗೋಲ್ಡ್ ರಿಕ್ಷಾ ವಾಹನ ಚಾಲಕ, ರಾತ್ರಿ ಕಾರ್ಯಕ್ರಮ ಮುಗಿಸಿ ನಸುಕಿನ ಜಾವ ಕಾರವಾರಕ್ಕೆ ಮರಳುತ್ತಿದ್ದಾಗ ದಾರಿಮಧ್ಯೆ ಅಂಕೋಲಾದಲ್ಲಿ ಚಾಲಕನ ಅರೆ ಮಂಪರು ನಿದ್ದೆಯಿಂದ ಈ ದುರ್ಘಟನೆ ಸಂಭವಿಸಿರಬಹುದು ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಪಾದಾಚಾರಿ ಮಹಿಳೆ ಹೆದ್ದಾರಿ ಅಂಚಿನ ನೀರು ಸಾಗಲು ಅಳವಡಿಸಿದ ಕಚ್ಚಾ ಮೋರಿ (ಪೈಪ್ ಅಳವಡಿಕೆ ) ಬಳಿ ಸಿಡಿದು ಬಿದ್ದು ಮೂಗು ಮತ್ತಿತರೆಡೆ ಗಂಭೀರ ಗಾಯ -ನೋವುಗೊಂಡು ರಕ್ತಸ್ರಾವದೊಂದಿಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಮಹಿಳೆ ವಾಯು ವಿಹಾರಕ್ಕೆ ( ವಾಕಿಂಗ್ ) ಹೋಗುತ್ತಿದ್ದ ವೇಳೆ ಜವರಾಯನಂತೆ ಬಂದ ಗೂಡ್ಸ್ ರಿಕ್ಷಾ ಜೋರಾಗಿ ಬಡಿದ ಪರಿಣಾಮ ಹಬ್ಬದ ದಿನ ಮಹಿಳೆ ಶವವಾಗಿ ಮನೆಗೆ ಮರಳುವಂತಾಗಿರುವುದು ದುರ್ವಿಧಿಯೇ ಸರಿ.

ಮಹಿಳೆ ಧರಿಸಿದ್ದ ನೀಲಿ ಬಣ್ಣದ ಶೂ ಹೆದ್ದಾರಿ ಅಂಚಿನಲ್ಲೇ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಬೆಳಿಗ್ಗೆ 9-30 ರ ವರೆಗೂ ಮೃತ ಮಹಿಳೆ ಗುರುತು ಪತ್ತೆಯಾಗಿರಲಿಲ್ಲ . ನಂತರ ಅವಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ, ದಿನಕರ ದೇಸಾಯಿ ರಸ್ತೆಗೆ ಹೊಂದಿಕೊಂಡಿರುವ, ಸಪ್ನಾ ಹೊಟೇಲ್ ಹಿಂಬದಿ ಮಂಜುಶಾ ನಿಲಯದಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ತಂದೆ ಗೋವಿಂದ ನಾಯಕ, ಯಾನೆ ಲಕ್ಷ್ಮೀ ರಮೇಶ ನಾಯಕ (65) ಎಂದು ಗುರುತಿಸಲಾಗಿದೆ.. ಮೃತ ದೇಹವನ್ನು ತಾಲೂಕು ಆಸ್ಪತ್ರೆ ಶವಗಾರದಲ್ಲಿಟ್ಟು ಪೋಲೀಸರು ಕಾನೂನು ಕ್ರಮ ಮುಂದುವರೆಸಿದ್ದಾರೆ., ಹೆದ್ದಾರಿ ಅಪಘಾತ ಘಟನೆ ಕುರಿತಂತೆ ಪೊಲೀಸರಿಂದ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button