Important
Trending

ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿಗಳ ಇನ್ಶುರೆನ್ಸ್ ಸೌಲಭ್ಯ, ಸನ್ಮಾನ ಕಾರ್ಯಕ್ರಮ ಮತ್ತು ಔತಣಕೂಟ : ಅನಂತಮೂರ್ತಿ ಹೆಗಡೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತ ಮೂರ್ತಿ ಹೆಗಡೆ ಯವರು ಹಲವಾರು ಸಾಮಾಜಿಕ ಕಾರ್ಯ, ಶಾಲೆಗಳಿಗೆ, ಬಸ್ ಸ್ಟ್ಯಾಂಡ್, ಅಸ್ಪತ್ರೆ ಗಳಿಗೆ ಶುದ್ಧ ಕುಡಿಯುವ ನೀರು ಘಟಕ, ಜಿಲ್ಲೆ ರಿಕ್ಷಾ ಚಾಲಕರಿಗೆ ಸಮವಸ್ತ್ರ ಪಾಸಿಂಗ್ ಯೋಜನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ಮೆಡಿಕಲ್ ಕಾಲೇಜು ಸಲುವಾಗಿ ಹೋರಾಟ ದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆ ಮಾತಾಗಿರುವ ಅನಂತ ಮೂರ್ತಿ ಹೆಗಡೆ ಯವರು ಈಗ ಜಿಲ್ಲೆಯ ಕೊನೆ ಗೌಡರ ಸೇವೆ ಹೊಸ ಯೋಜನೆ ಪ್ರಾರಂಭಿಸುತ್ತಿದ್ದಾರೆ

ಅಡಿಕೆಯು ಬೆಳೆ ನಮ್ಮ ಜಿಲ್ಲೆಯ ಜೀವನಾಡಿ, ಕೊನೆ ಗೌಡರು ಕೊನೆ ಕೊಯ್ಯುವಾಗ, ಮದ್ದನ್ನು ಸಿಂಪಡಿಸುವಾಗ, ಮರದಿಂದ ಬಿದ್ದು ಪ್ರಾಣಕಳೆದುಕೊಳ್ಳುತ್ತಿರುವ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಇಂಥಾ ಸೇವಕರ ರಕ್ಷಣೆಗೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅನಾಹುತವನ್ನು ತಡೆಯುವುದು ಅಸಾಧ್ಯವಾದರೂ, ಅದರ ಪರಿಣಾಮವನ್ನು ಸಾಧ್ಯವದಷ್ಟು ಸಹ್ಯ ಮಾಡುವುದು ನನ್ನ ಉದ್ದೇಶವಾಗಿದೆ.

ಅನಂತಮೂರ್ತಿ ಹೆಗಡೆ ಟ್ರಸ್ಟ್ ವತಿಯಿಂದ, “ಇಂಡಿಯನ್ ಪೋಸ್ಟ್ ಆಫೀಸ್” ನ ಯೋಜನೆಯಾದ “ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಪಾಲಿಸಿ”ಯನ್ನು ಎಲ್ಲ ಕೊನೆಗೌಡರಿಗೂ ಮಾಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಈ ಆಕ್ಸಿಡೆಂಟ್ ಗಾರ್ಡ್ ಪಾಲಿಸಿಯು, ಅಪಘಾತದಿಂದ ಮರಣ /ಶಾಶ್ವತ ಅಂಗವೈಕಲ್ಯ /ಭಾಗಶಃ ಅಂಗವೈಕಲ್ಯಕ್ಕೆ 10,00,000 ರೂಪಾಯಿಗಳ ಕವರೇಜ್ ಹೊಂದಿದೆ. ಮತ್ತು ಈ ಪಾಲಿಸಿಯಡಿಯಲ್ಲಿ ರೂ 60,000 ವರೆಗೆ ಒಳರೋಗಿ ವೆಚ್ಚ, ರೂ 30,000 ವರೆಗೆ ಹೊರರೋಗಿ ವೆಚ್ಚ, 10 ದಿನಗಳವರೆಗೆ ರೂ 1,000 ದೈನಂದಿನ ಆಸ್ಪತ್ರೆ ನಗದು ನೆರವು, ಮೃತರ 2 ಮಕ್ಕಳಿಗೆ 1 ಲಕ್ಷ ರೂಪಾಯಿ ಶೈಕ್ಷಣಿಕ ನೆರವು, ರೂ 25,000 ವರೆಗೆ ಕುಟುಂಬ ಸಾರಿಗೆ ಪ್ರಯೋಜನ ಮತ್ತು ರೂ 5000 ವರೆಗೆ ಅಂತಿಮ ಸಂಸ್ಕಾರದ ನೆರವಿನ ಸೌಲಭ್ಯವನ್ನು ಹೊಂದಿದೆ. ಜಿಲ್ಲೆಯಾದ್ಯಂತ ಎಲ್ಲ ಕೊನೆಗೌಡರಿಗೆ ಈ ಪಾಲಿಸಿಯನ್ನು ಮಾಡಿಸುವ ಸಂಕಲ್ಪ ಮಾಡಿದ್ದೇನೆ.

ನಮ್ಮ ಸಂಸ್ಥೆ, ಜಿಲ್ಲೆಯ ಎಲ್ಲ ಸಹಕಾರಿ ಸೇವಾ ಸಂಘ ಮತ್ತು ಪಂಚಾಯತಿಗಳಿಗೆ ತಲುಪಿ, ಸ್ಥಳೀಯ ಕೊನೆಗೌಡರ ವಿವರಗಳನ್ನು ಸಂಗ್ರಹಿಸಿ ಕೊಡುವಂತೆ ಮನವಿಯನ್ನು ಸಲ್ಲಿಸುತ್ತದೆ. ಜಿಲ್ಲೆಯ ಅಡಿಕೆ ತೋಟದ ಮಾಲೀಕರು, ನಿಮ್ಮ ಮನೆಗೆ ಬರುವ ಕೊನೆಗೌಡರಿಗೆ ಈ ಸೌಲಭ್ಯದ ವಿಚಾರವನ್ನು ತಿಳಿಸಿ, ಅವರ ವಿವರಗಳನ್ನು ಸ್ಥಳೀಯ ಪಂಚಾಯತಿ ಅಥವಾ ಸೇವಾಸಹಕಾರಿ ಸಂಘಕ್ಕೆ ತಲುಪಿಸಬೇಕಾಗಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ.

ನಂತರ ನಮ್ಮ ಸಂಸ್ಥೆಯ ಸಿಬ್ಬಂದಿ ಮತ್ತು ಪೋಸ್ಟ್ ಆಫೀಸ್ ಸಿಬ್ಬಂದಿಗಳು ಅಲ್ಲಿಗೆ ಬಂದು, ಸಂಗ್ರಹಿಸಿದ ವಿವರಗಳನ್ನು ಸ್ವೀಕರಿಸಿ, ಪಾಲಿಸಿಯನ್ನು ಮಾಡಿಸುತ್ತಾರೆ. ಪಾಲಿಸಿ ಬಾಂಡ್ ಬಂದ ನಂತರ, ಎಲ್ಲ ಕೊನೆಗೌಡರಿಗೆ, ಔತಣಕೂಟ ಏರ್ಪಡಿಸಿ, ಗೌರವಿಸಿ, ಪಾಲಿಸಿ ಬಾಂಡನ್ನು ಹಸ್ತಾಂತರಿಸುತ್ತೇವೆ. ಮತ್ತು, ದಶಕಗಳಿಂದ ಸೇವೆ ಸಲ್ಲಿಸಿರುವ, ಹಿರಿಯ ಕೊನೆಗೌಡರನ್ನು ಗುರುತಿಸಿ, ಅವರ ಜೀವಮಾನದ ಸಾಧನೆಗಾಗಿ, ಸನ್ಮಾನ ಕಾರ್ಯಕ್ರಮವನ್ನೂ ನಡೆಸಲಿದ್ದೇವೆ ಎಂದು ಅನಂತಮೂರ್ತಿ ಹೆಗಡೆಯವರು ಪ್ರಕಟಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button